ADVERTISEMENT

ಕಾವೇರಿ ತಾಲ್ಲೂಕಿಗೆ ಒತ್ತಾಯಿಸಿ 30ರಂದು ರ‍್ಯಾಲಿ

ಕಾವೇರಿ ತಾಲ್ಲೂಕು ಹೋರಾಟ ಕೇಂದ್ರೀಯ ಸಮಿತಿ ಸಭೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2017, 10:42 IST
Last Updated 12 ಅಕ್ಟೋಬರ್ 2017, 10:42 IST

ಕುಶಾಲನಗರ: ಕುಶಾಲನಗರ ಪಟ್ಟಣವನ್ನು ಕೇಂದ್ರವಾಗಿರಿಕೊಡು ನೂತನ ‘ಕಾವೇರಿ ತಾಲ್ಲೂಕು’ ರಚನೆಗೆ ಒತ್ತಾಯಿಸಿ ಸರ್ಕಾರದ ಗಮನ ಸೆಳೆಯಲು ಅ. 30ರಂದು ಬೃಹತ್ ರ‍್ಯಾಲಿ ನಡೆಸಲು ಬುಧವಾರ ನಡೆದ ಕಾವೇರಿ ತಾಲ್ಲೂಕು ಹೋರಾಟ ಕೇಂದ್ರೀಯ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಕಳೆದ ಎರಡು ದಶಕಗಳಿಂದಲೂ ಕಾಲ್ಲೂಕಿಗೆ ಒತ್ತಾಯಿಸಿ ನಿರಂತರ ಹೋರಾಟ ನಡೆಸುತ್ತ ಬಂದಿದ್ದರೂ ಕೂಡ ಸರ್ಕಾರ ಪರಿಗಣನೆ ತೆಗೆದುಕೊಳ್ಳದೆ ನಿರ್ಲಕ್ಷ್ಯ ತೋರುತ್ತಿರುವ ಕ್ರಮವನ್ನು ಖಂಡಿಸಲಾಯಿತು.

ಯಾವುದೇ ಆರ್ಥಿಕ ಹೊರೆಯಿಲ್ಲದೆ ತಾಲ್ಲೂಕು ರಚನೆ ಮಾಡಲು ಎಲ್ಲ ಅರ್ಹತೆಯನ್ನು ಹೊಂದಿರುವ ಕುಶಾಲನಗರ ಕಾವೇರಿ ತಾಲ್ಲೂಕು ರಚನೆಗೆ ಕೆಲವು ಪಟ್ಟಭಧ್ರ ಹಿತಶಕ್ತಿಗಳ ಕೈವಾಡವಿದೆ ಎಂದು ಜಿ.ಪಂ.ಸದಸ್ಯೆ ಕೆ.ಪಿ.ಚಂದ್ರಕಲಾ ಅಸಮಧಾನ ವ್ಯಕ್ತಪಡಿಸಿದರು.

ADVERTISEMENT

ಪೊನ್ನಂಪೇಟೆ ತಾಲ್ಲೂಕು ರಚನಾ ಹೋರಾಟ ಸಮಿತಿಯಲ್ಲಿ ಎಲ್ಲ ಜನಪ್ರತಿನಿಧಿಗಳು ಸಮೂಹಿಕವಾಗಿ ಪಾಲ್ಗೊಂಡಿದ್ದಾರೆ. ಆದರೆ, ಕಾವೇರಿ ತಾಲ್ಲೂಕು ಹೋರಾಟಕ್ಕೆ ಕೆಲವು ಜನಪ್ರತಿನಿಧಿಗಳು ಬೆಂಬಲ ನೀಡುತ್ತಿಲ್ಲ ಎಂದು ಚಂದ್ರಕಲಾ ಹೇಳಿದರು.

ಸರ್ಕಾರ ಈಗಾಗಲೇ ಘೋಷಿಸಿರುವ 49 ತಾಲ್ಲೂಕುಗಳು ಮುಂದಿನ ವರ್ಷ ಜನವರಿಯಲ್ಲಿ ಅಸ್ತಿತ್ವಕ್ಕೆ ಬರಲಿದೆ. ಅಷ್ಟರಲ್ಲಿ 50ನೇ ತಾಲ್ಲೂಕಾಗಿ ಕುಶಾಲನಗರವನ್ನು ಪರಿಗಣಿಸಲೇಬೇಕಾದ ಒತ್ತಡದ ವಾತಾವರಣ ನಿರ್ಮಿಸುವ ಜವಾಬ್ದಾರಿ ಹೋರಾಟ ಸಮಿತಿ ಮೇಲೆ ಇದೆ. ಇದಕ್ಕೆ ಸಂಬಂಧಿಸಿದಂತೆ ಸಾಧ್ಯವಿರುವ ಎಲ್ಲಾ ಹೋರಾಟ ಮಾರ್ಗಗಳ ಕುರಿತು ವಿಸ್ತೃತವಾಗಿ ಚರ್ಚಿಸಲಾಯಿತು. ಅ.12ರಿಂದ ಅಂಚೆ ಕಾರ್ಡು ಚಳುವಳಿ ನಡೆಸಲು ತೀರ್ಮಾನಿಸಲಾಯಿತು.19 ಗ್ರಾ.ಪಂ.ವ್ಯಾಪ್ತಿಯಲ್ಲಿನ ಎಲ್ಲ ಸಮಿತಿಗಳು ಕಾವೇರಿ ತಾಲ್ಲೂಕಿಗೆ ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲು ನಿರ್ಧಾರಿಸಲಾಯಿತು.

