ADVERTISEMENT

ಆಸ್ತಿ ಮಾರಿದರೆ ಮುಟ್ಟುಗೋಲು: ಶಾಸಕ

​ಪ್ರಜಾವಾಣಿ ವಾರ್ತೆ
Published 1 ಜೂನ್ 2011, 10:25 IST
Last Updated 1 ಜೂನ್ 2011, 10:25 IST

ಸೋಮವಾರಪೇಟೆ: ಸರ್ಕಾರದ ಅಕ್ರಮ-ಸಕ್ರಮ ಯೋಜನೆ ಫಲಾನುಭವಿಗಳು ಆಸ್ತಿಯನ್ನು ಪರಭಾರೆ ಅಥವಾ ಮಾರಾಟ ಮಾಡಿದರೆ ಅಂತಹ ಆಸ್ತಿಯನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ತಾಲ್ಲೂಕು ಅಕ್ರಮ-ಸಕ್ರಮ ಸಮಿತಿ ಅಧ್ಯಕ್ಷರೂ ಆದ ಶಾಸಕ ಅಪ್ಪಚ್ಚುರಂಜನ್ ಎಚ್ಚರಿಕೆ ನೀಡಿದರು.

ತಾಲ್ಲೂಕು ಕಚೇರಿಯಲ್ಲಿ ಮಂಗಳವಾರ ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ತಾಲ್ಲೂಕು ಅಕ್ರಮ-ಸಕ್ರಮ ಸಮಿತಿ ಸಭೆಯಲ್ಲಿ ಈ ಹಿಂದೆ ಅರ್ಜಿ ಸಲ್ಲಿಸಿದ್ದ 14 ಮಂದಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿದರು.

ಕೃಷಿಕರು ವ್ಯವಸಾಯದ ಮೂಲಕ ಆರ್ಥಿಕ ಸಬಲೀಕರಣ ಹೊಂದಲಿ ಎಂಬ ಉದ್ದೇಶದಿಂದ ಈ ಹಿಂದೆ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡಿದ್ದವರಿಗೆ ಇದೀಗ ಸಮಿತಿ ಮೂಲಕ ಹಕ್ಕುಪತ್ರ ನೀಡಲಾಗುತ್ತಿದೆ.

ಇದನ್ನು ಪಡೆದುಕೊಂಡವರು ಮುಂದಿನ 25ವರ್ಷಗಳವರೆಗೆ ಆಸ್ತಿಯನ್ನು ಮಾರುವ ಸಾಹಸಕ್ಕೆ ಮುಂದಾಗಬಾರದು ಎಂದು ಕಿವಿಮಾತು ಹೇಳಿದ ಶಾಸಕರು, ಹಕ್ಕುಪತ್ರ ಪಡೆದ ಜಾಗದಲ್ಲಿ ಸಾರ್ವಜನಿಕ ರಸ್ತೆಯ ಅವಶ್ಯಕತೆಯಿದ್ದಲ್ಲಿ ಯಾವುದೇ ತಕರಾರು ತೆಗೆಯದೇ 15 ಅಡಿಗಳಷ್ಟು ಜಾಗ ಬಿಟ್ಟುಕೊಡಬೇಕು ಎಂದು ಸೂಚಿಸಿದರು.

ತಾಲ್ಲೂಕು ಅಕ್ರಮ-ಸಕ್ರಮ ಸಮಿತಿಗೆ ಈಗಾಗಲೇ 14,061 ಅರ್ಜಿ ಸಲ್ಲಿಕೆಯಾಗಿದ್ದು, 3.042 ಅರ್ಜಿಗಳಿಗೆ ಮಂಜೂರಾತಿ ನೀಡಲಾಗಿದೆ. 2890 ಮಂದಿ ಅರ್ಜಿದಾರರಿಗೆ ಸಾಗುವಳಿ ಚೀಟಿ ವಿತರಿಸಲಾಗಿದೆ. ರೆೃತರ ಸಿ ಮತ್ತು ಡಿ, ಭೂಮಿ ಈ ಹಿಂದೆ ಅರಣ್ಯ ಇಲಾಖೆಯ ಸುಪರ್ದಿಯಲ್ಲಿದ್ದು, ಇದೀಗ ಅಕ್ರಮ-ಸಕ್ರಮ ಸಮಿತಿ ವ್ಯಾಪ್ತಿಗೆ ಬರಲಿದೆ. ಈ ಬಗ್ಗೆಯೂ ಪರಿಶೀಲನೆ ನಡೆಸಿ, ಇಂತಹ ಜಾಗಗಳಿಗೂ ಹಕ್ಕುಪತ್ರ ವಿತರಿಸಲಾಗುವುದು ಎಂದು ರಂಜನ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.