ಕಲಬುರಗಿ: ಪರಿಸರ ದಿನಾಚರಣೆಯ ಅಂಗವಾಗಿ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಹಾಗೂ ಅರಣ್ಯ ಇಲಾಖೆ ವತಿಯಿಂದ ಗೋಕುಲ ನಗರದ ಜಿಡಿಎ ಬಡಾವಣೆ ಉದ್ಯಾನದಲ್ಲಿ ಸಸಿ ನೆಡುವ ಮೂಲಕ ‘ಅಮೃತ್ ಮಿತ್ರ’ ಅಭಿಯಾನಕ್ಕೆ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಗುರುವಾರ ಚಾಲನೆ ನೀಡಿದರು.
ವುಮೆನ್ ಫಾರ್ ಟ್ರೀಸ್ ಘೋಷಣೆಯಡಿ ನಗರದ ಉದ್ಯಾನ ಮತ್ತು ಮೈದಾನಗಳಲ್ಲಿ ಸುಮಾರು 2,000 ಸಸಿಗಳನ್ನು ನೆಡಲಾಗುತ್ತಿದೆ. ಸಸಿಗಳನ್ನು ಡೇ–ನೆಲ್ಮ್ ಯೋಜನೆಯಡಿ ನೋಂದಾಯಿತ ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರಿಗೆ ನೀಡಲಾಗುತ್ತಿದೆ.
ಆಗಸ್ಟ್ 31ರ ಒಳಗೆ ಸಸಿಗಳನ್ನು ನೆಟ್ಟ ವರದಿ ನೀಡಲಿದ್ದಾರೆ. ಮುಂದಿನ 2 ವರ್ಷಗಳವರೆಗೆ ಸಸಿಗಳ ನಿರ್ವಹಣೆಯ ಜವಾಬ್ದಾರಿ ಸಹ ಮಹಿಳಾ ಸದಸ್ಯರಿಗೆ ನೀಡಲಾಗಿದೆ. ನಿರ್ವಹಣಾ ವೆಚ್ಚವನ್ನು ಕೇಂದ್ರ ಸರ್ಕಾರದಿಂದ ಡಿಬಿಟಿ ಮೂಲಕ ಪಾವತಿ ಆಗುತ್ತದೆ ಎಂದು ಪಾಲಿಕೆ ಹೇಳಿದೆ.
ಕಾರ್ಯಕ್ರಮದಲ್ಲಿ ಎಸ್.ಪಿ. ಅಡ್ಡೂರು ಶ್ರೀನಿವಾಸುಲು, ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸುಮಿತ್ ಪಾಟೀಲ, ಪಾಲಿಕೆ ಉಪ ಆಯುಕ್ತ ಆರ್.ಪಿ. ಜಾಧವ, ಉಪ ಆಯುಕ್ತ (ಆಡಳಿತ) ರಾಜೇಂದ್ರ ಭಾಲ್ಕಿ, ಎಇಇ (ಪರಿಸರ) ಅಭಯಕುಮಾರ, ವಲಯ ಆಯುಕ್ತ ಪ್ರದೀಪ್ ಉಪಸ್ಥಿತರಿದ್ದರು.
4.43 ಲಕ್ಷ ಸಸಿಗಳ ಗುರಿ: ಜಿಲ್ಲೆಯಲ್ಲಿ ಹಸಿರು ಹೊದಿಕೆ ಹೆಚ್ಚಿಸಲು ಅರಣ್ಯ ಇಲಾಖೆ ಮುಂದಾಗಿದ್ದು, ಪ್ರಸಕ್ತ ಸಾಲಿನಲ್ಲಿ ಸುಮಾರು 1,060 ಹೆಕ್ಟೇರ್ ಪ್ರದೇಶದಲ್ಲಿ 4.43 ಲಕ್ಷ ಸಸಿಗಳನ್ನು ನೆಡುವ ಗುರಿ ಹಾಕಿಕೊಳ್ಳಲಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.
ಕಲ್ಯಾಣ ಕರ್ನಾಟಕ ಭಾಗದ ಎಲ್ಲ ಜಿಲ್ಲೆಗಳಲ್ಲಿ ಶೇ 10ಕ್ಕಿಂತ ಕಡಿಮೆ ಅರಣ್ಯ ಪ್ರದೇಶವಿದೆ. ಕಲಬುರಗಿಯಲ್ಲಿ ಶೇ 5ರಷ್ಟು ಹಸರೀಕರಣ ಮಾಡಲು ಅರಣ್ಯ ಇಲಾಖೆ ಪಣ ತೊಟ್ಟಿದೆ. 2025-26ನೇ ಸಾಲಿನಲ್ಲಿ ಪ್ರಾದೇಶಿಕ ಅರಣ್ಯ ಮತ್ತು ಸಾಮಾಜಿಕ ಅರಣ್ಯ ವಿಭಾಗದಿಂದ 567.50 ಹೆಕ್ಟೇರ್ ಪ್ರದೇಶದಲ್ಲಿ ಬ್ಲಾಕ್ ನೆಡುತೋಪು, 350 ಕಿ.ಮೀ. ರಸ್ತೆ ಬದಿ ನೆಡುತೋಪು ಸೇರಿ 4.43 ಲಕ್ಷ ಸಸಿ ನೆಡುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದಿದೆ.
ಸಾರ್ವಜನಿಕರು, ರೈತರು, ಸಂಘ-ಸಂಸ್ಥೆಗಳಿಗೆ 1.64 ಲಕ್ಷ ಸಸಿಗಳನ್ನು ವಿತರಿಸಲಾಗುವುದು ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.