ADVERTISEMENT

ಅಧ್ಯಕ್ಷೆಯಾಗಿ ಕವಿತಾ ಪ್ರಭಾಕರ್, ಉಪಾಧ್ಯಕ್ಷೆಯಾಗಿ ರೇಣುಕಾ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2011, 7:40 IST
Last Updated 10 ಫೆಬ್ರುವರಿ 2011, 7:40 IST

ಮಡಿಕೇರಿ: ಮಡಿಕೇರಿ ತಾಲ್ಲೂಕು ಪಂಚಾಯ್ತಿಯ ನೂತನ ಅಧ್ಯಕ್ಷೆ ಯಾಗಿ ಬಿಜೆಪಿಯ ಕವಿತಾ ಪ್ರಭಾಕರ್ ಹಾಗೂ ಉಪಾಧ್ಯಕ್ಷೆಯಾಗಿ ರೇಣುಕಾ ಚೆನ್ನಿಗಯ್ಯ ಬುಧವಾರ ಅವಿರೋಧವಾಗಿ ಆಯ್ಕೆಯಾದರು.ಒಟ್ಟು 11 ಸದಸ್ಯ ಬಲವಿರುವ ಮಡಿಕೇರಿ ತಾ.ಪಂ.ನಲ್ಲಿ ಬಿಜೆಪಿ ಏಳು ಸ್ಥಾನಗಳಲ್ಲಿ ಗೆಲುವು ಸಾಧಿಸಿ ಬಹುಮತ ಪಡೆದಿದೆ. ಬಿಜೆಪಿಯಲ್ಲಿ ಗೆದ್ದವರೆಲ್ಲರೂ ಮಹಿಳೆಯರಾಗಿದ್ದರೆ, ಕಾಂಗ್ರೆಸ್‌ನಿಂದ ಗೆದ್ದ ನಾಲ್ಕು ಮಂದಿ ಪುರುಷರಾಗಿರುವುದು ಈ ಬಾರಿಯ ವಿಶೇಷ.

ನಗರದ ತಾ.ಪಂ. ಕಚೇರಿ ಸಭಾಂಗಣದಲ್ಲಿ ಬೆಳಿಗ್ಗೆ 11 ಗಂಟೆಗೆ ನಡೆದ ಚುನಾವಣೆಯಲ್ಲಿ ಸಾಮಾನ್ಯ ಮಹಿಳೆಗೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಭಾಗಮಂಡಲ ಕ್ಷೇತ್ರದಿಂದ ಗೆದ್ದಿರುವ ಕವಿತಾ ಪ್ರಭಾಕರ್ ಹಾಗೂ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾದ ಉಪಾಧ್ಯಕ್ಷ ಸ್ಥಾನಕ್ಕೆ ಮರಗೋಡು ಕ್ಷೇತ್ರದಿಂದ ಆಯ್ಕೆಯಾದ ರೇಣುಕಾ ಚೆನ್ನಿಗಯ್ಯ ನಾಮಪತ್ರ ಸಲ್ಲಿಸಿದರು. ಇವರಿಬ್ಬರನ್ನು ಹೊರತುಪಡಿಸಿದರೆ ಉಳಿದ ಆಕಾಂಕ್ಷಿಗಳ್ಯಾರೂ ನಾಮಪತ್ರ ಸಲ್ಲಿಸದಿದ್ದರಿಂದ ಅಧ್ಯಕ್ಷ ಸ್ಥಾನಕ್ಕೆ ಕವಿತಾ ಪ್ರಭಾಕರ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ರೇಣುಕಾ ಚೆನ್ನಿಗಯ್ಯ ಅವಿರೋಧವಾಗಿ ಆಯ್ಕೆ ಯಾಗಿದ್ದಾರೆ ಎಂದು ಚುನಾವಣಾ ಧಿಕಾರಿಯಾಗಿ ಕಾರ್ಯನಿರ್ವಹಿಸಿದ ಉಪ ವಿಭಾಗಾಧಿಕಾರಿ ಡಾ.ಎಂ.ಆರ್. ರವಿ ಪ್ರಕಟಿಸಿದರು.

ಆನಂತರ ಮಾತನಾಡಿದ ತಾ.ಪಂ. ನೂತನ ಅಧ್ಯಕ್ಷೆ ಕವಿತಾ ಪ್ರಭಾಕರ್, ‘ಇದೊಂದು ಅತ್ಯಂತ ಜವಾಬ್ದಾರಿ ಯುತ ಸ್ಥಾನ. ಪಕ್ಷದ ವರ್ಚಸ್ಸಿಗೆ ಧಕ್ಕೆ ಬಾರದ ರೀತಿಯಲ್ಲಿ ನನ್ನ ಅಧಿಕಾರ ಅವಧಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುವ ಮೂಲಕ ಅಭಿವೃದ್ಧಿ ಕಾರ್ಯಗಳಿಗೂ ಶ್ರಮಿಸುತ್ತೇನೆ’ ಎಂದು ಭರವಸೆ ನೀಡಿದರು.

ಉಪಾಧ್ಯಕ್ಷೆ ರೇಣುಕಾ ಚೆನ್ನಿಗಯ್ಯ ಮಾತನಾಡಿ, ತಾಲ್ಲೂಕಿನ ಜನರ ಕುಂದುಕೊರತೆಗಳ ಪರಿಹಾರಕ್ಕೆ ಆದ್ಯತೆ ನೀಡುವುದಾಗಿ ಆಶ್ವಾಸನೆ ನೀಡಿದರು. ಕಾಂಗ್ರೆಸ್ ಸದಸ್ಯ ನೆರ ವಂಡ ಉಮೇಶ್ ನೂತನ ಅಧ್ಯಕ್ಷೆ- ಉಪಾಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದರು. ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಎನ್.ಎಸ್. ಪುಟ್ಟಸ್ವಾಮಿ ಉಪಸ್ಥಿತ ರಿದ್ದರು.

ಬಳಿಕ ಜಿ.ಪಂ. ಅಧ್ಯಕ್ಷ ಶಾಂತೆಯಂಡ ರವಿಕುಶಾಲಪ್ಪ, ಬಿಜೆಪಿ ಜಿಲ್ಲಾ ವಕ್ತಾರ ಮನುಮುತ್ತಪ್ಪ, ತಾ.ಪಂ. ಮಾಜಿ ಅಧ್ಯಕ್ಷರಾದ ನಾಗೇಶ್ ಕುಂದಲ್ಪಾಡಿ, ನಾಪಂಡ ರವಿಕಾಳಪ್ಪ ಮತ್ತಿತರರು ನೂತನ ಅಧ್ಯಕ್ಷೆ- ಉಪಾಧ್ಯಕ್ಷರಿಗೆ ಹೂಮಾಲೆ ಹಾಕಿ ಅಭಿನಂದನೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.