ADVERTISEMENT

ಕಂದಕ ನಿರ್ಮಾಣ ಕಾಮಗಾರಿ ಚುರುಕು

​ಪ್ರಜಾವಾಣಿ ವಾರ್ತೆ
Published 4 ಜುಲೈ 2017, 6:42 IST
Last Updated 4 ಜುಲೈ 2017, 6:42 IST
ಕುಶಾಲನಗರ ಸಮೀಪದ ವಾಲ್ನೂರು –ಚೆಟ್ಟಳ್ಳಿ ರಸ್ತೆಯ  ಅರಣ್ಯದಂಚಿನಲ್ಲಿ ಕಾಡಾನೆ ಹಾವಳಿ ತಡೆಗೆ ಆನೆ ಕಂದಕ ನಿರ್ಮಾಣ ಮಾಡಲಾಗಿದೆ
ಕುಶಾಲನಗರ ಸಮೀಪದ ವಾಲ್ನೂರು –ಚೆಟ್ಟಳ್ಳಿ ರಸ್ತೆಯ ಅರಣ್ಯದಂಚಿನಲ್ಲಿ ಕಾಡಾನೆ ಹಾವಳಿ ತಡೆಗೆ ಆನೆ ಕಂದಕ ನಿರ್ಮಾಣ ಮಾಡಲಾಗಿದೆ   

ಕುಶಾಲನಗರ: ಉತ್ತರ ಕೊಡಗಿನ ಮೀನುಕೊಲ್ಲಿ ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿಯ ವಾಲ್ನೂರಿನಿಂದ ಚೆಟ್ಟಳ್ಳಿಗೆ ಹೋಗುವ ರಸ್ತೆಯ ಬಳಿ ಅರಣ್ಯದಂಚಿನಲ್ಲಿ ಕಾಡಾನೆ ಹಾವಳಿ ತಡೆಗೆ ಅರಣ್ಯ ಇಲಾಖೆ ಕೈಗೊಂಡಿರುವ ಆನೆ ಕಂದಕ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದೆ.

ವಾಲ್ನೂರು ತ್ಯಾಗತ್ತೂರು ಗ್ರಾಮದ ನೀಲಗಿರಿ ತೋಪಿನಿಂದ ಅಮಾಂಗಲ ಗ್ರಾಮದವರೆಗೆ  3 ಕಿ.ಮೀ.ವರೆಗೆ ₹ 5 ಲಕ್ಷ ವೆಚ್ಚದಲ್ಲಿ ಆನೆ ಕಂದಕ ನಿರ್ಮಾಣ ಮಾಡಲಾಗುತ್ತಿದೆ. 3 ಮೀಟರ್ ಎತ್ತರ, 3 ಮೀಟರ್ ಅಗಲ ಹಾಗೂ ತಳಭಾಗದಲ್ಲಿ 1 ಮೀಟರ್ ಅಗಲದ ಅಳತೆಯಲ್ಲಿ ಕಂದಕವನ್ನು ತೆಗೆಯಲಾಗುತ್ತಿದೆ. ಈ ಭಾಗದಲ್ಲಿ ನಿರಂತರ ಆನೆ ಹಾವಳಿಯಿಂದಾಗಿ ಭಾರಿ ಪ್ರಮಾಣದಲ್ಲಿ ಕೃಷಿ ಹಾನಿ ಸಂಭವಿಸಿದೆ. ಮನುಷ್ಯರೂ ಬಲಿಯಾಗಿದ್ದಾರೆ.

