ಸೇಡಂ: ತಾಲ್ಲೂಕಿನ ಕಾಗಿಣಾ ನದಿ ನೀರಿನ ಪ್ರವಾಹ ಹೆಚ್ಚಿದ್ದರಿಂದ ಮಳಖೇಡ ಗ್ರಾಮದ ಧಾರ್ಮಿಕ ಕ್ಷೇತ್ರ ಉತ್ತರಾಧಿ ಮಠಕ್ಕೆ ನೀರು ನುಗ್ಗಿದೆ. ಉತ್ತರಾಧಿ ಮಠದ ಸುತ್ತಲೂ ನೀರು ನಿಂತಿದೆ
ಕಾಗಿಣಾ ನದಿ ನೀರು ಸುತ್ತಲೂ ಇದ್ದು, ಉತ್ತರಾಧಿ ಮಠದ ಕೆಳ ಮಹಡಿ ಭಾಗಶಃ ಮುಳುಗಿದೆ. ಭಾನುವಾರ ಬೆಳಿಗ್ಗೆ ನೀರು ಬರುತ್ತಿರುವ ಮಠದ ಅರ್ಚಕರ ಗಮನಕ್ಕೆ ಬಂದು ಬೆಳಿಗ್ಗೆ 5.30 ನಿಮಿಷಕ್ಕೆ ತೊಡೆವರೆಗೆ ಇದ್ದ ನೀರಲ್ಲಿಯೇ ಜಯತೀರ್ಥರ ಮೂಲ ವೃಂದಾವನಕ್ಕೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪಂಚಾಮೃತಾಭಿಷೇಕ, ಹಸ್ತೋದಕದ ನಂತರ ಶೀಘ್ರವೇ ಮರಲಿದ್ದಾರೆ.
‘ನಿತ್ಯವು ಪೂಜೆ ಮಾಡಿದ ನಂತರವೇ ಕೆಲಸ ಮಾಡಲು ಸಾಧ್ಯ. ಹೀಗಾಗಿ ನಾವು ಪೂಜೆ ಮಾಡಿದ್ದೇವೆ. ಮೂಲ ವೃಂದಾವನ ಪೂರ್ಣ ಮುಳುಗಿದ್ದರೆ ಪೂಜೆ ಮಾಡಲು ಸಾಧ್ಯವಿಲ್ಲ. ಜೊತೆಗೆ ನಾವು ಏನನ್ನು ಸೇವಿಸುವುದಿಲ್ಲ’ ಎಂದು ಮಠದ ವ್ಯವಸ್ಥಾಪಕ ವೆಂಕಣ್ಣಾಚಾರ್ಯ ಹೇಳಿದ್ದಾರೆ.
ಮಠದ ಸಭಾಂಗಣ, ಮೊದಲ ಮಹಡಿ, ಮೇಲ್ಮಹಡಿ ತಳದಲ್ಲಿ ನೀರು ಬಂದಿದೆ. ಅಲ್ಲದೆ ಮಠದಲ್ಲಿ 30ಕ್ಕೂ ಅಧಿಕ ಜಾನುವಾರುಗಳಿದ್ದು, ಮೂವರು ಭಕ್ತರಿದ್ದಾರೆ ಎನ್ನಲಾಗಿದೆ. ಸುರಕ್ಷತೆ ಕಾಪಾಡಿಕೊಳ್ಳಲಾಗಿದ್ದು, ಯಾವುದೇ ತೊಂದರೆಯಿಲ್ಲ ಎನ್ನಲಾಗುತ್ತಿದೆ.
‘ನೀರಿನ ಪ್ರವಾಹ ಹೆಚ್ಚಿದ್ದರಿಂದ ತೊಂದರೆಗಳಾಗುವ ಸಾಧ್ಯತೆಯಿದೆ. ದವಸ ಧಾನ್ಯಗಳನ್ನು, ಕಿರಾಣಿ, ಬಟ್ಟೆ ಹಾಗೂ ಜಾನುವಾರುಗಳ ಸಮೇತ ಮೇಲೆ ಸುರಕ್ಷಿತ ಸ್ಥಳದಲ್ಲಿರುವಂತೆ ಸೂಚಿಸಿದ್ದಾರೆ. ಸ್ಥಳೀಯ ಕಾರ್ಮಿಕರಿಂದ ಮತ್ತು ಭಕ್ತರ ಸಹಾಯ ಪಡೆದು ಕೆಲಸ ಮಾಡಲಾಗುತ್ತಿದೆ. ಪ್ರತಿ ವರ್ಷ ಮಳೆಗಾಲದಲ್ಲಿ ಈ ರೀತಿ ಸಮಸ್ಯೆ ಉದ್ಭವಿಸುತ್ತದೆ ಎಂದು ಸರ್ಕಾರ ಸಾಕಷ್ಟು ತಡೆಗೋಡೆ ನಿರ್ಮಿಸಿದೆ ಆದರೂ ಸಹ ಪ್ರಕೃತಿ ಮುಂದೆ ಯಾರು ದೊಡ್ಡವರಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.