ಕಲಬುರಗಿ: ರಾಜ್ಯ ಸರ್ಕಾರ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕಾಂತರಾಜ್ ಆಯೋಗದ ವರದಿಯನ್ನು ಸ್ವೀಕರಿಸಿದ್ದು ಸ್ವಾಗತಾರ್ಹ ನಡೆಯಾಗಿದ್ದು, ಮುಂಬರುವ ಸಚಿವ ಸಂಪುಟ ಸಭೆಯಲ್ಲಿ ಶಿಫಾರಸುಗಳನ್ನು ಅನುಷ್ಠಾನಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಮಹಾಂತೇಶ್ ಎಸ್. ಕೌಲಗಿ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ 2015ರಲ್ಲಿ ಎಲ್ಲ ಜಾತಿ ಜನಾಂಗದವರ ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ, ಕೌಟುಂಬಿಕ, ಮೀಸಲಾತಿ, ರಾಜಕೀಯ ಹೀಗೆ ಸುಮಾರು 55 ಅಂಶಗಳನ್ನು ಒಳಗೊಂಡ ಪ್ರಶ್ನಾವಳಿಯನ್ನು ರಚಿಸಿಕೊಂಡು ಎಚ್.ಕಾಂತರಾಜ್ ಅವರ ನೇತೃತ್ವದ ಆಯೋಗ ಸುಮಾರು 162 ಕೋಟಿ ಖರ್ಚು ಮಾಡಿ. ಒಂದು ಲಕ್ಷ ಮೂವತ್ತು ಸಾವಿರ ಗಣತಿದಾರರು 1.27 ಕೋಟಿ ಮನೆಗಳಿಗೆ ಭೇಟಿ ನೀಡಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ವರದಿಯನ್ನು ತಯಾರಿಸಿದ್ದರು. ಅದನ್ನು ಸರ್ಕಾರ ಸ್ವೀಕರಿಸಿದೆ. ಅದಕ್ಕಾಗಿ ಸಿದ್ದರಾಮಯ್ಯ ಸರ್ಕಾರ ಅಭಿನಂದನಾರ್ಹ. ವಿಳಂಬ ಮಾಡದೇ ಶಿಫಾರಸುಗಳನ್ನು ಜಾರಿಗೆ ತರುವ ಹೊಣೆಯೂ ಸರ್ಕಾರದ ಮೇಲಿದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.