ಪ್ರತಿ ರಾತ್ರಿ ತೋಟಗಳಿಗೆ ದಾಳಿ ಇಡುತ್ತಿದ್ದ ಪುಂಡಾನೆಗಳ ಉಪಟಳದಿಂದ ಜನರು ರೋಸಿ ಹೋಗಿದ್ದರು. ಭಯದ ವಾತಾವರಣ ಸೃಷ್ಟಿಯಾಗಿತ್ತು. ಜನರು ಮನೆಯಿಂದ ಹೊರಗೆ ಹೋಗಲು ಭಯ ಪಡುತ್ತಿದ್ದರು. ಆನೆ ಹಾವಳಿ ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿ.ಪಂ. ಸದಸ್ಯೆ ಸುನೀತಾ ಅವರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದರು. ಸೋಲಾರ್ ಬೇಲಿ ಅಥವಾ ಕಂದಕ ನಿರ್ಮಾಣ ಮಾಡಬೇಕು ಎಂಬುದು ಗ್ರಾಮಸ್ಥರ ಬಹುದಿನಗಳ ಆಗ್ರಹವಾಗಿತ್ತು.

ADVERTISEMENT

ಕಂಡೆಕೆರೆ ವ್ಯಾಪ್ತಿಯಲ್ಲಿ ಕೂಡ ನೂರು ಮೀಟರ್ ಕಂದಕ ನಿರ್ಮಾಣ ಮಾಡಲಾಗುತ್ತಿದೆ ಎಂದು ಮೀನುಕೊಲ್ಲಿ ಉಪ ವಲಯ ಅರಣ್ಯಾಧಿಕಾರಿ ದೇವಿಪ್ರಸಾದ್ ತಿಳಿಸಿದ್ದಾರೆ.
ಕಂದಕ ಮಾರ್ಗದ ಕೆಲವು ಕಡೆಗಳಲ್ಲಿ ಆನೆಗಳು ದಾಟಲು ಯತ್ನಿಸಿರುವುದು ಕಂಡುಬಂದಿದೆ. ಇಂತಹ ಆನೆ ಮಾರ್ಗಗಳನ್ನು ಪತ್ತೆ ಹಚ್ಚಿ ಮತ್ತಷ್ಟು ಅಳ–ಅಗಲವಾಗಿ ತೆಗೆಯಲು ಕ್ರಮ ಕೈಗೊಳ್ಳಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

‘ಕಂದಕ ತೆಗೆದ ನಂತರ ಮಣ್ಣನ್ನು ಪಕ್ಕದಲ್ಲಿಯೆ ಹಾಕಲಾಗಿದೆ. ಈ ಮಣ್ಣನ್ನು ಮತ್ತೆ ಗುಂಡಿಗೆ ತಳ್ಳಿ ಆನೆಗಳು ದಾಟುವ ಸಾಧ್ಯತೆ ಇದೆ. ಹೆಚ್ಚು ಮಳೆಯಿಂದ ಮಣ್ಣು ಜಾರಿ ಗುಂಡಿಗೆ ಬೀಳುವುದರಿಂದ ಬಹುಬೇಗ ಕಂದಕ ಮುಚ್ಚಿಹೋಗಬಹುದು. ಆದ್ದರಿಂದ ಗುಂಡಿ ತೆಗೆದ ನಂತರ ಮಣ್ಣನ್ನು ದೂರಕ್ಕೆ ಹಾಕಲು ಇಲಾಖೆ ಕ್ರಮ ಕೈಗೊಳ್ಳಬೇಕು’ ಎಂದು ನಿವಾಸಿ ಮೋಹನ್ ಒತ್ತಾಯಿಸಿದ್ದಾರೆ.

ಕಾಡಾನೆಗಳು ಹಾಗೂ ಕಾಡುಪ್ರಾಣಿಗಳಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸುವುದಕ್ಕಾಗಿ ನಂಜರಾಯಪಟ್ಟಣದ ಬಳಿ ದಾಸವಾಳ ಅರಣ್ಯದಲ್ಲಿ, ಚಿಕ್ಲಿಹೊಳೆ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಅರಣ್ಯದಲ್ಲಿ ಹಾಗೂ ಪಾಟ್ಲಮೆಂಟಿ ಅರಣ್ಯದಲ್ಲಿ ತಲಾ ಒಂದೊಂದು ಕೆರೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ದೇವಿಪ್ರಸಾದ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.