ADVERTISEMENT

ಬಡ್ಡಿ ವ್ಯವಹಾರ: ಯುವಕನ ಕೊಲೆ

ಬಡ್ಡಿ ನೀಡದ ಕಾರಣ ಅವಮಾನಿಸಿದ ಮಹಿಳೆ; ಸೇಡಿಗೆ ಪುತ್ರನ ಹತ್ಯೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2020, 3:57 IST
Last Updated 12 ಜುಲೈ 2020, 3:57 IST

ಕಲಬುರ್ಗಿ: ನಗರದಲ್ಲಿ ಈಚೆಗೆ ಬಡ್ಡಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಗುಂಪೊಂದು ಯುವಕನನ್ನು ಮಾರಕಾಸ್ತ್ರದಿಂದ ಇರಿದು ಕೊಲೆ ಮಾಡಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮೂವರು ಆರೋಪಿಗಳನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.

ವಿಶಾಲ್‌ (27) ಕೊಲೆಯಾದವರು. ಆರೋಪಿಗಳಾದ ತಾರಫೈಲ್ ಬಡಾವಣೆಯ ಸುನೀಲ್ ಅಲಿಯಾಸ್ ಸೋನು ಕಾಂಬಳೆ, ಶಿವಲಿಂಗ ಹುಲಿಮನಿ ಮತ್ತು ರಾಜು ಗುರಸುಣಗಿ ಎಂಬುವರನ್ನು ನಗರದ ವಿಶ್ವವಿದ್ಯಾಲಯ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ವಿಶಾಲ್‌ನ ತಾಯಿ ಬಳಿ ಆರೋಪಿ ಸುನೀಲ್‌ ₹ 3 ಲಕ್ಷ ಸಾಲ ಪಡೆದಿದ್ದ. ಆದರೆ, ಇದರ ಬಡ್ಡಿಯನ್ನು 4 ತಿಂಗಳಿಂದ ಕೊಟ್ಟಿರಲಿಲ್ಲ. ವಿಶಾಲ್‌ನ ತಾಯಿ ಪದೇಪದೇ ಬಡ್ಡಿ ಕೇಳುತ್ತಲೇ ಇದ್ದರು. ಇದೇ ಕಾರಣಕ್ಕೆ ಸಾಲ ಕೊಟ್ಟವರು ಮತ್ತು ಪಡೆದವರ ಮಧ್ಯೆ ಜಗಳ ನಡೆಯುತ್ತಿತ್ತು. ಈಚೆಗೆ ನಡೆದ ಜಗಳದಲ್ಲಿ ವಿಶಾಲ್‌ನ ತಾಯಿ ಸುನೀಲ್‌ಗೆ ತೀವ್ರ ಅವಮಾನಿಸಿದ್ದರು ಎನ್ನಲಾಗಿದೆ.‌

ADVERTISEMENT

ಇದರಿಂದ ಕೋಪಗೊಂಡ ಸುನೀಲ್‌ ಸ್ನೇಹಿತರಾದ ಶಿವಲಿಂಗ ಹಾಗೂ ರಾಜು ಅವರನ್ನು ಸೇರಿಸಿಕೊಂಡು ಸಾಲ ನೀಡಿದ ಮಹಿಳೆ ಕೊಲೆಗೆ ಸಂಚು ರೂಪಿಸಿದ್ದ. ಆದರೆ, ಅದಕ್ಕೆ ಅವಕಾಶ ಸಿಗದ ಕಾರಣ ಅವರ ಪುತ್ರ ವಿಶಾಲ್‌ಗೆ ಕೊಲ್ಲಲು ಉಪಾಯ ಹೂಡಿದ್ದರು.

