ADVERTISEMENT

ಕನ್ನಡ ಸಾಹಿತ್ಯ ಪರಿಷತ್‌ಗೆ ಪದಾಧಿಕಾರಿಗಳ ನೇಮಕ

​ಪ್ರಜಾವಾಣಿ ವಾರ್ತೆ
Published 5 ಜೂನ್ 2012, 10:10 IST
Last Updated 5 ಜೂನ್ 2012, 10:10 IST

ಮಡಿಕೇರಿ: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ನೂತನ ಗೌರವ ಕಾರ್ಯದರ್ಶಿಗಳಾಗಿ ಬಿ.ಎ.ಷಂಶುದ್ದೀನ್ ಹಾಗೂ ಶ್ವೇತಾ ರವೀಂದ್ರ, ಗೌರವ ಕೋಶಾಧಿಕಾರಿಯಾಗಿ ಬಿ.ಎಂ.ಕೆ.ವಾಸು ರೈ ನೇಮಕಗೊಂಡಿದ್ದಾರೆ.

ಮೂರು ತಾಲ್ಲೂಕಿಗೆ ಅಧ್ಯಕ್ಷರುಗಳನ್ನು ನೇಮಿಸಲಾಗಿದ್ದು, ಮಡಿಕೇರಿ ತಾಲ್ಲೂಕಿಗೆ ಎಸ್.ಐ.ಮುನೀರ್ ಅಹಮ್ಮದ್, ಸೋಮವಾರಪೇಟೆ ತಾಲ್ಲೂಕಿಗೆ ಸಾಹಿತಿ ಭಾರಧ್ವಾಜ ಆನಂದ ತೀರ್ಥ ಹಾಗೂ ವಿರಾಜಪೇಟೆ ತಾಲ್ಲೂಕಿಗೆ ಎಂ.ಪಿ.ಕೇಶವ ಕಾಮತ್ ನೇಮಕಗೊಂಡಿದ್ದಾರೆ.

ಜಿಲ್ಲಾ ಕಾರ್ಯಕಾರಿ ಸಮಿತಿಗೆ ಸಂಘ ಸಂಸ್ಥೆಗಳ ಪ್ರತಿನಿಧಿಯಾಗಿ ಜೆ.ಸಿ.ಶೇಖರ್, ಕೆ.ಟಿ.ಬೇಬಿ ಮ್ಯೋಥ್ಯು, ಮಹಿಳಾ ಪ್ರತಿನಿಧಿಯಾಗಿ ಪುಷ್ಪಲತಾ ಶಿವಪ್ಪ, ಪರಿಶಿಷ್ಟ ಜಾತಿ-ಪಂಗಡಗಳ ಪ್ರತಿನಿಧಿಯಾಗಿ ಶ್ರೀಧರ್ ಹೂವಲ್ಲಿ, ಜಿಲ್ಲಾ ವಾರ್ತಾಧಿಕಾರಿ ವಿನೋದ್‌ಚಂದ್ರ ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಇಂದಿರಮ್ಮ ಇರುವರು.

ಕಾರ್ಯಕಾರಿ ಸಮಿತಿಗೆ ವಿಶೇಷ ಆಹ್ವಾನಿತರಾಗಿ ಹಿರಿಯ ಸಾಹಿತಿ ಎನ್.ಮಹಾಬಲೇಶ್ವರ ಭಟ್, ಬಿ.ಎ. ಗಣಪತಿ, ಎನ್.ಕೆ. ಮೋಹನ್ ಕುಮಾರ್, ವಿ.ಕೆ.ದೇವ ಲಿಂಗಯ್ಯ, ಭಾರತಿ ರಮೇಶ್, ಪೊ.ರಾ.ಶ್ರೀನಿವಾಸ್, ಡಾ.ಶ್ರೀಧರ್ ಹೆಗ್ಗಡೆ, ಟಿ.ಸಿ. ತಮ್ಮಯ್ಯ, ಟಿ.ಜಿ. ಪ್ರೇಮ್‌ಕುಮಾರ್, ಕೊಲ್ಯದ ಗಿರೀಶ್, ವಿ.ಟಿ.ನಾಣಯ್ಯ, ಕೆ.ರೋಹಿತ್, ವಿಲ್ಪ್ರೆಡ್ ಕ್ರಾಸ್ತಾ, ಸಿ.ಎ.ಮಹಾಲಕ್ಷ್ಮಿ, ಕೆ.ಎಸ್. ಧನಂಜಯ ಇವರುಗಳು ನೇಮಕಗೊಂಡಿರುವರು.

ಇನ್ನಷ್ಟು ವಿಶೇಷ ಆಹ್ವಾನಿತರನ್ನು ತಾಲ್ಲೂಕು ಘಟಕ ರಚನೆ ಆದ ನಂತರ ಜಿಲ್ಲಾ ಸಮಿತಿಗೆ ಪ್ರಸ್ತಾವನೆ ಕಳುಹಿಸಲು ತೀರ್ಮಾನಿಸಲಾಗಿದೆ. ಜಿಲ್ಲಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಹಿರಿಯ ಗಾಯಕರಾದ ಎಂ.ಎಂ.ಲಿಯಾಕತ್ ಆಲಿ ಅವರನ್ನು ಜಿಲ್ಲಾ ಸಂಚಾಲಕರನ್ನಾಗಿ ನೇಮಿಸಲಾಗಿದೆ.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಸೋಮವಾರ ನಡೆದ ನೂತನ ಜಿಲ್ಲಾ ಕಾರ್ಯಕಾರಿ ಸಭೆಯಲ್ಲಿ ಜಿಲ್ಲೆಯಲ್ಲಿ ಸಾಹಿತ್ಯ ಪರ ಕಾರ್ಯಕ್ರಮಗಳು ಜಿಲ್ಲಾ ಮತ್ತು ತಾಲ್ಲೂಕು ಸಾಹಿತ್ಯ ಸಮ್ಮೇಳನಗಳು ಹಾಗೂ ದತ್ತಿ ಉಪನ್ಯಾಸ ಕಾರ್ಯಕ್ರಮಗಳ ಕುರಿತು ಚರ್ಚಿಸಲಾಯಿತು.

