ಆಳಂದ: ತಾಲ್ಲೂಕಿನ ಚಲಗೇರಾ ಗ್ರಾಮದ ಹೊಲಗಳಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ರೈತರ ಮೇಲೆ ತೋಳ ದಾಳಿ ನಡೆಸಿದ್ದು, ಎಂಟು ಜನರು ಗಾಯಗೊಂಡಿದ್ದಾರೆ.
ಶರಣಪ್ಪ ಗುರಣ್ಣ ದಲ್ಲು ಎನ್ನುವವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಶರಣಪ್ಪ ಶಿವಗುಂಡ ಜಮಾದಾರ, ಶರಣಪ್ಪ ಜಟ್ಟೆಪ್ಪ ಜಮಾದಾರ, ಅನಸುಬಾಯಿ ಮಾರುತಿ ಮುಗಳಿ, ನೀಲಪ್ಪ ಹಾಲೋಳ್ಳಿ, ಮಲ್ಲಪ್ಪ ದತ್ತಣ್ಣ ಜಮಾದಾರ, ಸುನೀಲ್ ಮುಲಗೆ ಹಾಗೂ ಶರಣಪ್ಪ ಹಣಮಂತರಾವ ದಿಂಡುರೆ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಇವರಲ್ಲಿ ನಾಲ್ವರು ಕಲಬುರಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರು ಮಾದನ ಹಿಪ್ಪರಗಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಬ್ಬರು ಸೋಲಾಪುರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
‘ಪ್ರಾಣಿಗಳ ಮೇಲೂ ತೋಳ ದಾಳಿ ನಡೆಸಿದೆ. ಒಂದು ನಾಯಿ ಮೃತಪಟ್ಟಿದ್ದು, ಎರಡು ನಾಯಿಗಳು ಗಾಯಗೊಂಡಿವೆ’ ಎಂದು ಗ್ರಾಮದ ಮುಖಂಡರಾದ ಅಶೋಕ ಪಾಟೀಲ ಮತ್ತು ಲಿಂಗರಾಜ ಪೊಲೀಸ್ ಪಾಟೀಲ ತಿಳಿಸಿದ್ದಾರೆ.
ಪಶು ವೈದ್ಯರು, ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ,‘ಪ್ರಾಣಿಗಳನ್ನು ಸುರಕ್ಷಿತ ಜಾಗದಲ್ಲಿ ಕಟ್ಟಬೇಕು. ಓಡಾಡುವಾಗ ಎಚ್ಚರಿಕೆ ವಹಿಸಬೇಕು’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.