ಕಲಬುರ್ಗಿ: ಅನೇಕ ವರ್ಷಗಳಿಂದ ಅಂಚೆ ಇಲಾಖೆಯು ಜನತೆಗೆ ಉತ್ತಮವಾದ ಸೇವೆಯನ್ನು ನೀಡುತ್ತಾ ಮೆಚ್ಚುಗೆಗೆ ಪಾತ್ರವಾಗಿದೆ. ಪ್ರಸ್ತುತ ಪತ್ರ ವಿಲೆವಾರಿಗೆ ಮಾತ್ರ ಸೀಮಿತವಾಗದೆ, ಬ್ಯಾಂಕಿಂಗ್ ಸೇವೆ, ಶುಲ್ಕ, ಚಲನ್ ಸ್ವೀಕಾರ, ನಿವೃತ್ತಿ ವೇತನ, ಪೋಸ್ಟಲ್ ಸೇವೆಗಳು, ಪಿಂಚಣಿ ಯೋಜನೆ, ಸರ್ಕಾರದ ವಿವಿಧ ಯೋಜನೆಗಳನ್ನು ಜನರಿಗೆ ಮುಟ್ಟಿಸುವಲ್ಲಿ ಇಲಾಖೆಯು ಸದಾ ಸೇವೆಯನ್ನು ಸಲ್ಲಿಸುತ್ತಿದ್ದು, ನಾಗರಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ನರೋಣಾ ಅಂಚೆ ಕಚೇರಿಯ ಸಹಾಯಕ ಶಾಖಾ ಪೋಸ್ಟ್ ಮಾಸ್ಟರ್ ರೇವಣಸಿದ್ದಪ್ಪ ಪವಾಡಶೆಟ್ಟಿ ಹೇಳಿದರು.
ನಗರದ ‘ಕೆಎಚ್‍ಬಿ ಗ್ರೀನ್ ಪಾರ್ಕ ಬಡಾವಣೆ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ ಹಾಗೂ ‘ಕೆಎಚ್‍ಬಿ ಗ್ರೀನ್ ಪಾರ್ಕ ಕ್ಷೇಮಾಭಿವೃದ್ಧಿ ಸಂಘ’ ಇವುಗಳು ಜಂಟಿಯಾಗಿ ಏರ್ಪಡಿಸಿದ್ದ ‘ವಿಶ್ವ ಅಂಚೆ ದಿನಾಚರಣೆ’ ಪ್ರಯುಕ್ತ ಶುಕ್ರವಾರ ಸಂಜೆ ಇಲಾಖೆ ಸಿಬ್ಬಂದಿಗೆ ಹಮ್ಮಿಕೊಳ್ಳಲಾಗಿದ್ದ ಸತ್ಕಾರ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದರು.
ಬಳಗದ ಸಂಸ್ಥಾಪಕ ಅಧ್ಯಕ್ಷ ಎಚ್.ಬಿ.ಪಾಟೀಲ, ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಂಜೀವಕುಮಾರ ಶೆಟ್ಟಿ,ಪ್ರಮುಖರಾದ ನರಸಪ್ಪ ಬಿರಾದಾರ ದೇಗಾಂವ, ಬಾಲಕೃಷ್ಣ ಕುಲಕರ್ಣಿ, ಕೆ.ವಿ.ಕುಲಕರ್ಣಿ, ಅಣ್ಣಾರಾಯ ಮಂಗಾಣೆ, ರಾಜಕುಮಾರ ಬಟಗೇರಿ, ಸಂಜಯಕುಮಾರ ಖಜೂರಿ, ಸೂರ್ಯಕಾಂತ ಸಾವಳಗಿ, ಬಸವರಾಜ ಹೆಳವರ ಯಾಳಗಿ ಇದ್ದರು.
ಶಿವಕಾಂತ ಚಿಮ್ಮಾ ಪ್ರಾರ್ಥಿಸಿದರು. ಬಸವರಾಜ ಹೆಳವರ ಯಾಳಗಿ ಸ್ವಾಗತಿಸಿದರು. ವೀರೇಶ ಬೋಳಶೆಟ್ಟಿ ನರೋಣಾ ನಿರೂಪಿಸಿ, ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.