ADVERTISEMENT

‘ನೀರಿಗಾಗಿ ಯುದ್ಧ ನಡೆದರೂ ಅಚ್ಚರಿಯಿಲ್ಲ’

ಧಾರವಾಡದ ಜಲ ಮತ್ತು ನೆಲ ನಿರ್ವಹಣಾ ಸಂಸ್ಥೆ ನಿರ್ದೇಶಕ ಡಾ.ರಾಜೇಂದ್ರ ಪೋದ್ದಾರ ಕಳವಳ

​ಪ್ರಜಾವಾಣಿ ವಾರ್ತೆ
Published 11 ಜನವರಿ 2021, 12:05 IST
Last Updated 11 ಜನವರಿ 2021, 12:05 IST
ನೀರು ಬಳಕೆದಾರರ ಪುನಶ್ಚೇತನ ಕಾರ್ಯಾಗಾರದಲ್ಲಿ ಧಾರವಾಡದ ವಾಲ್ಮಿ ಸಂಸ್ಥೆ ನಿರ್ದೇಶಕ ಡಾ.ರಾಜೇಂದ್ರ ಪೋದ್ದಾರ ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಅವರೊಂದಿಗೆ ಸಮಾಲೋಚನೆ ನಡೆಸಿದರು. ಕೃಷಿ ಮಹಾವಿದ್ಯಾಲಯದ ಡೀನ್ ಡಾ. ಸುರೇಶ ಪಾಟೀಲ, ಕೃಷ್ಣಾ ಕಾಡಾ ಅಧ್ಯಕ್ಷ ಶರಣಪ್ಪ ತಳವಾರ ಇದ್ದರು
ನೀರು ಬಳಕೆದಾರರ ಪುನಶ್ಚೇತನ ಕಾರ್ಯಾಗಾರದಲ್ಲಿ ಧಾರವಾಡದ ವಾಲ್ಮಿ ಸಂಸ್ಥೆ ನಿರ್ದೇಶಕ ಡಾ.ರಾಜೇಂದ್ರ ಪೋದ್ದಾರ ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಅವರೊಂದಿಗೆ ಸಮಾಲೋಚನೆ ನಡೆಸಿದರು. ಕೃಷಿ ಮಹಾವಿದ್ಯಾಲಯದ ಡೀನ್ ಡಾ. ಸುರೇಶ ಪಾಟೀಲ, ಕೃಷ್ಣಾ ಕಾಡಾ ಅಧ್ಯಕ್ಷ ಶರಣಪ್ಪ ತಳವಾರ ಇದ್ದರು   

ಕಲಬುರ್ಗಿ: ‘ಅತ್ಯಮೂಲ್ಯವಾದ ನೀರನ್ನು ಕಲುಷಿತಗೊಳಿಸುತ್ತಿದ್ದೇವೆ. ಮೊದಲ ಎರಡು ಮಹಾಯುದ್ಧಗಳು ಹೆಣ್ಣು, ಹೊನ್ನು, ಮಣ್ಣಿಗಾಗಿ ನಡೆದರೆ ಮೂರನೇ ಮಹಾಯುದ್ಧ ನೀರಿಗಾಗಿ ನಡೆದರೆ ಅಚ್ಚರಿ ಇಲ್ಲ’ ಎಂದು ಧಾರವಾಡದ ಜಲ ಮತ್ತು ನೆಲ ನಿರ್ವಹಣಾ ಸಂಸ್ಥೆ (ವಾಲ್ಮಿ) ನಿರ್ದೇಶಕ ಡಾ. ರಾಜೇಂದ್ರ ಪೋದ್ದಾರ ಕಳವಳ ವ್ಯಕ್ತಪಡಿಸಿದರು.

