ADVERTISEMENT

ಕಾಂಕ್ರಿಟ್ ರಸ್ತೆ ಕಾಮಗಾರಿ: ಸಂಚಾರ ವ್ಯವಸ್ಥೆ ಅಸ್ತವ್ಯಸ್ತ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2011, 10:15 IST
Last Updated 7 ಫೆಬ್ರುವರಿ 2011, 10:15 IST

ಸೋಮವಾರಪೇಟೆ: ನಗರದ ಹಲವು ರಸ್ತೆಗಳ ಕಾಂಕ್ರಿಟ್ ರಸ್ತೆ ಕಾಮಗಾರಿ ಪ್ರಾರಂಭವಾಗಿದ್ದು, ಇದರ ಪರಿಣಾಮ ಸಂಚಾರ ವ್ಯವಸ್ಥೆ ಹಾಗೂ ಜನಜೀವನ ಅಸ್ತವ್ಯಸ್ತಗೊಂಡಿದ್ದು, ವರ್ತಕರು ಅತಂತ್ರರಾಗಿದ್ದಾರೆ.

ಖಾಸಗಿ ಬಸ್ ನಿಲ್ದಾಣ, ತ್ಯಾಗರಾಜ ರಸ್ತೆ, ಆಸ್ಪತ್ರೆ ರಸ್ತೆಗಳಲ್ಲಿ 1.30 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆ ಕಾಮಗಾರಿ ಕಳೆದೊಂದು ವಾರದಿಂದ ನಡೆಯುತ್ತಿದೆ. ಇದರಿಂದ ನಗರದ ಹೃದಯ ಭಾಗದಲ್ಲಿ ವರ್ತಕರ ವ್ಯಾಪಾರ ವಹಿವಾಟು ಸ್ಥಗಿತಗೊಂಡಿದೆ. ನಗರದ ಪ್ರಮುಖ ರಸ್ತೆಗಳೆಲ್ಲಾ ‘ಬಂದ್’ ಆಗಿರುವ ಕಾರಣ ವಾಹನ ಸವಾರರು, ಪ್ರಯಾಣಿಕರು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕನಿಷ್ಠ ಎರಡು ತಿಂಗಳು ಕಾಮಗಾರಿ ನಡೆಯುವುದರಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆಯಿದೆ.

ಎಂ.ಜಿ.ರಸ್ತೆ, ಮಡಿಕೇರಿ ರಸ್ತೆ, ಕ್ಲಬ್ ರಸ್ತೆ ಹಾಗೂ ಸ್ಟೇಟ್ ಬ್ಯಾಂಕ್ ರಸ್ತೆಗಳಲ್ಲಿ ವಾಹನ ದಟ್ಟಣೆ ಜಾಸ್ತಿಯಾಗಿದ್ದು, ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಳ್ಳುತ್ತಿದೆ. ಈಗಾಗಲೇ ಅಮ್ಮಣ ಗ್ಯಾರೇಜ್ ಬಳಿ ಹಾಗೂ ಕನ್ನಡಾಂಬೆ ವೃತ್ತದ ಬಳಿ ಎರಡು ಪ್ರತ್ಯೇಕ ಅಪಘಾತಗಳು ಸಂಭವಿಸಿವೆ.

ಸೋಮವಾರ ನಗರದಲ್ಲಿ ದೊಡ್ಡಮಟ್ಟದ ಸಂತೆ ನಡೆಯಲಿದ್ದು, ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ವರ್ತಕರು ವ್ಯಾಪಾರಕ್ಕಾಗಿ ಬರುತ್ತಾರೆ. ತಾಲ್ಲೂಕಿನಾದ್ಯಂತ ಕೃಷಿಕರು ಕೂಡ ಕೃಷಿ ಬೆಳೆಗಳನ್ನು ಮಾರಾಟ ಮಾಡಲು ನಗರಕ್ಕೆ ಆಗಮಿಸುತ್ತಾರೆ. ಸಾವಿರಾರು ಸಂಖ್ಯೆಯಲ್ಲಿ ಜನರು ಸೇರುತ್ತಾರೆ. ಇದರ ಜೊತೆಗೆ, ವಾಹನಗಳ ಸಂಖ್ಯೆಯೂ ಹೆಚ್ಚಲಿದೆ. ಪರಿಸ್ಥಿತಿಯನ್ನರಿತು ಪ.ಪಂ. ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ. ಪೊಲೀಸರು ಹೆಚ್ಚುವರಿ ಸಿಬ್ಬಂದಿ ಕರೆಸಿಕೊಂಡು ಸಂಚಾರ ವ್ಯವಸ್ಥೆ ಸುಗಮಗೊಳಿಸುವ ಅನಿವಾರ್ಯತೆಯಿದೆ.

2011ನೇ ಸಾಲಿಗೆ ‘ಕಾಫಿ ಮಳೆ’ ವಿಮೆ
ಮಡಿಕೇರಿ: ಕಾಫಿ ಮಂಡಳಿಯು 2011ನೇ ಸಾಲಿನಲ್ಲಿ ‘ಕಾಫಿ ಮಳೆ’ ವಿಮೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಲ್ಲಿ ಕಾಫಿ ಹೂ ಮಳೆ, ಹಿಮ್ಮಳೆ, ಮಾನ್ಸೂನ್ ಹಾಗೂ ಮಾನ್ಸೂನ್ ನಂತರದ ಮಳೆಗೆ ವಿಮೆ ಯೋಜನೆಯನ್ನು ಅರೇಬಿಕಾ ಮತ್ತು ರೋಬಸ್ಟಾ ತಳಿಗಳಿಗೆ ಜಾರಿಗೊಳಿಸಲಾಗುತ್ತದೆ.

ಈ ವಿಮೆ ಪಾವತಿಸಲು ಇಚ್ಛಿಸುವ ಬೆಳೆಗಾರರು ಫೆ. 25ರೊಳಗಾಗಿ ಅಗತ್ಯ ದಾಖಲಾತಿಗಳಾದ ಆರ್‌ಟಿಸಿ/ ಸಿಆರ್‌ಸಿ, ಗುರುತಿನ ಚೀಟಿಯ ನಕಲು ಹಾಗೂ ಪ್ರೀಮಿಯಂ ಹಣವನ್ನು ಡಿ.ಡಿ. ಮುಖಾಂತರ ಪಡೆದು ಸಮೀಪದ ಕಾಫಿ ಮಂಡಳಿಯ ವಲಯ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಬಹುದು. ಮಾಹಿತಿಗೆ ಸಮೀಪದ ಕಾಫಿ ಮಂಡಳಿ ಕಚೇರಿ ಸಂಪರ್ಕಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.