ಸಭಾಧ್ಯಕ್ಷತೆ ವಹಿಸಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷರಾದ ಟಿ.ಪಿ.ರಮೇಶ್ ಪ್ರಾಸ್ತಾವಿಕರಾಗಿ ಮಾತನಾಡಿ, ಕಳೆದ 2 ಅವಧಿಯಲ್ಲಿ ಜಿಲ್ಲೆಯ ಜನತೆಯ ಸಹಕಾರದೊಂದಿಗೆ ಪರಿಷತ್ತು ಅನೇಕ ಕಾರ್ಯಕ್ರಮಗಳನ್ನು ಜಿಲ್ಲೆಯಲ್ಲಿ ನಡೆಸಿ ಕೊಡಗು ಜಿಲ್ಲೆ ಕರ್ನಾಟಕ ರಾಜ್ಯದಲ್ಲಿ ಸಾಹಿತ್ಯ ಪರವಾದ ಕಾರ್ಯಕ್ರಮಗಳಿಗೆ ಮುಂಚೂಣಿಯಲ್ಲಿದ್ದು ರಾಜ್ಯ ಸಮಿತಿಯು ಶ್ಲಾಘನೆಗೊಳಗಾಗಿದೆ ಎಂದರು.

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕೊಡಗು ಜಿಲ್ಲೆಗೆ ತರಲು ನಾನು ನಿಮ್ಮೆಲ್ಲರ ಸಹಕಾರದೊಂದಿಗೆ ಪ್ರಯತ್ನಿಸುವುದಾಗಿ ತಿಳಿಸಿದರಲ್ಲದೆ ಭವನ ನಿರ್ಮಾಣ ಕೆಲಸಕ್ಕೂ ಜನಪ್ರತಿನಿಧಿಗಳ ಸಹಕಾರದೊಂದಿಗೆ ಮುಂದಾಗುವುದಾಗಿ ಹೇಳಿದರು.

ಈ ಹಿಂದೆ ಅಸ್ತಿತ್ವದಲ್ಲಿದ್ದ ಕುಶಾಲನಗರ, ಗೋಣಿಕೊಪ್ಪಲು, ಮೂರ್ನಾಡು, ಸಂಪಾಜೆ ಹೋಬಳಿ ಘಟಕಗಳನ್ನು ತಾಲ್ಲೂಕು ಅಧ್ಯಕ್ಷರುಗಳನ್ನು ಪುನರ್‌ರಚಿಸಬೇಕು ಹಾಗೂ ಸುಂಟಿಕೊಪ್ಪ ಮತ್ತು ಭಾಗಮಂಡಲ ಹೋಬಳಿ ಘಟಕಗಳನ್ನು ರಚಿಸಲು ಮುಂದಾಗಬೇಕೆಂದು ಹೇಳಿದರು. ಪರಿಷತ್ತಿನ ಸದಸ್ಯತನ ಚಳುವಳಿಯನ್ನು ತೀವ್ರಗೊಳಿಸಬೇಕೆಂದು ಎಲ್ಲರನ್ನೂ ಕೋರಿದರು.

ರಾಜ್ಯಾಧ್ಯಕ್ಷರು ಇತ್ತೀಚೆಗೆ ನಡೆದ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಜಿಲ್ಲಾ ಸಮ್ಮೇಳನಕ್ಕೆ 5 ಲಕ್ಷ (ಪುಸ್ತಕ ಪ್ರಕಟಣೆಗಳು ಸೇರಿದಂತೆ) ಹಾಗೂ ತಾಲ್ಲೂಕು ಸಮ್ಮೇಳನಗಳಿಗೆ ಒಂದು ಲಕ್ಷ ನೀಡುವುದಾಗಿ ಹೇಳಿರುವುದನ್ನು ಸಭೆಯ ಗಮನಕ್ಕೆ ತಂದರು. ತಾಲ್ಲೂಕು ಘಟಕಗಳ ಆಡಳಿತ ನಿರ್ವಹಣೆಗೆ ರೂ. 25 ಸಾವಿರಗಳನ್ನು ನೀಡಲಾಗುವುದೆಂದು ರಾಜ್ಯಾಧ್ಯಕ್ಷರು ತಿಳಿಸಿದ್ದನ್ನು ಸಭೆಗೆ ತಿಳಿಸಿದರು.

ಗೌರವ ಕಾರ್ಯದರ್ಶಿ ಬಿ.ಎ. ಷಂಶುದ್ದೀನ್ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಶ್ವೇತಾ ರವೀಂದ್ರ ವಂದಿಸಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.