ADVERTISEMENT

ವಾಡಿ: ವೆಂಟಿಲೇಟರ್ ಸಿಗದೆ ಮಹಿಳೆ ಸಾವು

​ಪ್ರಜಾವಾಣಿ ವಾರ್ತೆ
Published 28 ಜುಲೈ 2020, 16:19 IST
Last Updated 28 ಜುಲೈ 2020, 16:19 IST
ಶಾಂತಾಬಾಯಿ ಅಕುಶಖಾನೆ 
ಶಾಂತಾಬಾಯಿ ಅಕುಶಖಾನೆ    

ವಾಡಿ (ಕಲಬುರ್ಗಿ ಜಿಲ್ಲೆ): ಸಕಾಲಕ್ಕೆ ವೆಂಟಿಲೇಟರ್ ಸಿಗದೆ ಪಟ್ಟಣದ ಇಬ್ಬರು ಮೃತಪಟ್ಟ ಬೆನ್ನಲ್ಲೇ ಮತ್ತೋರ್ವ ಮಹಿಳೆ ಅದೇ ಕಾರಣದಿಂದ ಮಂಗಳವಾರ ಕೊನೆಯುಸಿರೆಳೆದಿದ್ದಾರೆ. ಪಟ್ಟಣದ ನಿವಾಸಿ ಶಾಂತಾಬಾಯಿ ಅಕುಶಖಾನೆ (46) ಮೃತಪಟ್ಟವರು.

‘ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಲಬುರ್ಗಿಯ ಜಿಮ್ಸ್ ಆಸ್ಪತ್ರೆಗೆ ಮಂಗಳವಾರ ಬೆಳಿಗ್ಗೆ ಕರೆದೊಯ್ದಿದ್ದೇವುಜ.ಜಿಮ್ಸ್ ಆಸ್ಪತ್ರೆಯವರು ವೆಂಟಿಲೇಟರ್ ಇಲ್ಲ ಎಂದು ಹೇಳಿ ದಾಖಲಿಸಿಕೊಳ್ಳದೆ ವಾಪಸ್‌ ಕಳುಹಿಸಿದರು. ಇಎಸ್‌ಐಸಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿಯೂ ವೆಂಟಿಲೇಟರ್ ಸಮಸ್ಯೆ ಹೇಳಿ ಒಳಗಡೆ ಕರೆದುಕೊಳ್ಳದೆ ಸಾಗಹಾಕಿದರು. ನಂತರ ನಾಲ್ಕೈದು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದರೂ ವೈದ್ಯರು ವೆಂಟಿಲೇಟರ್ ಇಲ್ಲ ಎಂದು ಹೇಳುತ್ತಾ ದಾಖಲಿಸಿಕೊಳ್ಳಲು ನಿರಾಕರಿಸಿದರು. ಅಷ್ಟರಲ್ಲಿ ಮಹಿಳೆ ಉಸಿರಾಟ ತೊಂದರೆಗೆ ಸಿಲುಕಿ ಮೃತಪಟ್ಟಳು’ ಎಂದು ಕುಟುಂಬದವರು ಆರೋಪಿಸಿದ್ದಾರೆ.

'ಎಲ್ಲಾ ಕಡೆ ವೆಂಟಿಲೇಟರ್ ಹಾಗೂ ಬೆಡ್ ಇಲ್ಲ ಎಂದು ಹೇಳುತ್ತಾ ರೋಗಿಯನ್ನು ದಾಖಲಿಸಿಕೊಳ್ಳದೆ ವಾಪಸ್ ಕಳುಹಿಸಿದ್ದಾರೆ. ಮಧ್ಯಾಹ್ನದವರೆಗೂ ಅಲೆದರೂ ಚಿಕಿತ್ಸೆ ಸಿಕ್ಕಿಲ್ಲ' ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ADVERTISEMENT

ಕೊರೊನಾ ಭೀತಿಯಿಂದ ಹಲವು ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡಲು ನಿರಾಕರಿಸುತ್ತಿವೆ. ಹತ್ತು ದಿನಗಳಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಸಕಾಲಕ್ಕೆ ವೆಂಟಿಲೇಟರ್ ಸಿಗದೇ ಮೃತಪಟ್ಟಿದ್ದು, ಪಟ್ಟಣದ ನಿವಾಸಿಗಳ ಆತಂಕಕ್ಕೆ ಕಾರಣವಾಗಿದೆ. ಕೋವಿಡ್ ಪರೀಕ್ಷೆಗಾಗಿ ಮೃತ ಮಹಿಳೆಯ ಗಂಟಲು ದ್ರವ ಸಂಗ್ರಹಿಸಲಾಗಿದ್ದು, ವರದಿ ಇನ್ನಷ್ಟೇ ಬರಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.