ರ್‍ಯಾಲಿ ಸಂಬಂಧಿಸಿದಂತೆ ಸ್ಥಾನೀಯ ಸಮಿತಿಗಳ ವ್ಯಾಪ್ತಿಯಲ್ಲೂ ಜಾಗೃತಿ ಸಭೆಗಳನ್ನು ಆಯೋಜಿಸಲಾಗುವುದು. ಪ್ರತೀ ಮನೆಯಿಂದಲೂ ತಲಾ ಒಬ್ಬರು ರ್ಯಾಲಿಯಲ್ಲಿ ಭಾಗವಹಿಸುವಂತೆ ಪ್ರೇರೇಪಿಸಬೇಕು ಎಂದು ವಿ.ಪಿ.ಶಶಿಧರ್ ಸಲಹೆ ನೀಡಿದರು.

30ರಂದು ನಡೆಯಲಿರುವ ರ‍್ಯಾಲಿ ತಾಲ್ಲೂಕು ಹೋರಾಟಕ್ಕೆ ಸಂಬಂಧಿಸಿದಂತೆ ಮಹತ್ವದ ಮೈಲಿಗಲ್ಲು ಆಗಲಿದ್ದು, ಇದು ಯಾರ ವಿರುದ್ಧವೂ ನಡೆಯುತ್ತಿಲ್ಲ. ಜಿಲ್ಲೆಯ ಶಾಸಕರು, ವಿಧಾನಪರಿಷತ್ ಸದಸ್ಯರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರನ್ನು ಆಹ್ವಾನಿಸಲಾಗುವುದು. ಕಾರು ನಿಲ್ದಾಣದಲ್ಲಿ ನಡೆಯಲಿರುವ ಬಹಿರಂಗ ಸಭೆಯಲ್ಲಿ ತಾಲ್ಲೂಕು ಘೋಷಣೆಯ ಅಗತ್ಯತೆ ಮನವರಿಕೆ ಮಾಡಿಕೊಟ್ಟು ಹೋರಾಟಕ್ಕೆ ಅವರ ಸಹಕಾರವನ್ನೂ ತೆಗೆದುಕೊಳ್ಳಲಾಗುವುದು. ನಂತರ ಅಗತ್ಯ ಬಿದ್ದರೆ ಮುಂದೆ ಪ್ರಸ್ತಾವಿತ ತಾಲೂಕಿನ ವ್ಯಾಪ್ತಿಯಲ್ಲಿ ಬಂದ್ ನಡೆಸುವ ಬಗ್ಗೆಯೂ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಪ್ರಸ್ತಾಪಿತ ತಾಲೂಕು ವ್ಯಾಪ್ತಿಯ ಎಲ್ಲಾ ಜಿಲ್ಲಾ ಪಂಚಾಯಿತಿ ಸದಸ್ಯರು, ತಾಲ್ಲೂಕು ಪಂಚಾಯಿತಿ ಸದಸ್ಯರು, ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರು, 19 ಸ್ಥಾನೀಯ ಸಮಿತಿಗಳ ಪ್ರತಿನಿಧಿಗಳು, ಕೇಂದ್ರ ಸಮಿತಿ ಪದಾಧಿಕಾರಿಗಳು ಪಾಲ್ಗೊಂಡು ಹೋರಾಟದ ರೂಪುರೇಷೆಗಳನ್ನು ಚರ್ಚಿಸಿದರು. ಸಕಾರಾತ್ಮಕ ಹೋರಾಟಕ್ಕೆ ಸಂಬಂಧಿಸಿದಂತೆ ಅಗತ್ಯ ಸಲಹೆಗಳನ್ನು ನೀಡಿದರು.

ಜಿ.ಪಂ.ಸದಸ್ಯರಾದ ಕುಮುದಾ ಧರ್ಮಪ್ಪ, ಸುನೀತಾ, ಕೆ.ಆರ್.ಮಂಜುಳಾ, ತಾ.ಪಂ.ಜಯಣ್ಣ, ಕೇಂದ್ರ ಸಮಿತಿ ಸದಸ್ಯರಾದ ಜಿ.ಎಲ್.ನಾಗರಾಜು, ಎಂ.ವಿ.ನಾರಾಯಣ, ಅಬ್ದುಲ್ ಖಾದರ್, ವಿವಿಧ ಗ್ರಾ.ಪಂ.ಅಧ್ಯಕ್ಷರು, ಸ್ಥಾನೀಯ ಸಮಿತಿ ಅಧ್ಯಕ್ಷರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಸಭೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.