ADVERTISEMENT

ಕಾರ್ಮಿಕರ ಮೇಲೆ ಮಾಲೀಕರ ದೌರ್ಜನ್ಯ

​ಪ್ರಜಾವಾಣಿ ವಾರ್ತೆ
Published 13 ಜನವರಿ 2012, 8:30 IST
Last Updated 13 ಜನವರಿ 2012, 8:30 IST

ವಿರಾಜಪೇಟೆ: ಅಮ್ಮತ್ತಿ ವಿಭಾಗದಲ್ಲಿ ಕೆಲವು ಕಾಫಿ ಬೆಳೆಗಾರರು ತೋಟದ ಕಾರ್ಮಿಕರ ಮೇಲೆ ದೌರ್ಜನ್ಯ ನಡೆಸಿ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ 15ದಿನಗಳೊಳಗೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಜಿಲ್ಲೆಯ ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ಹಾಗೂ ಧರಣಿ ನಡೆಸಲು ಸಿದ್ಧತೆ ನಡೆಸಿರುವುದಾಗಿ ಸಿಐಟಿಯು ಸಂಘಟನೆಯ ಜಿಲ್ಲಾ ಸಮಿತಿ ಕಾರ್ಯದರ್ಶಿ ಮಹಾದೇವ್ ಹೇಳಿದರು.

ತೋಟ ಕಾರ್ಮಿಕರ ಒಕ್ಕೂಟ, ಕಟ್ಟಡ ಕಾರ್ಮಿಕರ ಸಂಘ ಸೇರಿದಂತೆ ಜಿಲ್ಲೆಯ ವಿವಿಧ ಕಾರ್ಮಿಕ ಸಂಘಟನೆಗಳಿಂದ ಗುರುವಾರ ಪ್ರೆಸ್‌ಕ್ಲಬ್‌ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಕೆಲವು ನಿರ್ದಿಷ್ಟ ಕಾಫಿ ಬೆಳೆಗಾರರು ಕಾರ್ಮಿಕರಿಗೆ ಕನಿಷ್ಠ ವೇತನ ಹಾಗೂ ಯಾವುದೇ ಸೌಲಭ್ಯ ನೀಡದೇ ಕೂಲಿ ಕೆಲಸ ನಿರ್ವಹಿಸುವಂತೆ ಒತ್ತಾಯಿಸುತ್ತಿದ್ದಾರೆ. ನ್ಯಾಯಸಮ್ಮತವಾದ ವೇತನ ನೀಡಲು ಹಿಂದೇಟು ಹಾಕಿ ಕಾರ್ಮಿಕರ ಮೇಲೆಯೇ ಸಲ್ಲದ ಆರೋಪ ಹೊರಿಸುತ್ತಿದ್ದಾರೆ. ಕಾಫಿ ಬೆಳೆಗಾರರ ದ್ವಂದ್ವ ನೀತಿಯಿಂದ ಕಾರ್ಮಿಕರ ಜೀವನ ತತ್ತರಿಸುತ್ತಿದೆ. ಜಿಲ್ಲೆಯ ಮೂರು ತಾಲ್ಲೂಕುಗಳಲ್ಲಿ ಕಾರ್ಮಿಕ ಇಲಾಖೆಯಲ್ಲಿ ಅಧಿಕಾರಿಗಳಿಲ್ಲದ್ದರಿಂದ ಮಾಲೀಕರಿಂದ ಶೋಷಣೆಗೊಳಗಾಗಿದ್ದಾರೆ ಎಂದು ದೂರಿದರು.

ಎಲ್ಲ ಸಾಮಗ್ರಿಗಳ ಬೆಲೆ ಗಗನಕ್ಕೇರಿರುವಾಗ ಇಂದಿನ ಪರಿಸ್ಥಿಯಲ್ಲಿ ತೋಟಕಾರ್ಮಿಕರಿಗೆ ರೂ 250ರಿಂದ 300 ವೇತನ ಹಾಗೂ ಇತರ ಸೌಲಭ್ಯಗಳು ದೊರೆಯಬೇಕಾಗಿದೆ. ಈಗಾಗಲೇ ಕಾರ್ಮಿಕರ ಸಂಘಟನೆಗಳು, ಕಾರ್ಮಿಕ ಸಚಿವರು, ಕಾರ್ಮಿಕ ಇಲಾಖೆಯ ಆಯುಕ್ತರು, ಜಿಲ್ಲಾಧಿಕಾರಿಗೂ ದೂರು ಸಲ್ಲಿಸಿದ್ದಾರೆ. ಜಿಲ್ಲೆಯ ಎಲ್ಲ ಅಧಿಕಾರಿಗಳು ಕಾರ್ಮಿಕರ ಬಗ್ಗೆ ನಿಷ್ಕ್ರೀಯ ಧೋರಣೆ ತಳೆದಿದ್ದಾರೆ ಎಂದು ದೂರಿದರು.

ಕೊಡಗು ಜಿಲ್ಲಾ ಕಟ್ಟಡ ಕಾರ್ಮಿಕರ ಸಮಿತಿಯ ಗೌ: ಅಧ್ಯಕ್ಷ ಐ.ಆರ್.ಪ್ರಮೋದ್ ಮಾತನಾಡಿ ತೋಟ ಕಾರ್ಮಿಕರು ಸೇರಿದಂತೆ ಜಿಲ್ಲೆಯ ಇತರ ಎಲ್ಲ ಕಾರ್ಮಿಕರಿಗೂ ನ್ಯಾಯ ಸಮ್ಮತವಾದ ವೇತನ ಇತರ ಸೌಲಭ್ಯಗಳೊಂದಿಗೆ ದೊರೆಯಬೇಕು. ಇಲ್ಲದಿದ್ದರೆ ಕಾರ್ಮಿಕರು ಕೆಲಸಕ್ಕೆ ಹಾಜರಾಗದೆ ಬಹಿಷ್ಕಾರ ಹಾಕುವ ಸ್ಥಿತಿ ಬರಲಿದೆ. ಕಾರ್ಮಿಕರ ಮೇಲಿನ ದೌರ್ಜನ್ಯ ನಿಲ್ಲಬೇಕು. ಮಾಲೀಕರು ಹಾಗೂ ಕಾರ್ಮಿಕರುಗಳ ನಡುವೆ ಸೌಹಾರ್ದತೆ ಏರ್ಪಡಬೇಕು ಎಂದು ಹೇಳಿದರು. ಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಟಿ.ಎನ್.ಗೋವಿಂದಪ್ಪ, ಜಿಲ್ಲಾ ಜಾಗೃತಿ ಉಸ್ತುವಾರಿ ಸಮಿತಿಯ ಕೆ.ಪಳನಿ ಪ್ರಕಾಶ್, ಅಮ್ಮತ್ತಿಯ ಒಕ್ಕೂಟದ ರಾಮು, ಸಾಬಾ, ರಜಾಕ್, ಶ್ರೀನಿವಾಸ್, ಎಚ್.ಪಿ.ಜಯ ಹಾಗೂ ಕಾರ್ಮಿಕರು, ಮತ್ತಿತರರು ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.