ಕಲಬುರಗಿ: ರಾಜ್ಯದಲ್ಲಿ ಸಹಕಾರ ಸಂಘಗಳ ಸದಸ್ಯರಿಗಾಗಿ 2022–23ನೇ ಸಾಲಿನಲ್ಲಿ ಪರಿಷ್ಕೃತ ಯಶಸ್ವಿನಿ ಯೋಜನೆಯನ್ನು ಪ್ರಾರಂಭಿಸಲಾಗಿದ್ದು, ಈ ಯೋಜನೆಯಡಿ 2022–23ನೇ ಸಾಲಿನಲ್ಲಿ 48.24 ಲಕ್ಷ ಮತ್ತು 2023–24ನೇ ಸಾಲಿನಲ್ಲಿ 41.54 ಲಕ್ಷ ಸದಸ್ಯರ ನೋಂದಣಿಯಾಗಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಉತ್ತರಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯ ಸುನಿಲ್ ವಲ್ಯಾಪುರೆ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಈ ಯೋಜನೆಯಡಿ ನೋಂದಣಿ ಮಾಡಿಕೊಳ್ಳಲು ಏಪ್ರಿಲ್‌ನಿಂದ ಜೂನ್‌ವರೆಗೆ ಅವಕಾಶ ಕಲ್ಪಿಸಲಾಗಿತ್ತು. ಯಶಸ್ವಿನಿ ಟ್ರಸ್ಟ್ ಗುರುತಿಸಿದ 1,650 ಚಿಕಿತ್ಸೆಗಳು ಮತ್ತು 478 ಐಸಿಯು ಚಿಕಿತ್ಸೆಗಳು ಸೇರಿ ಒಟ್ಟು 2,128 ಚಿಕಿತ್ಸಾ ಸೌಲಭ್ಯಗಳನ್ನು ರಾಜ್ಯದ ಯಶಸ್ವಿನಿ ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ಒದಗಿಸಲಾಗುತ್ತಿದೆ’ ಎಂದು ಹೇಳಿದ್ದಾರೆ.
‘ರಾಜ್ಯದಾದ್ಯಂತ 697 ಆಸ್ಪತ್ರೆಗಳು ನೆಟ್‌ವರ್ಕ್ ಆಸ್ಪತ್ರೆಗಳಾಗಿ ನೋಂದಾಯಿಸಿಕೊಂಡಿದ್ದು, 2022–23ನೇ ಸಾಲಿನಲ್ಲಿ 66,306 ಫಲಾನುಭವಿಗಳು ₹ 108.84 ಕೋಟಿ ಮೊತ್ತದ ಚಿಕಿತ್ಸೆ ಪಡೆದಿರುತ್ತಾರೆ. 2023–24ನೇ ಸಾಲಿನಲ್ಲಿ 17,416 ಫಲಾನುಭವಿಗಳು ₹ 32.01 ಕೋಟಿ ಮೊತ್ತದ ಚಿಕಿತ್ಸೆ ಪಡೆದಿರುತ್ತಾರೆ. ಇದಕ್ಕಾಗಿ ಎರಡು ವರ್ಷಗಳಲ್ಲಿ ಸರ್ಕಾರದಿಂದ ಒಟ್ಟು ₹131.28 ಕೋಟಿ ಬಿಡುಗಡೆಯಾಗಿರುತ್ತದೆ’ ಎಂದು ತಿಳಿಸಿದ್ದಾರೆ.
ಡಿಎಂಎಫ್‌ನಿಂದ ₹140.87 ಕೋಟಿ ಸಂಗ್ರಹ: ‘ರಾಜ್ಯದಲ್ಲಿ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್‌ಗಳಿಂದ (ಡಿಎಂಎಫ್) ಪ್ರಸಕ್ತ ಸಾಲಿನಲ್ಲಿ ಮೇ ಅಂತ್ಯದವರೆಗೆ ₹140.87 ಕೋಟಿ ಸಂಗ್ರಹ ಆಗಿದೆ’ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಉತ್ತರಿಸಿದ್ದಾರೆ.
ಪರಿಷತ್ ಸದಸ್ಯ ಸುನಿಲ್ ವಲ್ಯಾಪುರೆ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘2021–22ರಲ್ಲಿ ₹824.91 ಕೋಟಿ, 2022–23ರಲ್ಲಿ ₹693.80 ಕೋಟಿ, 2023–24ರಲ್ಲಿ ₹973.92 ಕೋಟಿ ಸಂಗ್ರಹವಾಗಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿ ಮತ್ತು ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ ನಿಯಮಗಳು 2016ರ ಅನ್ವಯ ಸಂಬಂಧಿತ ಜಿಲ್ಲೆಗಳ ಖನಿಜ ಪ್ರತಿಷ್ಠಾನ ಟ್ರಸ್ಟ್‌ಗಳಲ್ಲಿ ಸಂಗ್ರಹವಾಗುವ ವಂತಿಕೆಯನ್ನು ಗಣಿಬಾಧಿತ ಪ್ರದೇಶಗಳ ಅಭಿವೃದ್ಧಿ ಮತ್ತು ಅಲ್ಲಿ ವಾಸಿಸುವ ಜನರ ಕಲ್ಯಾಣ ಯೋಜನೆಗಳಿಗೆ ಈ ಡಿಎಂಎಫ್ ಮೊತ್ತವನ್ನು ಮಾತ್ರ ವಿನಿಯೋಗಿಸಬೇಕು. ಹಾಗಾಗಿ, ವಿಧಾನ ಸಭಾ ಮತ್ತು ವಿಧಾನ ಪರಿಷತ್ ಶಾಸಕರಿಗೆ ಈ ನಿಧಿಯನ್ನು ಪ್ರತ್ಯೇಕವಾಗಿ ವಿನಿಯೋಗಿಸಲು ಅವಕಾಶ ಇರುವುದಿಲ್ಲ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.