ADVERTISEMENT

‘ಎಂ.ಸಿ. ನಾಣಯ್ಯ ಸೇರ್ಪಡೆ: ಕಾಂಗ್ರೆಸ್‌ಗೆ ಬಲ’

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2018, 9:59 IST
Last Updated 27 ಮಾರ್ಚ್ 2018, 9:59 IST

ಮಡಿಕೇರಿ: ‘ಹಿರಿಯ ರಾಜಕಾರಣಿ ಎಂ.ಸಿ. ನಾಣಯ್ಯ ಅವರು ಕಾಂಗ್ರೆಸ್‌ಗೆ ಬಂದಿರುವುದು ಸಂತೋಷ ತಂದಿದ್ದು, ಕೊಡಗು ಜಿಲ್ಲಾ ಸಮಿತಿಗೆ ಹೆಚ್ಚಿನ ಬಲ ಬಂದಿದೆ’ ಎಂದು ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್‌ ಹೇಳಿದ್ದಾರೆ.

‘1978ರಲ್ಲಿ ಮಡಿಕೇರಿ ಕ್ಷೇತ್ರದಿಂದ ಇಂದಿರಾ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದರು. ದೀರ್ಘಕಾಲ ಕಾಂಗ್ರೆಸ್ ಸದಸ್ಯರಾಗಿದ್ದರು. ಮೂರು ಬಾರಿ ಸಚಿವರಾಗಿ, ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕರಾಗಿಯೂ ಸೇವೆ ಸಲ್ಲಿಸಿದ್ದ ಅವರು, ಮತ್ತೆ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ನಾಣಯ್ಯ ಅವರು ದಿವಂಗತ ದೇವರಾಜ ಅರಸು ಅವರ ಮಂತ್ರಿ ಮಂಡಲದಲ್ಲಿ ರಾಜ್ಯ ಅರಣ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು. ರಾಮಕೃಷ್ಣ ಹೆಗಡೆ, ಎಸ್.ಆರ್. ಬೊಮ್ಮಾಯಿ, ಎಚ್.ಡಿ. ದೇವೇಗೌಡ, ಜೆ. ಎಚ್. ಪಟೇಲ್‌ ಅವರೊಂದಿಗೂ ಕಾರ್ಯ ನಿರ್ವಹಿಸಿದ್ದರು’ ಎಂದು ರಮೇಶ್‌ ಹೇಳಿದ್ದಾರೆ.

ADVERTISEMENT

‘ಕೋಮುವಾದಿ ಶಕ್ತಿಗಳ ವಿರುದ್ಧ ಜಾತ್ಯತೀತ ನಿಲುವು ಹೊಂದಿರುವ ಪಕ್ಷಗಳು ಒಂದಾಗಿ ಹೋರಾಟ ನಡೆಸುವ ಅನಿವಾರ್ಯತೆಯಿದೆ’ ಎಂದು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.