ಜೂನ್ 26ರಂದು ಶಹಾಬಾದ್– ನಾಗನಹಳ್ಳಿ ರಸ್ತೆಯಲ್ಲಿನ ಬಯಲು ಜಾಗಕ್ಕೆ ಮೂವರೂ ಆರೋಪಿಗಳು ವಿಶಾಲ್‌ಗೆ ಕರೆದೊಯ್ದು ಮದ್ಯ ಕುಡಿದು ಪಾರ್ಟಿ ಮಾಡಿದ್ದರು. ನಂತರ ಜಗಳ ತೆಗೆದು, ಚಾಕುವಿನಿಂದ ಇರಿದು ಕೊಲೆ ಮಾಡಿದರು. ಶವವನ್ನು ನಾಲೆಯಲ್ಲಿ ಬಿಸಾಕಿ ಹೋಗಿದ್ದರು. ಮರುದಿನ ಧಾರಾಕಾರ ಮಳೆಯಾಗಿದ್ದರಿಂದ ನಾಲಾದಲ್ಲಿ ನೀರು ತುಂಬಿ ಹರಿದು, ಶವ ನಾಗನಹಳ್ಳಿಯವರೆಗೂ ತೇಲಿಹೋಗಿತ್ತು.

ಜೂನ್‌ 29ರಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಶವವನ್ನು ಪೊಲಿಸರು ಅಪರಿಚಿತವೆಂದು ಪರಿಗಣಿಸಿದ್ದರು. ಆತ ಧರಿಸಿದ್ದ ಒಳ ಉಡುಪು ಮತ್ತು ಪ್ಯಾಂಟ್‌ ನೋಡಿಕೊಂಡು ಆತನ ತಾಯಿಯೇ ಗುರುತಿಸಿದ್ದರು. ಅಲ್ಲದೇ, ‘ವಿಶಾಲ್‌ ಒಬ್ಬ ಯುವತಿಯನ್ನು ಪ್ರೀತಿಸುತ್ತಿದ್ದ. ಇದರಿಂದ ಕೋಪಗೊಂಡು ಆಕೆಯ ಕಡೆಯವರೇ ಕೊಲೆ ಮಾಡಿದ್ದಾರೆ’ ಎಂದು ಪೊಲೀಸರಿಗೆ ದೂರು ನೀಡಿದ್ದರು.

ನಗರ ಪೊಲೀಸ್ ಆಯುಕ್ತ ಎನ್‌.ಸತೀಶಕುಮಾರ, ಡಿಸಿಪಿ ಕಿಶೋರಬಾಬು, ಎಸಿಪಿ ಎಸ್.ಎಚ್.ಸುಬೇದಾರ ಅವರ ಮಾರ್ಗದರ್ಶನದಲ್ಲಿ ಇನ್‍ಸ್ಪೆಕ್ಟರ್ ಸಂಗಮನಾಥ ಹಿರೇಮಠ ನೇತೃತ್ವದಲ್ಲಿ ಪಿಎಸ್‍ಐ ನಾಗಭೂಷಣ ಮತ್ತು ಸಿಬ್ಬಂದಿ ಈ ಕೊಲೆಯ ಜಾಡು ಬೇಧಿಸಿದರು. ಮೊಬೈಲ್‌ ಕರೆಗಳ ಸುಳಿವು ಹಿಡಿದು, ಮಾಹಿತಿ ಕಲೆ ಆರೋಪಿಗಳನ್ನು ಪತ್ತೆ ಮಾಡಿದರು.

ನಂತರವೇ, ಈ ಕೊಲೆಗೆ ಪ್ರೇಮ ಪ್ರಕರಣ ಕಾರಣವಲ್ಲ. ಹಣಕಾಸಿನ ವೈಷಮ್ಯ ಎಂಬುದು ತನಿಖೆಯಿಂದ ಬೆಳಕಿಗೆ ಬಂತು.

ಮಹಿಳಾ ಕಂಡಕ್ಟರ್ ಮೇಲೆ ಹಲ್ಲೆ

ಕಲಬುರ್ಗಿ: ಕಲಬುರ್ಗಿ– ಹುಮನಾಬಾದ್‌ ಮಾರ್ಗದ ಸಾರಿಗೆ ಸಂಸ್ಥೆಯ ಬಸ್‍ನಲ್ಲಿ ಕರ್ತವ್ಯದಲ್ಲಿದ್ದ ಮಹಿಳಾ ಕಂಡಕ್ಟರ್ ಮೇಲೆ ದುಷ್ಕರ್ಮಿಗಳು ಶನಿವಾರ ಮಾರಕಾಸ್ತ್ರಗಳಿಂದ ದಾಳಿ ನಡೆಸಿ, ಕೊಲೆ ಮಾಡಲು ಯತ್ನಿಸಿದ್ದಾರೆ. ಈ ವೇಳೆ ಕಂಡಕ್ಟರ್ ರಕ್ಷಣೆಗೆ ಬಂದ ಮೂವರಿಗೂ ಗಾಯಗಳಾಗಿವೆ.

