ADVERTISEMENT

ಪೊಲೀಸರಿಂದ ತಪ್ಪಿಕೊಳ್ಳಲು ಯತ್ನ; ಕಾಲು ಜಾರಿ ಬಿದ್ದು ಯುವಕ ಸಾವು

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2022, 13:51 IST
Last Updated 31 ಆಗಸ್ಟ್ 2022, 13:51 IST
ಸಿದ್ದಪ್ಪ ಕೊಂಡಾ
ಸಿದ್ದಪ್ಪ ಕೊಂಡಾ   

ವಾಡಿ (ಕಲಬುರಗಿ ಜಿಲ್ಲೆ): ಜೂಜಾಟದ ಅಡ್ಡೆ ಮೇಲೆ ದಾಳಿ ನಡೆಸಿದ ಪೊಲೀಸರು ಬಂಧಿಸುವರು ಎಂಬ ಭೀತಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಯುವಕ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ಮಂಗಳವಾರ ತಡರಾತ್ರಿ ಚಿತ್ತಾಪುರ ತಾಲ್ಲೂಕಿನ ಲಾಡ್ಲಾಪುರ ಗ್ರಾಮದಲ್ಲಿ ನಡೆದಿದೆ.

ಲಾಡ್ಲಾಪುರದ ನಿವಾಸಿ ಸಿದ್ದಪ್ಪ ಕೊಂಡಾ (22) ಮೃತ ಯುವಕ. ಹಾಜಿಸರ್ವರ ಗುಡ್ಡದ ಬಳಿ ಜೂಜಾಟ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ವಾಡಿ ಠಾಣೆಯ ಅಪರಾಧ ವಿಭಾಗದ ಪಿಎಸ್ಐ ಶಿವಕಾಂತ ಹಾಗೂ ಸಿಬ್ಬಂದಿಗ ದಾಳಿ ನಡೆಸಿದರು. ಕೆಲವರು ಹೆದರಿಕೊಂಡು ಓಡಿದರೆ, ಕೆಲವರು ಸಿಕ್ಕಿಬಿದ್ದರು.

ತಪ್ಪಿಸಿಕೊಳ್ಳಲು ಯತ್ನಿಸಿದ ಸಿದ್ದಪ್ಪ ಇಳಿಜಾರು ಪ್ರದೇಶ, ತಗ್ಗು, ಮುಳ್ಳುಕಂಟಿಗಳಿಂದ ಕೂಡಿದ ಸ್ಥಳದಲ್ಲಿ ಓಡುವಾಗ ಕಾಲು ಜಾರಿ ಬಿದ್ದು ಮೃತಪಟ್ಟ. ಬುಧವಾರ ಬೆಳಿಗ್ಗೆ ಶವವಾಗಿ ಪತ್ತೆಯಾದ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ರಾತ್ರಿ ಸಿದ್ದಪ್ಪ ಮನೆಗೆ ಬಾರದಿದ್ದಾಗ ಕುಟುಂಬ ಸದಸ್ಯರು ಆತಂಕಗೊಂಡಿದ್ದರು. ಬೆಳಿಗ್ಗೆ
ಬಹಿರ್ದೆಸೆಗೆ ಗ್ರಾಮಸ್ಥರು ತೆರಳಿದ್ದ ವೇಳೆ ಶವ ಪತ್ತೆಯಾಗಿದೆ.

ಯುವಕನ ಸಾವಿಗೆ ಪೊಲೀಸರೇ ಕಾರಣ ಎಂದು ಆರೋಪಿಸಿ ಗ್ರಾಮಸ್ಥರು ಮತ್ತು ಕುಟುಂಬ ಸದಸ್ಯರು, ಲಾಡ್ಲಾಪುರ ಮಾರ್ಗದ ಕಲಬುರಗಿ-ಯಾದಗಿರಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

ಸ್ಥಳಕ್ಕೆ ಬಂದ ಚಿತ್ತಾಪುರ ಸಿಪಿಐ ಪ್ರಕಾಶ ಯಾತನೂರ, ವಾಡಿ ಪಿಎಸ್ ಐ ಮಹಾಂತೇಶ ಪಾಟೀಲ ಅವರು ಪ್ರತಿಭಟನಾಕಾರರ ಮನವೊಲಿಸಿದರು. ನಂತರ ಪ್ರತಿಭಟನೆ ಹಿಂಪಡೆಯಲಾಯಿತು. ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.