ಆಳಂದ ರಸ್ತೆಯ ಕೃಷಿ ಮಹಾವಿದ್ಯಾಲಯದಲ್ಲಿ ಸೋಮವಾರ ನಡೆದ ನೀರು ಬಳಕೆದಾರರ ಪುನಶ್ಚೇತನಾ ಕಾರ್ಯಾಗಾರದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ‘ನಾವು ಗಂಗಾಮಾತೆಯೆಂದು ಕರೆಯುವ ಗಂಗಾ ನದಿಯನ್ನು ಮಲಿನಗೊಳಿಸಿದ್ದೇವೆ. ಪಂಢರಪುರದ ಬಳಿ ಚಂದ್ರಭಾಗಾ ನದಿಯಾಗಿ ಹರಿದು ರಾಜ್ಯದಲ್ಲಿ ಭೀಮೆಯಾಗಿ ಹರಿಯುವ ಭೀಮಾ ನದಿಯೂ ಕಲುಷಿತಗೊಂಡಿದೆ. ಜನಸಂಖ್ಯೆ ಹೆಚ್ಚಿದಂತೆ ಭೂಮಿಯ ಮೇಲೆ ನೀರಿನ ಪ್ರಮಾಣ ಹೆಚ್ಚುವುದಿಲ್ಲ. ಬದಲಾಗಿ ಕಡಿಮೆಯಾಗುತ್ತಿದೆ. ಈಗಿನಿಂದಲೇ ಎಚ್ಚೆತ್ತುಕೊಳ್ಳದಿದ್ದರೆ ಜಲಸಂಕಟ ಎದುರಿಸಬೇಕಾಗುತ್ತದೆ’ ಎಂದರು.

‘ಒಟ್ಟು ನೀರಿನ ಬಳಕೆಯಲ್ಲಿ ಶೇ 80 ಭಾಗ ನೀರಾವರಿಗೇ ಖರ್ಚಾಗುತ್ತದೆ. ಉಳಿದ ಶೇ 20 ಭಾಗ ಕುಡಿಯಲು, ಮನೆ ಬಳಕೆ ಮತ್ತಿತರ ಅಗತ್ಯಗಳಿಗೆ ಬೇಕಾಗುತ್ತದೆ. ಶೇ 80ರಷ್ಟು ನೀರನ್ನು ಬಳಸುವ ರೈತರು ಯೋಜನಾಬದ್ಧವಾಗಿ ನೀರನ್ನು ಬೆಳೆಗಳಿಗೆ ಹಾಯಿಸಿಕೊಳ್ಳಲು ಚಿಂತನೆ ನಡೆಸಬೇಕು. ನೀರಿನ ನಿರ್ವಹಣೆ ಜಲಸಂಪನ್ಮೂಲ ಇಲಾಖೆಯ ಕೆಲಸವಷ್ಟೇ ಅಲ್ಲ. ಇದರಲ್ಲಿ ರೈತರ ಪಾಲೂ ಸಾಕಷ್ಟಿದೆ. ಈ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದಲೇ ಕರ್ನಾಟಕ ಸರ್ಕಾರ ವಾಲ್ಮಿ ಸಂಸ್ಥೆಯನ್ನು ಸ್ಥಾಪಿಸಿ ಅದಕ್ಕೆ ಕೋಟ್ಯಂತರ ರೂಪಾಯಿ ಅನುದಾನ ನೀಡುತ್ತಿದೆ. ವಾಲ್ಮಿಯ ವ್ಯಾಪ್ತಿ ರಾಜ್ಯವ್ಯಾಪಿಯಾಗಿದ್ದು, ಕಲ್ಯಾಣ ಕರ್ನಾಟಕ ಭಾಗದ ಭೀಮಾ, ಬೆಣ್ಣೆತೊರಾ, ಕಾರಂಜಾ, ಚುಳಕಿನಾಲಾ ಅಚ್ಚುಕಟ್ಟು ಪ್ರದೇಶದಲ್ಲಿ ನೀರಿನ ಬಳಕೆದಾರರ ಸಂಘದ ಸದಸ್ಯರು ವಾಲ್ಮಿಯಿಂದ ಆಯೋಜಿಸುವ ಅಂತರರಾಜ್ಯ ಪ್ರವಾಸಗಳ ಪ್ರಯೋಜನ ಪಡೆಯಬಹುದು. ಅತಿ ಕಡಿಮೆ ನೀರಿನಲ್ಲಿ ಹೆಚ್ಚು ಬೆಳೆ ತೆಗೆಯುವ ರೈತರ ಯಶೋಗಾಥೆಯನ್ನು ರೈತರಿಗೆ ತಿಳಿಸಲಾಗುತ್ತದೆ’ ಎಂದು ವಿವರಿಸಿದರು.

