ADVERTISEMENT

ಕಾರ್ಮಿಕರ ವಸತಿ ನಿರ್ಮಾಣಕ್ಕೆ ಮೀಸಲು ನಿಧಿ ಬಳಸಿ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2012, 9:15 IST
Last Updated 4 ಅಕ್ಟೋಬರ್ 2012, 9:15 IST

ವಿರಾಜಪೇಟೆ: ಪಟ್ಟಣ ಪಂಚಾಯಿತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಪೌರ ಕಾರ್ಮಿಕರ ವಸತಿ ದುರಸ್ತಿ, ವಸತಿ ನಿರ್ಮಾಣಕ್ಕೆ ಪಂಚಾಯಿತಿಯ ಮೀಸಲು ನಿಧಿ ಬಳಸಿ ಸೌಲಭ್ಯಗಳನ್ನು ಒದಗಿಸಬೇಕು ಎಂದು ವಿಧಾನಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಹೇಳಿದರು.

ಇಲ್ಲಿಯ ಪೌರ ಸೇವಾ ನೌಕರರ ಸಂಘದಿಂದ ಬುಧವಾರ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದ ಪೌರ ಸೇವಾ ನೌಕರರ ಕಲ್ಯಾಣ ನಿಧಿ ಹಾಗೂ ಕ್ಷೇಮಾಭಿವೃದ್ಧಿ ನಿಧಿಯಿಂದಲೂ ಕಾರ್ಮಿಕರಿಗೆ ವಿವಿಧ ಸೌಲಭ್ಯಗಳು ದೊರೆಯುತ್ತಿವೆ.

ಕಾರ್ಮಿಕರ ವಸತಿ ನಿರ್ಮಾಣಕ್ಕಾಗಿ ಸರ್ಕಾರದಿಂದ ಪ್ರತ್ಯೇಕ ನಿಧಿಯ ಸೌಲಭ್ಯವಿಲ್ಲ. ಪಟ್ಟಣ ಪಂಚಾಯಿತಿ ಮೀಸಲು ನಿಧಿಯಿಂದ ವಸತಿ ನಿರ್ಮಾಣ ಕೈಗೊಳ್ಳಬೇಕು. ಕಾರ್ಮಿಕರಿಗೆ ಇತರ ಎಲ್ಲ ಸೌಲಭ್ಯಗಳನ್ನು ಸರ್ಕಾರ ನೇರವಾಗಿ ಒದಗಿಸುತ್ತಿದೆ ಎಂದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷ ವಿ.ಕೆ.ಸತೀಶ್‌ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಪಟ್ಟಣ ಪಂಚಾಯಿತಿಯ ಕಾರ್ಮಿಕರು ಪಟ್ಟಣದ ನೈರ್ಮಲ್ಯ ಸೇರಿದಂತೆ ಇತರ ಎಲ್ಲ ಅಗತ್ಯ ಕೆಲಸಗಳನ್ನು ಪೂರೈಸುತ್ತಿದ್ದಾರೆ. ವಸತಿ ದುರಸ್ತಿ ಹಾಗೂ ವಸತಿ ನಿರ್ಮಾಣಕ್ಕಾಗಿ ಬೇಡಿಕೆ ಸಲ್ಲಿಸಿದ್ದಾರೆ ಎಂದು ಹೇಳಿದರು.

ವೇದಿಕೆಯಲ್ಲಿ ಪಂಚಾಯಿತಿ ಉಪಾಧ್ಯಕ್ಷೆ ಕೌಶರ್, ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಕೆ.ಆರ್.ಮುರುಳೀಧರ್, ಮಡಿಕೇರಿಯ ಯೋಜನಾಧಿಕಾರಿ ಕೆಂಚಪ್ಪ ಇದ್ದರು. ಮೂವರು ಕಾರ್ಮಿಕರನ್ನು ಸನ್ಮಾನಿಸಲಾಯಿತು. ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಬಿ.ಕಟ್ಟಿ ಪೂಣಚ್ಚ ಸ್ವಾಗತಿಸಿದರು. ಯೋಜನಾಧಿಕಾರಿ ಶೈಲಾ ಕಾರ್ಯಕ್ರಮ ನಿರೂಪಿಸಿದರು. ಸದಸ್ಯ ಎಸ್.ಎಚ್.ಮತೀನ್ ವಂದಿಸಿದರು. ಕಾರ್ಮಿಕರ ದಿನಾಚರಣೆಯಲ್ಲಿ ಪಂಚಾಯಿತಿ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.