ADVERTISEMENT

ಕಲಿತ ಶಾಲೆಗೆ ರೂ.1 ಲಕ್ಷ ದೇಣಿಗೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2011, 9:40 IST
Last Updated 28 ಸೆಪ್ಟೆಂಬರ್ 2011, 9:40 IST
ಕಲಿತ ಶಾಲೆಗೆ ರೂ.1 ಲಕ್ಷ ದೇಣಿಗೆ
ಕಲಿತ ಶಾಲೆಗೆ ರೂ.1 ಲಕ್ಷ ದೇಣಿಗೆ   

ಸೋಮವಾರಪೇಟೆ: ವಿದ್ಯಾರ್ಥಿ ದಿಸೆಯಲ್ಲಿ ಶಾಲಾ ಮೈದಾನದಲ್ಲಿ ಆಟ ವಾಡುತ್ತಿರುವಾಗ ಸಿಡಿಲು ಬಡಿದು ಇಬ್ಬರು ಸಹಪಾಠಿಗಳು ಮೃತಪಟ್ಟು, ಘಟನೆಯಲ್ಲಿ ಬದುಕುಳಿದ ವ್ಯಕ್ತಿ ಯೊಬ್ಬರು 45 ವರ್ಷಗಳ ಬಳಿಕ ತಾವು ಕಲಿತ ಶಾಲೆಗೆ 1 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ.

ಗೋಣಿಕೊಪ್ಪಲಿನವರಾದ ಬಿ.ಎ. ಕುಶಾಲಪ್ಪ ದೇಣಿಗೆ ನೀಡಿದವರು. ಇವರು ಮೈಸೂರಿನಲ್ಲಿ ಕೆಪಿಟಿಸಿಎಲ್‌ನಲ್ಲಿ ಮೆಕ್ಯಾನಿಕ್ ಹುದ್ದೆಯಲ್ಲಿದ್ದು, ತಾನು ಕಲಿತ ಸೋಮವಾರಪೇಟೆ ಸರ್ಕಾರಿ ಪ್ರಾಥಮಿಕ ಶಾಲೆಗೆ ರೂ.35 ಸಾವಿರ ಹಾಗೂ ಪದವಿ ಪೂರ್ವ ಕಾಲೇಜಿಗೆ 65 ಸಾವಿರ ರೂಪಾಯಿಗಳನ್ನು ದೇಣಿಗೆ ನೀಡಿದರು.

 ಈ ಹಣದಿಂದ ಬರುವ ಬಡ್ಡಿಯಿಂದ ಸರ್ಕಾರಿ ಶಾಲೆಯ 7ನೆಯ ತರಗತಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಇಬ್ಬರು ವಿದ್ಯಾರ್ಥಿಗಳಿಗೆ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ  ಯಾವುದೇ ವಿಷಯದಲ್ಲಿ ಹೆಚ್ಚು ಅಂಕ ಗಳಿಸಿದ ಓರ್ವ ವಿದ್ಯಾರ್ಥಿಗೆ ಬಹುಮಾನ ನೀಡಲಾಗುತ್ತದೆ.

1966 ರಲ್ಲಿ ಕುಶಾಲಪ್ಪ, ಯಡೂ ರಿನ ನಾಣಯ್ಯ ಹಾಗೂ ಎಂ.ಜಿ ರಸ್ತೆಯ ನಿವಾಸಿ ಎಂ.ಎಂ.ನಿಜಾಮುದ್ದೀನ್ ಎಂಬು ವರು ಇಲ್ಲಿನ  ಶಾಲಾ ಮೈದಾನದಲ್ಲಿ ಆಟವಾಡುತ್ತಿರುವಾಗ ಸಿಡಿಲು ಬಡಿದು ನಾಣಯ್ಯ ಮತ್ತು ನಿಜಾಮುದ್ದೀನ್ ಸ್ಥಳದಲ್ಲಿಯೇ ಮೃತಪಟ್ಟರು. ಅದೃಷ್ಟವಶಾತ್ ಕುಶಾಲಪ್ಪ ಸಿಡಿಲಿನಿಂದ ಪಾರಾಗಿದ್ದರು.

ಸೋಮವಾರ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎಂ.ಡಿ. ದೇವರಾಜಯ್ಯ ಹಾಗೂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಬಾಲಾಜಿ ಯವರು ಕುಶಾಲಪ್ಪರಿಂದ 1 ಲಕ್ಷ ರೂ. ಗಳ ಬ್ಯಾಂಕ್ ಠೇವಣಿ ಪತ್ರ ಪಡೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.