ಚಿಂಚೋಳಿ:ತಾಲ್ಲೂಕಿನ ಚನ್ನೂರು ಗ್ರಾಮದಲ್ಲಿ ಬುಧವಾರ ಪತ್ನಿಯ ಶೀಲ ಶಂಕಿಸಿದ ಪತಿಯೇ ಅವರನ್ನು ಕೊಡಲಿಯಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಮಂಜುಳಾ ಸತೀಶ ಗೋಟೂರು (30) ಕೊಲೆಯಾದವರು. ಆರೋಪಿ ಸತೀಶ ಬುಧವಾರ ಹೊಲಕ್ಕೆ ಹೋಗಿದ್ದ. ಪತಿಗೆ ಮಧ್ಯಾಹ್ನದ ಊಟ ತೆಗೆದುಕೊಂಡು ಪತ್ನಿಯೂ ಹೊಲಕ್ಕೆ ಹೋಗಿದ್ದರು. ಹೊಲದಲ್ಲಿ ಜಗಳವಾಡಿದ ಸತೀಶ, ಕೊಡಲಿಯಿಂದ ಪತ್ನಿಯ ತಲೆಗೆ ಹೊಡೆದಿದ್ದಾನೆ. ಮಂಜುಳಾ ಮೃತಪಟ್ಟಿದ್ದನ್ನು ಕಂಡು ಪರಾರಿಯಾದ. ಅವರ ಮೈದುನ ಮತ್ತು ಮಾವ ಸಂಜೆಗೆ ಹೊಲಕ್ಕೆ ಹೋಗಿ ನೋಡಿದಾಗ ಮಂಜುಳಾ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಬೀದರ್ ಜಿಲ್ಲೆಯ ಕೂಡಾಂಬಲ್ ಬಳಿ ಮಾರ್ಗಮಧ್ಯದಲ್ಲೇ ಅವರು ಅಸುನೀಗಿದರು ಎಂದು ಪೊಲೀಸರು ಮಾಹಿತಿ
ನೀಡಿದ್ದಾರೆ.
ಬೀದರ್ ಜಿಲ್ಲೆಯ ಕಾರಪಾಕಪಳ್ಳಿಯ ಮಂಜುಳಾ ಅವರನ್ನು ಚನ್ನೂರು ಗ್ರಾಮದ ಸತೀಶ ಅವರೊಂದಿಗೆ ಮದುವೆ ಮಾಡಿದ್ದರು. ಆಗಾಗ ಪತ್ನಿಯ ಮೇಲೆ ಅನುಮಾನ ವ್ಯಕ್ತಪಡಿಸಿ ಪತಿ ಜಗಳವಾಡುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಕೊಲೆಯಾದ ಮಂಜುಳಾ ಸಹೋದರ ನೀಡಿದ ದೂರಿನ ಅನ್ವಯ ಚಿಂಚೋಳಿ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಘಟನಾ ಸ್ಥಳಕ್ಕೆ ಡಿವೈಎಸ್ಪಿ ಬಸವೇಶ್ವರ ಹೀರಾ ಮತ್ತು ಸರ್ಕಲ್ ಇನ್‌ಸ್ಪೆಕ್ಟರ್ ಮಹಾಂತೇಶ ಪಾಟೀಲ ಭೇಟಿ ನೀಡಿ ಪರಿಶೀಲಿಸಿದರು. ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.