ಕಾಳಗಿ: ನಾಯಿಗಳಿಂದ ಸುತ್ತುವರಿದಿದ್ದ ಹಸು ಮತ್ತು ಕರುವನ್ನು ಸ್ಥಳೀಯರು ರಕ್ಷಿಸಿದ್ದಾರೆ.
ತಾಲ್ಲೂಕಿ ಕೊಡದೂರ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ರವಿ ಚೆಟ್ಟಿ ಅವರ ಮನೆ ಪಕ್ಕದಲ್ಲಿ ಹಸು ಕರು ಹಾಕಿತ್ತು. ಬಿಸಿಲಲ್ಲೇ ನಿಂತಿದ್ದ ಹಸುವನ್ನು ನಾಯಿಗಳು ಸುತ್ತುವರಿದ್ದವು. ಇದನ್ನು ಗಮನಿಸಿದ ರವಿ ಚೆಟ್ಟಿ ಪ್ರಜಾವಾಣಿ ಪ್ರತಿನಿಧಿಗೆ ಸುದ್ದಿ ಮುಟ್ಟಿಸಿದರು. ಬಳಿಕ ಆಕಳು-ಎಳೆ ಕರುವನ್ನು ರಕ್ಷಣೆ ಮಾಡಲಾಯಿತು.
ವಿಷಯ ತಿಳಿದ ಸರ್ಕಾರಿ ಪಶು ಆಸ್ಪತ್ರೆಯ ಹಿರಿಯ ಪಶು ವೈದ್ಯಾಧಿಕಾರಿ ಡಾ.ಗೌತಮ ಕಾಂಬಳೆ, ಆಂಬುಲೆನ್ಸ್ ವೈದ್ಯಾಧಿಕಾರಿ ಡಾ.ಅಭಿಷೇಕ ಪಾಟೀಲ, ಮೈತ್ರಿ ವರ್ಕರ್ ನಾಗರೆಡ್ಡಿ ಬೀರನಳ್ಳಿ, ಸಹಾಯಕ ಸಚಿನ ದಂಡಗುಲಕರ್ ಸ್ಥಳಕ್ಕೆ ಆಗಮಿಸಿದರು.
ಬಳಿಕ ಆಕಳು, ಎಳೆಕರುವನ್ನು ಆಸ್ಪತ್ರೆಗೆ ಕರೆ ತಂದ ವೈದ್ಯಾಧಿಕಾರಿಗಳು ಪ್ರಥಮ ಚಿಕಿತ್ಸೆ ನೀಡಿ ನೀರು, ಮೇವು ಹಾಕಿ ಆಶ್ರಯ ಕಲ್ಪಿಸಿದರು. ಸಾಮಾಜಿಕ ಜಾಲತಣಗಳ ಮೂಲಕ ಈ ಸುದ್ದಿ ಎಲ್ಲೆಡೆ ಹರಿದಾಡಿದರೂ ಸಂಬಂಧಪಟ್ಟ ಯಾರೊಬ್ಬರು ಸಮೀಪಕ್ಕೆ ಬರಲಿಲ್ಲ. ಈ ನಡುವೆ ಕರುವನ್ನು ಅಲ್ಲೇ ಬಿಟ್ಟು ಆಕಳು ಬೇರೆಡೆ ಓಡಿಹೋಗಿದ್ದರಿಂದ ಹುಡುಕಾಡಲು ವೈದ್ಯರಿಗೆ ಬಿಸಿಲಿನ ಕಾವು ತಟ್ಟಿಸಿತು.
ಬಳಿಕ ಇತರರ ಸಹಾಯದೊಂದಿಗೆ ಹಗ್ಗ ಕಟ್ಟಿ ಹಿಡಿದುತಂದರೂ ಪಶು ಆಸ್ಪತ್ರೆಗೆ ಬಾರದ ಆಕಳನ್ನು ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಕೂಡಿಹಾಕಿ ಕರುವನ್ನು ಅಲ್ಲೇ ತಂದು ಹಾಲು ಕುಡಿಸಲಾಯಿತು.
ಸಂಜೆಯಾಗುತ್ತಿದ್ದಂತೆ ಪಟ್ಟಣ ಪಂಚಾಯಿತಿ ಬಿಲ್ ಕಲೆಕ್ಟರ್ ದತ್ತಾತ್ರೇಯ ಕಲಾಲ ಮತ್ತು ಸಿಬ್ಬಂದಿ ಸ್ಥಳಕ್ಕೆ ಬಂದು ಅವರಿವರನ್ನು ಕರೆತಂದು ಪತ್ತೆ ಹಚ್ಚಿದರು.
ಚಿಕ್ಕಂಡಿ ತಾಂಡಾದ ವಿಶ್ವನಾಥ ಜೈಸಿಂಗ್ ಜಾಧವ ಎಂಬುವವರು ‘ಹಸು ನಮಗೆ ಸೇರಿದ್ದು’ ಎಂದು ತಿಳಿಸಿ ಆಕಳು-ಕರುವನ್ನು ಕರೆದುಕೊಂಡು ಹೋದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.