ADVERTISEMENT

ಕುಡಿಯುವ ನೀರು ಸಮಸ್ಯೆ ಪರಿಹಾರ ಯತ್ನ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2011, 6:50 IST
Last Updated 24 ಮಾರ್ಚ್ 2011, 6:50 IST

ಶನಿವಾರಸಂತೆ: ಪಟ್ಟಣದ ಸಾರ್ವಜನಿಕರು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದು; ಹೊಳೆಯ ನೀರನ್ನು ಒದಗಿಸಿದರೆ ಸಮಸ್ಯೆಯನ್ನು ಪರಿಹರಿಸಬಹುದು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ಎನ್.ರಘು ಹೇಳಿದರು.

ಪಂಚಾಯಿತಿಯಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಉದ್ಯೋಗ ಖಾತ್ರಿ ಯೋಜನೆಯಡಿ ಹೊಳೆಯ ಹೂಳೆತ್ತುವ ಕಾರ್ಯ ಆರಂಭವಾಗಿದೆ. ಜಿಲ್ಲಾ ಪಂಚಾಯಿತಿ ಅನುದಾನ 16 ಲಕ್ಷ ರೂಪಾಯಿ ವೆಚ್ಚದಲ್ಲಿ ನೀರು ಸರಬರಾಜು ಯೋಜನೆ ಕಾಮಗಾರಿ ನಡೆದು ಮೇ ತಿಂಗಳಿನಿಂದ ನೀರು ಸರಬರಾಜು ಸುಗಮವಾಗುವುದು ಎಂದು ಭರವಸೆ ನೀಡಿದರು.

 ಮಾ.26ರಂದು ಸಮೀಪದ ಆಲೂರು ಸಿದ್ದಾಪುರ ಗ್ರಾಮಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಆಗಮಿಸಿದಾಗ  ಹೇಮಾವತಿ ಹಿನ್ನೀರಿನಿಂದ ಶನಿವಾರಸಂತೆ ಪಟ್ಟಣಕ್ಕೆ ಕುಡಿಯುವ ನೀರಿನ ಯೋಜನೆಯನ್ನು ಮಾಡಿಕೊಡುವಂತೆ  ಮನವಿ ಅರ್ಪಿಸಲಾಗುವುದು ಎಂದರು.

ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ರಾಣಿ ಚೆನ್ನಮ್ಮನ ಪ್ರತಿಮೆ ಅನಾವರಣ ಮಾಡುವುದು. ಜಿಲ್ಲಾ  ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಅನುದಾನ 6.5 ಲಕ್ಷ ರೂಪಾಯಿ ವೆಚ್ಚದಲ್ಲಿ ಸಾರ್ವಜನಿಕ  ಶೌಚಾಲಯ ನಿರ್ಮಾಣ ಮಾಡುವುದು ಎಂದು ಸಭೆಯಲ್ಲಿ ನಿರ್ಣಯ ಮಾಡಲಾಯಿತು.

 ನಾಲ್ಕನೇ ದರ್ಜೆಯ ಪೌರ ನೌಕರರಾದ ಅರಸಪ್ಪ ಹಾಗೂ ನರಸಿಂಹ ತಿಂಗಳಿಗೆ 15 ಸಾವಿರ ರೂಪಾಯಿ  ಸಂಬಳ ಪಡೆದರೂ 300 ರೂಪಾಯಿಯಷ್ಟೂ ಕೆಲಸ ಮಾಡುತ್ತಿಲ್ಲ ಎಂದು ಸದಸ್ಯ ಮಹ್ಮದ್‌ಗೌಸ್ ಜಿಲ್ಲಾ ಪಂಚಾಯಿತಿ ಸದಸ್ಯೆ ಚಂದ್ರಿಕಾರೊಂದಿಗೆ ದೂರಿದರು.

ಸಂತೆ ಮಾರುಕಟ್ಟೆಯ ಶುಚಿತ್ವವನ್ನು ಬಿಡ್ಡುದಾರರಿಗೆ 15 ಸಾವಿರ ರೂಪಾಯಿಗೆ ನೀಡುವಂತೆ ನಿರ್ಣಹಿಸಲಾಯಿತು. ಮುಖ್ಯರಸ್ತೆಯ ಬನ್ನಿ ಮರದ ಬಳಿಯ ಮೆಣಸಿನಪುಡಿ ಮಾಡುವ ಗಿರಣಿಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಆ ಗಿರಣಿಯ ಪರವಾನಗಿಯನ್ನು ರದ್ದು ಪಡಿಸುವಂತೆ ಸಾರ್ವಜನಿಕರಿಂದ ಬಂದ ಅರ್ಜಿಯನ್ನು ಪರಿಶೀಲಿಸಿ, ಈ ವಿಚಾರವನ್ನು ಚೇಂಬರ್ ಆಫ್ ಕಾಮರ್ಸಿಗೆ ಒಪ್ಪಿಸುವಂತೆಯೂ ಸಭೆಯಲ್ಲಿ  ನಿರ್ಣಹಿಸಲಾಯಿತು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಕಾರ್ಯದರ್ಶಿಯವರು ಮಾರ್ಚಿ ತಿಂಗಳೊಳಗೆ ಕಂದಾಯ ಬಾಕಿದಾರರಿಂದ 3 ಲಕ್ಷ ರೂಪಾಯಿ ಕಂದಾಯ ವಸೂಲಿ ಮಾಡುವಂತೆಯೂ ಸೂಚಿಸಲಾಯಿತು. ಪಟ್ಟಣದ 1ನೇ ವಿಭಾಗದ ಹಳೆ ಸಂತೆ ಮಾಳದ ಜಾಗದಲ್ಲಿ ಶಾಸಕರ ಅನುದಾನದಿಂದ 12 ಲಕ್ಷ ರೂಪಾಯಿ ವೆಚ್ಚದಲ್ಲಿ ಉದ್ಯಾನವನ ನಿರ್ಮಿಸಿಕೊಡುವಂತೆ ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು.

  ಜಿಲ್ಲಾ ಪಂಚಾಯಿತಿ ಸದಸ್ಯೆ ಚಂದ್ರಿಕಾ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಚಂದ್ರಕಲಾ,ಸದಸ್ಯರಾದ ಡಿ.ಎನ್.ರಾಜಶೇಖರ್, ಆರ್.ವಿ.ಕುಮಾರ್, ಮಹ್ಮದ್‌ಗೌಸ್, ಮಂಜುನಾಥ್, ಭುವನೇಶ್ವರಿ, ಧನಲಕ್ಷ್ಮಿ, ಜ್ಯೋತಿ, ಶಾಂತಾ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.