ADVERTISEMENT

ಕಲಾಪ ಅಡ್ಡಿಪಡಿಸಿದ್ದಕ್ಕೆ ಹೊರಕ್ಕೆ: ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2011, 6:10 IST
Last Updated 21 ಸೆಪ್ಟೆಂಬರ್ 2011, 6:10 IST

ಮಡಿಕೇರಿ: ನಿಯಮಾವಳಿಯಂತೆ ಸಭೆಗೆ ಮುಂಚಿತವಾಗಿ ಚರ್ಚಾ ವಿಷಯವನ್ನು ತಿಳಿಸದೇ ಇರುವುದು ಹಾಗೂ ಏಕಾಏಕಿ ಯಾಗಿ ಸಭೆಯಲ್ಲಿ ಆರೋಪಗಳ ಸುರಿ ಮಳೆಗೈಯುವ ಮೂಲಕ ಗದ್ದಲ, ಕೋಲಾಹಲ ಸೃಷ್ಟಿಸಿ ಸಭೆಯ ಕಲಾಪಕ್ಕೆ ಅಡ್ಡಿಪಡಿಸಿದ್ದಕ್ಕಾಗಿ ಸದಸ್ಯೆ ಕೇಚಮಾಡ ಸರಿತಾ ಪೂಣಚ್ಚ ಅವರನ್ನು ಸಭೆಯಿಂದ ಹೊರಹಾಕಲಾಗಿದೆ ಎಂದು ಜಿ.ಪಂ. ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ ತಿಳಿಸಿದರು.

ನಗರದಲ್ಲಿರುವ ತಮ್ಮ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ತಮ್ಮನ್ನು ಸಭೆಯಿಂದ ಹೊರ ಹಾಕಿದ್ದನ್ನು ಪ್ರಶ್ನಿಸಿರುವ ಕಾಂಗ್ರೆಸ್ ಸದಸ್ಯೆ ಸರಿತಾ ಪೂಣಚ್ಚ ಅವರಿಗೆ ಮೇಲಿನಂತೆ ಉತ್ತರಿಸಿದ್ದಾರೆ.

ಅಂದು ಜಿ.ಪಂ. ಸಭೆಯ ನಡಾವಳಿ ಪ್ರಕಾರವೇ ಆರಂಭವಾಗಿತ್ತು. ಪ್ರತಿ ಯೊಬ್ಬ ಸದಸ್ಯರು ಚರ್ಚೆ ಯಲ್ಲಿ ಪಾಲ್ಗೊಂಡಿದರು. ಕಾಂಗ್ರೆಸ್ ಸದಸ್ಯರೂ ಕೂಡ ಸಕಾರಾತ್ಮಕ ವಾಗಿ ಯೇ ಚರ್ಚೆಯಲ್ಲಿ ಭಾಗ ವಹಿಸಿದ್ದರು.
ಆದರೆ, ಸರಿತಾ ಅವರು ಪ್ರಚಾರಗಿಟ್ಟಿಸಿಕೊಳ್ಳಲು ಏಕಾಏಕಿ ನನ್ನನ್ನು ಸೇರಿದಂತೆ ವಿಧಾನ ಸಭಾಧ್ಯಕ್ಷರು ಹಾಗೂ ಸದಸ್ಯ ರಾಜಾ ರಾವ್ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದರು ಎಂದು ಅವರು ಹೇಳಿದರು.

ವಿವಾದಕ್ಕೆ ಕಾರಣವಾಗಿರುವ ರೇಷ್ಮೆ ಹಡ್ಲು ಕೆರೆಯ ಅಭಿವೃದ್ಧಿಗಾಗಿ ಮೊದಲು ಜಿಲ್ಲಾ ಪಂಚಾಯಿತಿಯ ಎಂಜಿನಿಯರಿಂಗ್ ವಿಭಾಗಕ್ಕೆ ವಹಿಸಿ ಕೊಡಲಾಗಿತ್ತು. ಆದರೆ, ಮೂರು ವರೆ ವರ್ಷಗಳ ನಂತರವೂ ಕಾಮಗಾರಿ ಆರಂಭಗೊಂಡಿರಲಿಲ್ಲ.

