ADVERTISEMENT

ಅಧಿಕಾರ ದುರಪಯೋಗ: ಜಿಲ್ಲಾಧಿಕಾರಿಗೆ ದೂರು

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2011, 9:30 IST
Last Updated 17 ಅಕ್ಟೋಬರ್ 2011, 9:30 IST

ವಿರಾಜಪೇಟೆ: ಮಡಿಕೇರಿಯ ತೂಕ ಮತ್ತು ಅಳತೆ ಇಲಾಖೆ ಅಧಿಕಾರಿ ಎರಡು ದಿನಗಳ ಹಿಂದೆ ಬಿಟ್ಟಂಗಾಲದ ಸಹಕಾರ ಸಂಘಕ್ಕೆ ಭೇಟಿ ನೀಡಿ ಅವರ ಇಲಾಖೆಗೆ ಸಂಬಂಧಿಸದ ಗೊಬ್ಬರದ ದರ, ಮಾರಾಟದ ಇತರ ದಾಖಲೆಗಳನ್ನು ಪರಿಶೀಲಿಸಲು ಮುಂದಾಗಿ ಸಂಘದ ವ್ಯವಸ್ಥಾಪಕರ ಮೇಲೆ ದಬ್ಬಾಳಿಕೆ ನಡೆಸಿದ್ದಾರೆ ಎಂದು ಸಂಘದ ಅಧ್ಯಕ್ಷ ಚೇಂದ್ರಿಮಾಡಿ ಗಣೇಶ್ ನಂಜಪ್ಪ ಜಿಲ್ಲಾಧಿಕಾರಿ ಹಾಗೂ ಸಂಬಂಧಿಸಿದ ಸಚಿವರಿಗೆ ದೂರು ನೀಡಿದ್ದಾರೆ.

ಜಿಲ್ಲೆಯ ಸಹಕಾರ ಸಂಘಗಳ ಜಂಟಿ ನಿರ್ದೇಶಕರ ಆದೇಶದಂತೆ ಹಾಸನದಿಂದ ಗೊಬ್ಬರ ಸಾಗಾಣಿಕೆ ಮಾಡಿ ವೆಚ್ಚವನ್ನು ಗೊಬ್ಬರದ ಮಾರಾಟದ ದರಕ್ಕೆ ಸೇರಿಸಿ ಕಾನೂನು ಬದ್ಧವಾಗಿ ಗೊಬ್ಬರವನ್ನು ಸಂಘದ ಸದಸ್ಯರಿಗೆ ಹಾಗೂ ರೈತರುಗಳಿಗೆ ಮಾರಾಟ ಮಾಡಲಾಗುತ್ತಿದೆ. ಸರ್ಕಾರ ನಿಗದಿಪಡಿಸಿದ ದರದಲ್ಲಿಯೇ ಗೊಬ್ಬರ ವಿಲೇವಾರಿ ಮಾಡಲಾಗುತ್ತಿದೆ. ಈ ಕುರಿತು ಕೃಷಿ ಇಲಾಖೆ ಅಧಿಕಾರಿಗಳು ಶುಕ್ರವಾರ ಸಂಘಕ್ಕೆ ಭೇಟಿ ನೀಡಿ ಪರಿಶೀಲಿಸಿ ದೃಢೀಕರಿಸಿದ್ದರೂ ಇದನ್ನು ಲೆಕ್ಕಿಸದ ಅಧಿಕಾರಿ ಸಂಘದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ತೂಕ ಅಳತೆಯ ಬಗ್ಗೆ ಸಂಘದ ವ್ಯವಸ್ಥಾಪಕರನ್ನು ಪ್ರಶ್ನಿಸದ ಈ ಅಧಿಕಾರಿ, ಪರೋಕ್ಷವಾಗಿ ಹಣ ಕೇಳುವ ಹುನ್ನಾರದಲ್ಲಿದ್ದರು. ವ್ಯವಸ್ಥಾಪಕರು ಯಾವುದೇ ರೀತಿಯಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸದ್ದರಿಂದ ಗಡುವು ನೀಡಿ ತೆರಳಿದರು ಎಂದು ಸಂಘದ ವ್ಯವಸ್ಥಾಪಕ ಎ.ಪಿ. ಪೂಣಚ್ಚ ಹೇಳಿದರು.

ಈ ಅಧಿಕಾರಿಯ ವಿರುದ್ಧ ಜಿಲ್ಲಾಧಿಕಾರಿ, ಸಂಬಂಧಿಸಿದ ಸಚಿವರು ಹಾಗೂ ಮೇಲಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದು ಗಣೇಶ್ ನಂಜಪ್ಪ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕರಾದ ವಿಶ್ವ ನಂಜಪ್ಪ, ಕುಶ ಕಾರ್ಯಪ್ಪ ಹಾಜರಿದ್ದರು.

ರೂ. 2.5 ಕೋಟಿಗೆ ಪ್ರಸ್ತಾವನೆ: ಕೊಡಗು ಜಿಲ್ಲಾ ವಕ್ಪ್ ಮಂಡಳಿಯಿಂದ ವಿವಿಧ ಮಸೀದಿಗಳಿಗೆ ವಿತರಿಸಲು ಸರ್ಕಾರಕ್ಕೆ 2.5 ಕೋಟಿ ರೂಪಾಯಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಂಡಳಿಯ ಜಿಲ್ಲಾ ಆಡಳಿತಾಧಿಕಾರಿ ಪಿ.ಎಂ.ಉಸ್ಮಾನ್ ತಿಳಿಸಿದ್ದಾರೆ.

ಜಿಲ್ಲೆಯ ವಿವಿಧ ಮಸೀದಿ, ಮದರಸಗಳ ಪ್ರಗತಿ ಹಾಗೂ ಅಭಿವೃದ್ಧಿ ಕಾಮಗಾರಿ ಸೇರಿದಂತೆ ವಿವಿಧ ಸೌಲಭ್ಯ ಒದಗಿಸಲು ಜಿಲ್ಲಾ ವಕ್ಪ್ ಮಂಡಳಿಗೆ ಯೋಜನೆಗಳ ಅಂದಾಜು ವೆಚ್ಚದ ಪಟ್ಟಿ ನೀಡಿರುವುದನ್ನು ಪರಿಶೀಲಿಸಿ ಸರ್ಕಾರಕ್ಕೆ ಈ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.