ADVERTISEMENT

ಪ್ರವಾಹಕ್ಕೆ ಹಳ್ಳದಲ್ಲಿನ ಬಾವಿ ಮುಳುಗಡೆ

ಹಿತ್ತಲ ಶಿರೂರು ಜನರ ಕುಡಿಯುವ ನೀರಿನ ಸಂಕಟ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2020, 3:21 IST
Last Updated 19 ಅಕ್ಟೋಬರ್ 2020, 3:21 IST
ಆಳಂದ ತಾಲ್ಲೂಕಿನ ಹಿತ್ತಲ ಶಿರೂರು ಗ್ರಾಮದ ಕುಡಿಯುವ ನೀರಿನ ಬಾವಿ ಅತಿವೃಷ್ಟಿಗೆ ಮುಳುಗಡೆಯಾದ ದೃಶ್ಯ
ಆಳಂದ ತಾಲ್ಲೂಕಿನ ಹಿತ್ತಲ ಶಿರೂರು ಗ್ರಾಮದ ಕುಡಿಯುವ ನೀರಿನ ಬಾವಿ ಅತಿವೃಷ್ಟಿಗೆ ಮುಳುಗಡೆಯಾದ ದೃಶ್ಯ   

ಆಳಂದ: ತಾಲ್ಲೂಕಿನ ಹಿತ್ತಲ ಶಿರೂರು ಗ್ರಾಮಸ್ಥರು ಪ್ರವಾಹದ ಹೊಡೆತಕ್ಕೆ ಕುಡಿಯುವ ನೀರಿಗಾಗಿ ಸಂಕಟಪಡುವ ಸ್ಥಿತಿ ನಿರ್ಮಾಣವಾಗಿದೆ.

ಗ್ರಾಮಸ್ಥರ ಕುಡಿಯುವ ನೀರಿನ ಮೂಲವಾದ ಬಾವಿಯು ಹಳ್ಳದಲ್ಲಿದೆ. ಅಮರ್ಜಾ ನದಿ ಪಾತ್ರದಲ್ಲಿ ಬರುವ ಈ ಹಳ್ಳವು ಭರ್ತಿಯಾಗಿ ಗ್ರಾಮದವರೆಗೆ ನೀರು ನುಗ್ಗಿದೆ. ಇದರ ಪರಿಣಾಮ ಕುಡಿಯುವ ನೀರಿನ ಬಾವಿಯ ಸುತ್ತ ಮುಳ್ಳು ಕಂಟಿ, ಕಲ್ಲುಮರಳು ತುಂಬಿಕೊಂಡಿವೆ.

ಬಾವಿಯ ನೀರು ಸರಬರಾಜಿನ ಮೋಟಾರ್, ಪೈಪ್‌ಲೈನ್‌ ಸಹ ಹಾಳಾಗಿದೆ. ಅಂದಾಜು 2,300 ಜನಸಂಖ್ಯೆಯುಳ್ಳ ಹಿತ್ತಲ ಶಿರೂರು ಗ್ರಾಮದಲ್ಲಿ ಕೊಳವೆ ಬಾವಿ ಇದ್ದರೂ ಅದರ ನೀರು ಕುಡಿಯಲು ಯೋಗ್ಯವಿಲ್ಲ. ಇದರಿಂದ ಗ್ರಾಮ ಸೇರಿದಂತೆ ಹೊಸ ಬಡವಾಣೆಯ ನಿವಾಸಿಗಳು ಸಹ ಕುಡಿಯುವ ನೀರಿಗೆ ಹಳ್ಳದಲ್ಲಿರುವ ಬಾವಿಯನ್ನು ಅವಲಂಬಿಸಿದ್ದಾರೆ.

ADVERTISEMENT

ಹಳ್ಳದ ದಂಡೆಯಲ್ಲಿ ಈ ಗ್ರಾಮವಿದೆ. ಸುತ್ತಲಿನ ಹೊಲಗದ್ದೆಗಳಿಗೂ ಅಪಾರ ಪ್ರಮಾಣದಲ್ಲಿ ನೀರು ನುಗ್ಗಿ ಬೆಳೆ ಹಾನಿಯಾಗಿದೆ. ದೊಡ್ಡ ಸೇತುವೆ ಇದ್ದರೂ ಸಹ ಬಾವಿಯ ಸುತ್ತ ತಗ್ಗುಹೊಂಡ ನಿರ್ಮಾಣವಾಗಿ ನೀರು ತುಂಬಿ ನಿಂತಿದೆ. ರಸ್ತೆ ಸಂಪೂರ್ಣ ನೀರಿಗೆ ಕೊಚ್ಚಿಕೊಂಡು ಹೋಗಿದೆ.

ಬಾವಿಯು ದುರ್ಗಮವಾದ ಸ್ಥಳದಲ್ಲಿ ಇರುವುದರಿಂದ ಮೋಟಾರ್‌ ದುರಸ್ತಿ ಮತ್ತು ಬಾವಿ ಸ್ವಚ್ಛತೆ ಕಾರ್ಯಕ್ಕೆ ಅಡ್ಡಿಯಾಗಿದೆ. ನಾಲ್ಕು ದಿನಗಳಿಂದ ಗ್ರಾಮದ ಸುತ್ತ ನೀರು ತುಂಬಿ ಹರಿಯುತ್ತಿದ್ದರೂ ಕುಡಿಯುವ ನೀರಿಗಾಗಿ ಗ್ರಾಮಸ್ಥರು ಪರದಾಡುವುದು ಸಾಮಾನ್ಯವಾಗಿದೆ.

ಕೆಲ ನಿವಾಸಿಗಳು ಸಮೀಪದ ನಿಂಬರ್ಗಾದಿಂದ ಕುಡಿಯುವ ನೀರು ಖರೀದಿಸಿದರೆ, ಹಲವು ನಿವಾಸಿಗಳು ಹೊಲಗದ್ದೆಗಳಲ್ಲಿನ ಕೊಳವೆ ಬಾವಿ ನೀರು ಕುಡಿಯುತ್ತಿದ್ದಾರೆ. ಗ್ರಾಮಸ್ಥರ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ತಕ್ಷಣ ಬಾವಿ ಸ್ವಚ್ಛತೆ ಹಾಗೂ ಮೋಟಾರ್‌ ದುರಸ್ತಿ ಕಾರ್ಯ ಕೈಗೊಳ್ಳಲು ಅಣ್ಣಾರಾವ ಪಾಟೀಲ, ಕಲ್ಯಾಣಿ ಪುಜಾರಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.