ADVERTISEMENT

ಭೀಮರಾಯನಗುಡಿಯ ಕೃಷ್ಣಾ ಕಾಡಾ ಅಧ್ಯಕ್ಷ ಶರಣಪ್ಪ ತಳವಾರ ಮಾತನಾಡಿ, ‘ರೈತರು ಜಾಗೃತರಾಗದ ಹೊರತು ಯಾವ ಸರ್ಕಾರ ಎಷ್ಟು ನೀರಾವರಿ ಯೋಜನೆಗಳನ್ನು ತಂದರೂ ಪ್ರಯೋಜನವಾಗುವುದಿಲ್ಲ. ಸರ್ಕಾರ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ರೈತರು ಆ ಬಗ್ಗೆ ಮಾಹಿತಿ ಪಡೆದು ತಮ್ಮ ಜಮೀನುಗಳಿಗೆ ನೀರು ಹರಿಸಿಕೊಳ್ಳಬೇಕು. ನೀರಿನ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನೀರು ಬಳಕೆದಾರರ ಸಂಘಗಳನ್ನು ರಚಿಸಲು ಅಗತ್ಯ ನೆರವು ನೀಡುತ್ತೇನೆ’ ಎಂದು ಘೋಷಿಸಿದರು.

‘ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರೈತ ಕುಟುಂಬದಿಂದ ಬಂದವರು. ಹಾಗಾಗಿಯೇ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿದ್ದರು. ಬೇರೆಯವರು ಇಲ್ಲಿ ಬಂದು ಕೃಷಿಯಲ್ಲಿ ಹಲವು ಪ್ರಯೋಗಗಳನ್ನು ಮಾಡಿ ಉದ್ಯಮಗಳನ್ನು ಸ್ಥಾಪಿಸಿ ಶ್ರೀಮಂತರಾಗಿದ್ದರು. ಜಿಲ್ಲೆಯವರೂ ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು’ ಎಂದರು.

ಕೃಷಿ ಮಹಾವಿದ್ಯಾಲಯದ ಡೀನ್ ಡಾ. ಸುರೇಶ ಪಾಟೀಲ, ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಳದ ಅಧ್ಯಕ್ಷರಾದ ಮಸ್ತಾನ್‌ಸಾಬ್ ಇ. ಕೊರವಿ, ಹನುಮಂತರಾವ ಪಾಟೀಲ, ಹನುಮಂತರಾವ ಬಿರಾದಾರ ಕೊರಟಗಿ, ಕಾಡಾ ಆಡಳಿತಾಧಿಕಾರಿ ವಿಜಯ ದಶರಥ ಎಸ್. ಸಂಗನ್, ಐಪಿಝೆಡ್ ಕಾರ್ಯನಿರ್ವಾಹಕ ಎಂಜಿನಿಯರ್ ಸೂರ್ಯಕಾಂತ ಮಾಲೆ, ಪಿ. ರಮೇಶಕುಮಾರ್, ರೈತ ಮುಖಂಡ ಅಪ್ಪಾಸಾಹೇಬ ಯರನಾಳ ಭಾಗವಹಿಸಿದ್ದರು.

