ADVERTISEMENT

ಕಾಫಿ ಬೆಳೆಗಾರರ ಸಹಕಾರ ಸಂಘದಿಂದ ಸಿಎಂಗೆ ಮನವಿ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2011, 11:15 IST
Last Updated 19 ಫೆಬ್ರುವರಿ 2011, 11:15 IST
ಕಾಫಿ ಬೆಳೆಗಾರರ ಸಹಕಾರ ಸಂಘದಿಂದ ಸಿಎಂಗೆ ಮನವಿ
ಕಾಫಿ ಬೆಳೆಗಾರರ ಸಹಕಾರ ಸಂಘದಿಂದ ಸಿಎಂಗೆ ಮನವಿ   

ಮಡಿಕೇರಿ: ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘದ ಪುನಶ್ಚೇತನಕ್ಕಾಗಿ 15 ಕೋಟಿ ರೂಪಾಯಿ ಮೃದು ಸಾಲ ಮಂಜೂರು ಮಾಡುವಂತೆ ಕೋರಿ ಸಂಘ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದೆ.ಇತ್ತೀಚೆಗೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದ ನಿಯೋಗ ಸಂಘದ ವ್ಯವಹಾರ ಹಾಗೂ ಪುನಶ್ಚೇತನ ಕಾರ್ಯ ಯೋಜನೆಗಳಿಗಾಗಿ ದುಡಿಯುವ ಬಂಡವಾಳದ ಅವಶ್ಯಕತೆಗಳಿಗೆ ಅನುಸಾರ 15 ಕೋಟಿ ರೂಪಾಯಿ ಮೃದು ಸಾಲ ಮಂಜೂರು ಮಾಡುವಂತೆ ಕೋರಿದ್ದು,

ಮುಖ್ಯಮಂತ್ರಿಗಳಿಂದಲೂ ಸಕಾರಾ ತ್ಮಕ ಸ್ಪಂದನೆ ದೊರೆತಿದೆ ಎಂದು ಸಂಘದ ಅಧ್ಯಕ್ಷ ಎಂ.ಬಿ. ದೇವಯ್ಯ ಶುಕ್ರವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.‘ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿಗೆ ಸಂಘವು 251 ಲಕ್ಷ ರೂಪಾಯಿ ಬಾಕಿ ಪಾವತಿಸ ಬೇಕಾಗಿದೆ. ಸರ್ಕಾರ ಸಂಘಕ್ಕೆ ಆರ್ಥಿಕ ಸಹಾಯ ಒದಗಿಸಿದಲ್ಲಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಸಾಲವನ್ನು ಏಕಕಾಲಿಕ ತೀರುವಳಿ ಮುಖಾಂತರ ಸಾಲ ಮರು ಪಾವತಿಸಿ ಬಡ್ಡಿ ಹೊರೆಯಿಂದ ವಿಮುಕ್ತವಾಗಬಹುದು. ಅಲ್ಲದೆ, ಬ್ಯಾಂಕ್ ವಿಧಿಸುವ ಬಡ್ಡಿಯನ್ನು ಕನಿಷ್ಠ ದರದಂತೆ ನಿಗದಿಪಡಿಸಿ ವಸೂಲಾತಿ ಮಾಡಲು ಹಾಗೂ ಒಂದೇ ಕಂತಿನಲ್ಲಿ ಮರು ಪಾವತಿಸಿದಲ್ಲಿ ರಿಯಾಯಿತಿ ನೀಡುವ ಬಗ್ಗೆ ಸರ್ಕಾರ ಬ್ಯಾಂಕ್‌ಗೆ ನಿರ್ದೇಶನ ನೀಡುವಂತೆಯೂ ಮುಖ್ಯಮಂತ್ರಿ ಗಳನ್ನು ಕೋರಲಾಯಿತು’ ಎಂದರು.

