ADVERTISEMENT

ಯಡ್ರಾಮಿ: ಮೂಲ ಸೌಕರ್ಯ ವಂಚಿತ ಗ್ರಾಮ; ಈವರೆಗೂ ಬಸ್‌ ಸೌಕರ್ಯವೇ ಇಲ್ಲ

ಮಂಜುನಾಥ ದೊಡಮನಿ
Published 3 ಫೆಬ್ರುವರಿ 2023, 5:04 IST
Last Updated 3 ಫೆಬ್ರುವರಿ 2023, 5:04 IST
ಅಖಂಡಹಳ್ಳಿಯಲ್ಲಿ ಬಾವಿ ನೀರು ಪಾಚಿಗಟ್ಟಿರುವುದು
ಅಖಂಡಹಳ್ಳಿಯಲ್ಲಿ ಬಾವಿ ನೀರು ಪಾಚಿಗಟ್ಟಿರುವುದು   

ಯಡ್ರಾಮಿ: ಕುಡಿಯುವ ನೀರು, ಶೌಚಾಲಯ, ಸಿ.ಸಿ ರಸ್ತೆ, ಸಾರಿಗೆ ವ್ಯವಸ್ಥೆ ಸೇರಿದಂತೆ ಅನೇಕ ಸಮಸ್ಯೆಗಳ ತಾಣ ಅಖಂಡಹಳ್ಳಿ ಗ್ರಾಮ.

ಇದು ತಾಲ್ಲೂಕಿನ ಸುಂಬಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದೆ. ಇಲ್ಲಿ ಸುಮಾರು 300 ಮನೆಗಳಿದ್ದು 800 ಜನಸಂಖ್ಯೆ ಇದೆ. ಅಖಂಡಹಳ್ಳಿ ಗ್ರಾಮದಲ್ಲೇ ಮೂರು ಜನ ಗ್ರಾಮ ಪಂಚಾಯಿತಿ ಸದಸ್ಯರಿದ್ದರೂ ಸಮಸ್ಯೆ ಬಗೆಹರಿದಿಲ್ಲ.

ಈ ಗ್ರಾಮದಲ್ಲಿ ಮೂರು ಬಾವಿಗಳಿದ್ದು ಎರಡು ಸ್ವಚ್ಛತೆಯನ್ನೇ ಕಂಡಿಲ್ಲ. ಕೊಳವೆ ಬಾವಿಯೇ ಇವರಿಗೆ ಆಸರೆಯಾಗಿ ನಿಂತಿದೆ. ಸರ್ಕಾರದಿಂದ ಮಾಡಿದ ಕುಡಿಯುವ ನೀರಿನ ಟ್ಯಾಂಕ್ ಸೋರಿಕೆಯಾಗುತ್ತಿದೆ. ಈ ಕುರಿತು ಗ್ರಾಮ ಪಂಚಾಯಿತಿಗೆ ಹೇಳಿದರೂ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು.

ADVERTISEMENT

ಇನ್ನು ಶುದ್ಧ ಕುಡಿಯುವ ನೀರಿನ ಘಟಕವನ್ನು ಈ ಗ್ರಾಮಸ್ಥರು ಕಂಡಿಲ್ಲ. ಇಲ್ಲಿ ಹೊಸ ಮತ್ತು ಹಳೆ ಊರು ಎಂದು ಅಖಂಡಹಳ್ಳಿ ಗ್ರಾಮ ಎರಡು ಭಾಗವಾಗಿ ಬೇರ್ಪಟ್ಟಿದೆ. ಹೊಸ ಊರಿನ ಜನರು ಹಳೆ ಊರಿಗೆ ತೆರಳಿ ಅಲ್ಲಿರುವ ಕೊಳವೆ ಬಾವಿಯ ನೀರು ತರಬೇಕು. ಗ್ರಾಮದ ವಾರ್ಡ್‌ಗಳಲ್ಲಿ ಸಿಸಿ ರಸ್ತೆಗಳು ಅಷ್ಟಾಗಿ ಇಲ್ಲದ ಕಾರಣ ದೂಳಿನಲ್ಲೇ ಇಲ್ಲಿನ ಜನ ನಿತ್ಯ ಓಡಾಡುತ್ತಾರೆ.

ಅಖಂಡಹಳ್ಳಿ ಗ್ರಾಮದಿಂದ ಹಂಚಿನಾಳ, ಯತ್ನಾಳ, ಕೈನೂರ, ಐನಾಪುರ, ಕಾಚಾಪುರ ಗ್ರಾಮಗಳಿಗೆ ತೆರಳಲು ಇಲ್ಲಿನ ರಸ್ತೆ ಅಸ್ತವ್ಯಸ್ತವಾಗಿದೆ. ಇದರಿಂದ ಬೇಸತ್ತ ಗ್ರಾಮಸ್ಥರು ತಾವೇ ಹಣ ಸೇರಿಸಿ, ಹಂಚಿನಾಳ ಮಾರ್ಗಕ್ಕೆ ಮರಮ್ ಹಾಕಿಸಿ ಅರ್ಧ ಕಿ.ಮೀ. ರಸ್ತೆ ನಿರ್ಮಾಣ ಮಾಡಿಕೊಂಡಿದ್ದಾರೆ.

ಗ್ರಾಮ ಹುಟ್ಟಿನಿಂದ ಇಲ್ಲಿಯತನಕ ಬಸ್ ಸೌಕರ್ಯವಿಲ್ಲ. ಈ ಗ್ರಾಮದ 37 ವಿದ್ಯಾರ್ಥಿಗಳು ಯಡ್ರಾಮಿ ಶಾಲಾ-ಕಾಲೇಜಿಗೆ ಕಾಲ್ನಡಿಗೆ ಮೂಲಕವೇ ಹೋಗಿ ಬರುತ್ತಾರೆ. ಸಾರಿಗೆ ಇಲಾಖೆ ಈ ಗ್ರಾಮಕ್ಕೆ ಇನ್ನೂ ಬಸ್ ಓಡಿಸುವ ಮನಸು ಮಾಡಿಲ್ಲ ಎಂಬುದೇ ವಿಪರ್ಯಾಸ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.