ADVERTISEMENT

`ಅರೆ ಸೇನಾಪಡೆಗೆ ಸೌಲಭ್ಯ ನೀಡಲು ಕ್ರಮ'

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2012, 5:56 IST
Last Updated 22 ಡಿಸೆಂಬರ್ 2012, 5:56 IST

ಮಡಿಕೇರಿ: ಅರೆ ಸೇನಾಪಡೆಗೆ ಸೈನಿಕರಿಗೆ ಬೇಕಾದ ಸೌಲಭ್ಯವನ್ನು ಒದಗಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಇಲಾಖೆಯವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದೆಂದು ವಿಧಾನಸಭೆ ಅಧ್ಯಕ್ಷ ಕೆ.ಜಿ.ಬೋಪಯ್ಯ ಹೇಳಿದರು.

ನಗರದ ಕೆಳಗಿನಗೌಡ ಸಮಾಜದಲ್ಲಿ ಶುಕ್ರವಾರ ನಡೆದ ನಿವೃತ್ತ ಯೋಧರ ಒಕ್ಕೂಟದ ಅರೆಸೇನಾ ಪಡೆಯ ಪ್ರಥಮ ಅಧಿವೇಶನದಲ್ಲಿ ಮಾತನಾಡಿದರು.

ಗಡಿ ಭಾಗವನ್ನು ಕಾಯುವ ಮೂಲಕ ದೇಶದ ರಕ್ಷಣೆಯಲ್ಲಿ ಮಹತ್ತರ ಜವಾಬ್ದಾರಿ ಹೊತ್ತಿರುವ ಅರೆ ಸೇನಾ ಪಡೆಗೆ ಯಾವುದೇ ಸೌಲಭ್ಯ ನೀಡದಿರುವ ಸೈನಿಕ ಪುನರ್ವಸತಿ ಇಲಾಖೆಯ ನೀತಿ ಸರಿಯಲ್ಲ ಎಂದು ಹೇಳಿದರು.

ದೇಶದ ರಕ್ಷಣೆಯಲ್ಲಿ ಅರೆಸೇನಾ ಪಡೆಯ ಸೇವೆ ಮಹತ್ತರವಾಗಿದೆ. ಆದರೆ, ಇವರಿಗೆ ಯಾವುದೇ ಸೌಲಭ್ಯ ಪಡೆಯಲು ಮೀಸಲಾತಿ ಇಲ್ಲವೆಂದು ತಿಳಿದಿರಲಿಲ್ಲ. ಸಂಘವು ಹಲವು ಬೇಡಿಕೆಗಳನ್ನು ಸಲ್ಲಿಸಲು ಮನವಿ ಸಲ್ಲಿಸಿದ್ದು, ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಅರೆ ಸೇನಾಪಡೆಯ ನಿವೃತ್ತ ಯೋಧರ ಜಿಲ್ಲಾ ಕಚೇರಿ ಆರಂಭಿಸಲು ಸಂಘವು ಗುರುತಿಸುವ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡಲು ಅನುದಾನ ನೀಡಲಾಗುವುದು ಎಂದರು.

ಸಿ ಮತ್ತು ಡಿ ಜಾಗವನ್ನು ಅರಣ್ಯ ಇಲಾಖೆಗೆಯಿಂದ ಕಂದಾಯ ಇಲಾಖೆಗೆ ವಾಪಸ್ ಪಡೆಯಲು ಕಾನೂನು ತೊಡಕುಗಳಿಂದಾಗಿ ಜಿಲ್ಲೆಯಲ್ಲಿ ನಿವೃತ್ತ ಯೋಧರಿಗೂ ಭೂಮಿ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಅಪ್ಪಚ್ಚು ರಂಜನ್ ಮಾತನಾಡಿ, ಅರೆಸೇನಾ ಪಡೆಯ ನಿವೃತ್ತ ಯೋಧರಿಗೆ ಸೈನಿಕ ಪುನರ್ವಸತಿ ಇಲಾಖೆಯ ಮೂಲಕ ದೊರೆಯಬಹುದಾದ ಎಲ್ಲ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಸೋಮವಾರಪೇಟೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಅರೆಯೂರು ಜಯಣ್ಣ, ಸಂಘದ ಜಿಲ್ಲಾಧ್ಯಕ್ಷ ಎಂ.ಜಿ. ಯತೀಶ್ ಮಾತನಾಡಿದರು.
ಮಡಿಕೇರಿ ತಾಲ್ಲೂಕು ಒಕ್ಕೂಟದ ಕಾರ್ಯದರ್ಶಿ ಸಿ.ಜಿ. ಸಿದ್ಧಾರ್ಥ  ಸ್ವಾಗತಿಸಿದರು. ಸೋಮವಾರಪೇಟೆ ತಾಲ್ಲೂಕು ಕಾರ್ಯದರ್ಶಿ ಬಿ.ಎಂ. ರಾಜಶೇಖರ್ ನಿರೂಪಿಸಿದರು. ಉಪಾಧ್ಯಕ್ಷ ಸಿ.ಕೆ. ರಾಜು ವಂದಿಸಿದರು.

ಮಡಿಕೇರಿ ತಾಲ್ಲೂಕು ಅಧ್ಯಕ್ಷ  ಆನಂದ, ಉಪಾಧ್ಯಕ್ಷ ಪಿ.ಎಂ. ಚಂಗಪ್ಪ, ಜಿಲ್ಲಾ ಒಕ್ಕೂಟದ ಗೌರ ಅಧ್ಯಕ್ಷೆ ರೇಖಾ ಮಹೇಶ್ ಇದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.