ADVERTISEMENT

ಒರಳು ಕಲ್ಲಲ್ಲಿ ಅರಳಿದ ಬದುಕು

ಶ.ಗ.ನಯನತಾರಾ
Published 23 ಜೂನ್ 2013, 4:57 IST
Last Updated 23 ಜೂನ್ 2013, 4:57 IST
ಒರಳು ಕಲ್ಲಲ್ಲಿ ಅರಳಿದ ಬದುಕು
ಒರಳು ಕಲ್ಲಲ್ಲಿ ಅರಳಿದ ಬದುಕು   

ಶನಿವಾರಸಂತೆ: ಮಾರುಕಟ್ಟೆಯಲ್ಲಿ ಈಗ ಅತ್ಯಾಧುನಿಕ ವಿದ್ಯುತ್ ಉಪಕರಣಗಳು ಲಗ್ಗೆ ಇಟ್ಟಿವೆ. ಆಕರ್ಷಕ ಮಿಕ್ಸಿ, ಗ್ರೈಂಡರ್‌ಗಳು ಸ್ಪರ್ಧೆಗಿಳಿದಿವೆ.

ಈ ಸ್ಪರ್ಧೆಯ ನಡುವೆಯೂ ಶನಿವಾರಸಂತೆಯಲ್ಲಿ 3 ತಿಂಗಳಿನಿಂದ ಒರಳುಕಲ್ಲುಗಳ ವ್ಯಾಪಾರ ಭರದಿಂದ ಸಾಗಿದೆ.

ಕೇರಳದ ಮಲಪುರಂನಿಂದ ಬಂದಿರುವ ಒರಳುಕಲ್ಲು ಕೆತ್ತನೆಯ ಕುಮಾರ್-ಜಯಾ ದಂಪತಿ ಮೂರು ತಿಂಗಳಿನಿಂದ ಪಟ್ಟಣದಲ್ಲಿ ಟೆಂಟ್ ಕಟ್ಟಿಕೊಂಡು ಜನರ ಬೇಡಿಕೆಗೆ ತಕ್ಕಂತೆ ಕೆತ್ತನೆ ಮಾಡಿ ನೀಡುತ್ತಿದ್ದಾರೆ.

ಆಧುನಿಕ ಪದ್ಧತಿಗೆ ಜನ ಮಾರು ಹೋಗಿದ್ದರೂ ಮಂದಿ ವಿದ್ಯುತ್ ಕೊರತೆಯ ಸಮಸ್ಯೆಯಿಂದಾಗಿ ಮತ್ತೆ ಹಳೇ ಪದ್ಧತಿಯನ್ನೇ ಅನುಸರಿಸಬೇಕಾದ್ದು ಅನಿವಾರ್ಯವಾಗಿದೆ. ಒರಳುಕಲ್ಲಿನಲ್ಲಿ ರುಬ್ಬಿದ ಹಿಟ್ಟು, ಚಟ್ನಿ, ಖಾರ ಮೊದಲಾದ ಅಡುಗೆ ಬಹಳ ರುಚಿಯಾಗಿರುತ್ತದೆ. ಮನೆಯಲ್ಲೊಂದು ಒರಳುಕಲ್ಲಿದ್ದರೆ ಲಕ್ಷ್ಮಿ ಇದ್ದಂತೆ ಎಂಬ ನಂಬಿಕೆ ಕೆಲವರಲ್ಲಿದೆ.

ಪಟ್ಟಣದಲ್ಲಿ ಇದನ್ನು ಕೊಳ್ಳುವವರ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಜನರ ಬೇಡಿಕೆಗೆ ಅನುಗುಣವಾಗಿ ಕೇರಳದಿಂದ ಕಲ್ಲುಗಳನ್ನು ತರಿಸಲಾಗುತ್ತಿದೆ. ಒಂದು ಲೋಡ್ ಕಲ್ಲು ಲಾರಿಯಲ್ಲಿ ಕೇರಳದಿಂದ ಬರುತ್ತದೆ. 200 ಕಲ್ಲುಗಳಿರುವ ಲೋಡಿಗೆ ರೂ. 30 ಸಾವಿರ ರೂಪಾಯಿ. ತಿಂಗಳಿಗೆ ಈ ದಂಪತಿ 10-15 ಕಲ್ಲುಗಳನ್ನು ಕೆತ್ತುತ್ತಾರೆ. ಔಷಧ ಅರೆಯವ ಪುಟ್ಟ ಕಲ್ಲಿಗೆ ರೂ 350, ದೊಡ್ಡಕಲ್ಲಿಗೆ ರೂ 1,500ರಿಂದ ರೂ 2,500ರವರೆಗೆ ಬೆಲೆ ಇದೆ. ತಿಂಗಳಿಗೆ 10 ಕಲ್ಲಂತೂ ಮಾರಾಟವಾಗುತ್ತದೆ ಎನ್ನುತ್ತಾರೆ ಕುಮಾರ್.

ಬೇಡಿಕೆ ಅಪಾರವಿದ್ದರೂ ಕಲ್ಲುಗಳನ್ನು ಕೇರಳದಿಂದಲೇ ತರಿಸಬೇಕಾಗುತ್ತದೆ. ಇದರಿಂದ ಖರ್ಚು ಜಾಸ್ತಿಯಾಗುತ್ತದೆ. ಬಂದ ಹಣದಿಂದಲೇ ಕುಮಾರ್-ಜಯಾ ದಂಪತಿಯ ಜೀವನ ನಿರ್ವಹಣೆ ನಡೆಯುತ್ತದೆ.  
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.