ಕಲಬುರಗಿ: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡವು ಪ್ರಮುಖ ವಿಷಯವಾಗಿದೆ ಎಂದು ಕಮಲಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ರವೀಂದ್ರ ಕುಂಬಾರ ತಿಳಿಸಿದರು.
ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯುಎಸಿ ಮತ್ತು ಕನ್ನಡ ವಿಭಾಗದ ಸಹಯೋಗದಲ್ಲಿ ಹಮ್ಮಿಕೊಂಡಿರುವ ಒಂದು ದಿನದ ಕಾರ್ಯಗಾರವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಕೆಎಎಸ್ ಪರೀಕ್ಷೆಯಲ್ಲಿ 150 ಅಂಕಗಳ ಕಡ್ಡಾಯ ಕನ್ನಡ ಮತ್ತು ಇಂಗ್ಲಿಷ್ ಪತ್ರಿಕೆಗಳು ಪಾಸಾದರೆ ಮಾತ್ರ ಅಭ್ಯರ್ಥಿಯ ಉಳಿದ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡುತ್ತಾರೆ. ಕನ್ನಡ ಕಡ್ಡಾಯ ಪತ್ರಿಕೆ ಅಷ್ಟೇ ಅಲ್ಲ, ಸಾಮಾನ್ಯ ಜ್ಞಾನ ಪತ್ರಿಕೆಯಲ್ಲಿಯೂ ಕನ್ನಡ ಸಾಹಿತ್ಯ ಮತ್ತು ಭಾಷೆಯ ಪ್ರಶ್ನೆಗಳಿರುತ್ತವೆ. ಕರ್ನಾಟಕ ಸರ್ಕಾರದಿಂದ ನೇಮಕಾತಿಗೊಳ್ಳುವ ಎಲ್ಲಾ ಹುದ್ದೆಗಳಿಗೂ ಕನ್ನಡ ಕಡ್ಡಾಯವಾಗಿರುತ್ತದೆ. ಬ್ಯಾಂಕಿನ ನೇಮಕಾತಿಯಲ್ಲಿಯೂ ಕೂಡ ಕನ್ನಡ ಕಡ್ಡಾಯವಾಗಿದೆ. ಬಹು ಆಯ್ಕೆಯ ವಸ್ತುನಿಷ್ಠ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಕನ್ನಡ ಬರವಣಿಗೆಯ ಭಾಷಾ ದೋಷದ ಪರೀಕ್ಷೆ ನಡೆಯುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಕಡ್ಡಾಯವಾಗಿ ಕನ್ನಡದ ಜ್ಞಾನವನ್ನು ಹೊಂದಿರಬೇಕು. ಪ್ರಸ್ತುತ ಸಂದರ್ಭದಲ್ಲಿ ಸರ್ಕಾರಿ ಹುದ್ದೆ ಗಿಟ್ಟಿಸಿಕೊಳ್ಳಲು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವುದು ಅನಿವಾರ್ಯವಾಗಿದೆ’ ಎಂದರು.
ಅಧ್ಯಕ್ಷೀಯ ನುಡಿಗಳನ್ನಾಡಿದ ಪ್ರಾಂಶುಪಾಲ ಪ್ರಕಾಶ ಮೊರ್ಗೆ, ‘ಕನ್ನಡ ಕಠಿಣ ವಿಷಯವೆಂದು ಕಾಣಿಸಿಕೊಂಡರೂ ಅದರ ಅಧ್ಯಯನ ಮಾಡಿದಂತೆಲ್ಲ ಅದೊಂದು ಸರಳ ವಿಷಯವಾಗಿ ಮಾರ್ಪಡುತ್ತದೆ’ ಎಂದು ಹೇಳಿದರು.
ಐಕ್ಯುಎಸಿ ಸಂಯೋಜನಾಧಿಕಾರಿ ಶರಣಬಸಪ್ಪ ಮಾತನಾಡಿದರು. ಕನ್ನಡ ವಿಭಾಗದ ಮುಖ್ಯಸ್ಥ ಪ್ರಕಾಶ ಬಡಿಗೇರ ಸ್ವಾಗತಿಸಿದರು. ಕನ್ನಡ ಪ್ರಾಧ್ಯಾಪಕ ಸಿದ್ರಾಮಪ್ಪ ಬಣಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ಪ್ರಾಧ್ಯಾಪಕರಾದ ಅನ್ನಪೂರ್ಣ ಪಾಟೀಲ, ಪ್ರಿಯದರ್ಶಿನಿ, ಸುವರ್ಣ ಹಿರೇಮಠ, ಆನಂದ ಬಿರಾದಾರ, ವಿದ್ಯಾವತಿ ಪಾಟೀಲ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.