ಸಾರಿಗೆ ಘಟಕ–1ರಲ್ಲಿ ಕೆಲಸ ಮಾಡುತ್ತಿರುವ ಸುಮಿತ್ರಾ ಎಂಬುವರೇ ಹಲ್ಲೆಗೆ ಒಳಗಾದವರು. ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು ಅಲ್ಲದೇ ಸ್ಕಾರ್ಫ್ ಎಳೆದಾಡಿ ಬಸ್ಸಿನಲ್ಲಿ ಅವಮಾನಿಸಿದ್ದಾರೆ ಎಂದು ಕಂಡಕ್ಟರ್‌ ದೂರು ನೀಡಿದ್ದಾರೆ. ತಮ್ಮ ರಕ್ಷಣೆಗೆ ಬಂದ ಪ್ರಯಾಣಿಕರಾದ ಗಂಗಾರಾಮ ಜಾಧವ ಮತ್ತು ಅಶೋಕ ದಾನಜಿ ಎಂಬುವರಿಗೆ ಗಾಯಗಳಾಗಿವೆ ಎಂದೂ ತಿಳಿಸಿದ್ದಾರೆ.‌

‘ಬಸ್ ಹುಮನಾಬಾದ್‌ ಕಡೆಗೆ ಹೋಗುವಾಗ ರಿಂಗ್‍ ರಸ್ತೆಯಲ್ಲಿ ಬಸ್ ನಿಂತಿತ್ತು. ಆಗ ಬಂದ ವ್ಯಕ್ತಿ ಬಸ್‌ ಎಲ್ಲಿಗೆ ಹೋಗುತ್ತದೆ ಎಂದು ಕೇಳಿದ. ನಾನು ಬೇರೆ ಪ್ರಯಾಣಿಕರ ಜತೆಗೆ ಮಾತನಾಡುತ್ತಿದ್ದೆ. ನಾನು ಗಮನಿಸಿಲ್ಲ ಎಂದು ಕೋಪಗೊಂಡ ವ್ಯಕ್ತಿ ಅವಾಚ್ಯ ಪದಗಳಿಂದ ಬೈದು ಕರ್ತವ್ಯಕ್ಕೆ ಅಡ್ಡಿಪಡಿಸಿದ. ಉಳಿದ ಪ್ರಯಾಣಿಕರು ಬಸ್ ಹತ್ತಿಸಿಕೊಂಡ ನಂತರ ಮುಂದಕ್ಕೆ ಹೊರಟೆವು. ಆದರೆ, ಆತ ಮೊಬೈಲ್ ಕರೆ ಮಾಡಿ ಮೂವರನ್ನು ಕರೆಸಿಕೊಂಡು ಬಸ್ ಅಡ್ಡಗಟ್ಟಿ ನಿಲ್ಲಿಸಿದ. ಮೂವರೂ ಒಳನುಗ್ಗಿ ಹಲ್ಲೆ ಮಾಡಿದರು’ ಎಂದೂ ದೂರಿದ್ದಾರೆ.

ಪ್ರಯಾಣಿಕರು ರಕ್ಷಣೆಗೆ ಬಂದಿದ್ದರಿಂದ ಬಸ್‌ನಿಂದ ಇಳಿದು ಪರಾರಿಯಾದರು. ಹಲ್ಲೆ ಮಾಡಿದವರಲ್ಲಿ ಅಂಕುಶ, ಮಹೇಶ ಎಂಬ ಇಬ್ಬರ ಹೆಸರು ಗೊತ್ತಾಗಿದ್ದು, ಉಳಿದವರು ಗೊತ್ತಾಗಿಲ್ಲ. ಎಲ್ಲರೂ ತಲೆಮರೆಸಿಕೊಂಡಿದ್ದಾರೆ. ಗ್ರಾಮೀಣ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.