ಹಣ ವಾಪಸ್ಸಾತಿ ತಡೆಯಲು ಕ್ರಮ: ಹೀಗಾದರೆ ಕಾಮಗಾರಿಗೆ ಮಂಜೂ ರಾಗಿರುವ ಹಣ ವಾಪಸ್ ಸರ್ಕಾರಕ್ಕೆ ಹೋಗುತ್ತದೆ. ಅದನ್ನು ತಡೆಯಬೇಕು ಹಾಗೂ ಕಾಮಗಾರಿಯನ್ನು ಪೂರ್ಣ ಗೊಳಿಸಬೇಕೆನ್ನುವ ಸದ್ದುದೇಶದಿಂದ ವಿಧಾನಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಅವರು ನಿರ್ಮಿತಿ ಕೇಂದ್ರಕ್ಕೆ ಕಾಮಗಾರಿ ವಹಿಸಿಕೊಡಬಹುದು ಎಂದು ಪತ್ರ ಬರೆದರು. ಇದರಲ್ಲಿ ತಪ್ಪೇನು? ಪತ್ರ ಬರೆದಿದ್ದಾರೆ ಎಂದರೆ ಕಳಪೆ ಕಾಮಗಾರಿ ಮಾಡಿ ಎಂದು ಅರ್ಥವೇ? ಎಂದು ಅವರು ಪ್ರಶ್ನಿಸಿದರು.

 ನಿರ್ಮಿತಿ ಕೇಂದ್ರ ಖಾಸಗಿ ಸಂಸ್ಥೆ ಯಲ್ಲ, ಇದು ಕೂಡ ಸರ್ಕಾರದ ಒಂದು ಅಂಗಸಂಸ್ಥೆಯೇ ಆಗಿದೆ. ಈಗ ನಿರ್ಮಿತಿ ಕೇಂದ್ರದ ವಿರುದ್ಧ ಮಾತನಾಡುತ್ತಿರುವ ಸರಿತಾ ಪೂಣಚ್ಚ ಅವರು ವೀರಾಜಪೇಟೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಯಾಗಿದ್ದಾಗ ಹಲವು ಕಾಮಗಾರಿಗಳನ್ನು ಇದೇ ಕೇಂದ್ರಕ್ಕೆ ವಹಿಸಿಕೊಟ್ಟಿದ್ದರು ಎಂದು ಅವರು ವಿವರಿಸಿದರು.

ಅವರದ್ದೇ ಪಕ್ಷದ ಸಂಸದ ವಿಶ್ವ ನಾಥ್ ಅವರು ಕೂಡ ನಿರ್ಮಿತಿ ಕೇಂದ್ರಕ್ಕೆ ಹಲವು ಕಾಮಗಾರಿಗಳನ್ನು ನೀಡಿರುವುದನ್ನು ಗಮನಿಸಬಹುದು. ಈ ಎಲ್ಲ ವಿಷಯಗಳನ್ನು ಗಮನಿಸಿದರೆ ಸರಿತಾ ಅವರ ಆರೋಪದಲ್ಲಿ ಯಾವ ಹುರುಳೂ ಇಲ್ಲ ಎಂದು ಅವರು ಹೇಳಿದರು.

ಎಂ.ಎಲ್.ಎ ಕನಸು: ಇಂತಹ ಹುರುಳಿಲದ ಆರೋಪಗಳನ್ನು ಮಾಡುವ ಮೂಲಕ ಪ್ರಚಾರ ಗಿಟ್ಟಿಸಿಕೊಂಡು ಮುಂದಿನ ಎಂ.ಎಲ್.ಎ ಚುನಾವಣೆಯಲ್ಲಿ ಸ್ಪರ್ಧಿಸುವ ಕನಸನ್ನು ಸರಿತಾ ಕಾಣುತ್ತಿದ್ದಾರೆ ಎಂದು ಅವರು ಲೇವಡಿ ಮಾಡಿದರು.

ಈಗಾಗಲೇ ನಿರ್ಮಿತಿ ಕೇಂದ್ರದವರು ಆರಂಭಿಸಿರುವ ಕಾಮಗಾರಿಗಳನ್ನು ಆರು ತಿಂಗಳೊಳಗೆ ಪೂರೈಸುವಂತೆ ಹಾಗೂ ಇನ್ನೂ ಆರಂಭಿಸದ ಕಾಮಗಾರಿಗಳನ್ನು ವಾಪಸ್ ಪಡೆಯಲು ಈಗಾಗಲೇ ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.