ಅಲ್ಲದೆ, ಸಂಘವು ದೀರ್ಘಾವಧಿ ಮತ್ತು ಗೋದಾಮು ಸಾಲದ ರೂಪದಲ್ಲಿ, ರೆಡಿಮೇಬಲ್ ಪಾಲು ಬಂಡವಾಳವಾಗಿ ಹಾಗೂ ಸರ್ಕಾರಕ್ಕೆ ಪಾವತಿಸಬೇಕಾದ ಡಿವಿಡೆಂಡ್ ಸೇರಿ ಒಟ್ಟು 341.45 ಲಕ್ಷ ರೂಪಾಯಿಗಳನ್ನು ಸರ್ಕಾರಕ್ಕೆ ಪಾವತಿಸಬೇಕಾಗಿರುತ್ತದೆ. ಆದರೆ, ಪ್ರಸ್ತುತ ಆರ್ಥಿಕ ಸ್ಥಿತಿಯಲ್ಲಿ ಈ ಹಣ ಪಾವತಿಸಲು ಸಂಘ ಶಕ್ತವಾಗಿ ರುವುದಿಲ್ಲ. ಈ ಹಿನ್ನೆಲೆಯಲ್ಲಿ ಮೊಬಲಗನ್ನು ಸಂಘದಲ್ಲಿ ಪಾಲು ಬಂಡವಾಳವಾಗಿ ಹೊಂದಾಣಿಕೆ ಮಾಡಲು ಸರ್ಕಾರವನ್ನು ಕೋರಲಾಗಿದೆ ಎಂದರು.

ಸೋಮವಾರದಿಂದ ಕಾಫಿ ಖರೀದಿ: ಸೋಮವಾರದಿಂದ ಮಡಿಕೇರಿ, ಚೆಯ್ಯಂಡಾಣೆ ಹಾಗೂ ಬಾಳೆಲೆಯಲ್ಲಿ ಬೆಳೆಗಾರರಿಂದ ನೇರವಾಗಿ ಕಾಫಿ ಖರೀದಿಸಲು ಸಂಘವು ನಿರ್ಧರಿಸಿದೆ. ಬೆಳೆಗಾರರಿಗೆ ಶೇ 50ರಷ್ಟು ಮುಂಗಡ ಹಣ ಪಾವತಿಸಿ ಸ್ಪರ್ಧಾತ್ಮಕ ದರದಲ್ಲಿ ಕಾಫಿ ಖರೀದಿಸಲಾಗುವುದು. ಈ ರೀತಿ ಖರೀದಿಸಿದ ಕಾಫಿಯನ್ನು ಹುಣಸೂರಿನ ಡಿಪೋದಲ್ಲಿ ದಾಸ್ತಾನಿಡಲಾಗುವುದು ಎಂದರು.

ಮಂಡ್ಯ, ಮೈಸೂರು, ತುಮಕೂರು, ಚಿತ್ರದುರ್ಗ, ಬೆಂಗಳೂರು ಜಿಲ್ಲೆಗಳಲ್ಲಿ ಸಹಕಾರ ಸಂಸ್ಥೆಗಳ ಮೂಲಕ ಕಾಫಿ ಪುಡಿ ಮಾರಾಟ ಮಾಡಲು ನಿರ್ಧರಿಸಲಾಗಿದೆ. ಅಲ್ಲದೆ, ಬೆಂಗಳೂರಿನಲ್ಲಿ ಸಂಘವು ಕಚೇರಿಯೊಂದನ್ನು ತೆರೆದು ಮುಕ್ತ ಮಾರುಕಟ್ಟೆಯಲ್ಲಿಯೂ ಕಾಫಿ ಪುಡಿ ಮಾರಾಟ ಮಾಡುವ ಮೂಲಕ ಸಂಘವನ್ನು ಪುನಶ್ಚೇತನಗೊಳಿಸಲು ತೀರ್ಮಾನಿಸಲಾಗಿದೆ. ಹುಣಸೂರಿನಲ್ಲಿ ಖಾಲಿಯಿರುವ ಸಂಘದ ಜಾಗದಲ್ಲಿ ವಾಣಿಜ್ಯ ಸಂಕೀರ್ಣವೊಂದನ್ನು ನಿರ್ಮಿಸುವ ಮೂಲಕ ಇನ್ನೂ ಹೆಚ್ಚಿನ ವರಮಾನ ಗಳಿಸಲು ಚಿಂತಿಸಲಾಗುತ್ತಿದೆ ಎಂದರು.ಸಂಘದ ಉಪಾಧ್ಯಕ್ಷ ಟಾಟಾ ಚಂಗಪ್ಪ, ನಿರ್ದೇಶಕರಾದ ಲೀಲಾ ಮೇದಪ್ಪ, ಎನ್.ಕೆ. ಅಯ್ಯಣ್ಣ ಹಾಗೂ ಪಿ.ಸಿ. ಕಾವೇರಪ್ಪ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.