ವಾಲ್ಮಿಯ ಸಮಾಲೋಚಕ ಸುರೇಶ ಕುಲಕರ್ಣಿ, ಶ್ಯಾಮರಾವ ಚಂದ್ರಶೇಖರ ಉಪನ್ಯಾಸ ನೀಡಿದರು.

‘ಕೃಷ್ಣಾದಿಂದ ಕಾರಂಜಾವರೆಗೆ ನೀರು ಹರಿಯಬೇಕು’

ಕೃಷ್ಣಾದಿಂದ ಕಾರಂಜಾವರೆಗೆ ರೈತರ ಹೊಲಗಳಿಗೆ ನೀರು ಹರಿಸುವ ಯೋಜನೆಯನ್ನು ರೂಪಿಸಬೇಕು. ಅಂದಾಗ ರೈತರ ಬದುಕು ಹಸನಾಗುತ್ತದೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಅಭಿಪ್ರಾಯಪಟ್ಟರು.

ನೀರು ಬಳಕೆದಾರರ ಪುನಶ್ಚೇತನ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ನೀರಾವರಿ ಯೋಜನೆಗಳ ಬಗ್ಗೆ ದಕ್ಷಿಣ ಕರ್ನಾಟಕದವರಿಗೆ ಇರುವಷ್ಟು ತಿಳಿವಳಿಕೆ ಕಲ್ಯಾಣ ಕರ್ನಾಟಕ ಭಾಗದ ರೈತರಿಗೆ ಇಲ್ಲ. ಹೀಗಾಗಿ, ವಾಲ್ಮಿ ಸಂಸ್ಥೆ ಆಯೋಜಿಸಿರುವ ಕಾರ್ಯಾಗಾರ ಶ್ಲಾಘನೀಯ. ಇಂತಹ ಇನ್ನಷ್ಟು ತಿಳಿವಳಿಕೆ ಕಾರ್ಯಕ್ರಮಗಳು ನಡೆಯಲಿ’ ಎಂದು ಆಶಿಸಿದರು.

‘ರೈತ ಕುಟುಂಬದ ಹಿನ್ನೆಲೆಯಿಂದ ಬಂದ ನಾನು ಇಂದು ಉನ್ನತ ಹುದ್ದೆಗೆ ಏರಿರುವುದು ಖುಷಿ ತಂದಿದೆ. ಈ ಭಾಗದ ರೈತರೂ ಸಾಮಾಜಿಕವಾಗಿ, ಆರ್ಥಿಕವಾಗಿ ಬೆಳೆಯಬೇಕು. ಅದಕ್ಕೆ ಕಲ್ಯಾಣ ಮಂಡಳಿಯಿಂದ ಅಗತ್ಯವಾದ ನೆರವು ನೀಡಲು ಸಿದ್ಧನಿದ್ದೇನೆ’ ಎಂದರು.

‘ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪಿಎಂ ಕಿಸಾನ್ ಯೋಜನೆ ಮೂಲಕ ರೈತರ ಖಾತೆಗೆ ವರ್ಷಕ್ಕೆ ₹ 6 ಸಾವಿರ ಹಣ ಜಮಾ ಮಾಡುತ್ತಿದ್ದಾರೆ. ಅದಕ್ಕೆ ಪೂರಕವಾಗಿ ರಾಜ್ಯದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ₹ 4 ಸಾವಿರ ಸೇರಿಸಿ ಒಟ್ಟು ₹ 10 ಸಾವಿರ ಹಣ ರೈತರ ಖಾತೆಗೆ ನೇರವಾಗಿ ಜಮಾ ಆಗುವಂತೆ ಮಾಡಿದ್ದಾರೆ. ಮೋದಿ ಅವರು ರೈತರ ಬೆಳೆಗಳಿಗೆ ನಷ್ಟವಾದಾಗ ಪರಿಹಾರ ನೀಡಲು ಉತ್ತಮವಾದ ವಿಮಾ ಯೋಜನೆಯನ್ನೂ ರೂಪಿಸಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.