ADVERTISEMENT

ಕುಣಿದು ಕುಪ್ಪಳಿಸಿದ ಬುಡಕಟ್ಟು ಜನರು

ದೇವಪುರ: ಅಶ್ಲೀಲ ಬೈಗುಳದಿಂದಲೇ ಪ್ರಸಿದ್ಧಿ ಪಡೆದಿರುವ 'ಕುಂಡೆಹಬ್ಬಕ್ಕೆ' ಸಂಭ್ರಮದ ತೆರೆ

​ಪ್ರಜಾವಾಣಿ ವಾರ್ತೆ
Published 25 ಮೇ 2018, 9:41 IST
Last Updated 25 ಮೇ 2018, 9:41 IST
ದೇವರಪುರದ ಸಣ್ಣುವಂಡ ಕುಟುಂಬಸ್ಥರು ಕೃತಕ ಕುದುರೆ ಮೂಲಕ ದೇವಸ್ಥಾನದ ಭಂಡಾರ ಹೊತ್ತೊಯ್ದರು
ದೇವರಪುರದ ಸಣ್ಣುವಂಡ ಕುಟುಂಬಸ್ಥರು ಕೃತಕ ಕುದುರೆ ಮೂಲಕ ದೇವಸ್ಥಾನದ ಭಂಡಾರ ಹೊತ್ತೊಯ್ದರು   

ಗೋಣಿಕೊಪ್ಪಲು: ಬುಡಕಟ್ಟು ಜನರ ಸಂಭ್ರ್ರಮದ ‘ಕುಂಡೆಹಬ್ಬ’ ಗುರುವಾರ ತಿತಿಮತಿ ಬಳಿಯ ದೇವರಪುರದಲ್ಲಿ ವಿಜೃಂಭಣೆಯಿಂದ ಜರುಗಿತು. ಸಾವಿರಾರು ಬುಡಕಟ್ಟು ಜನರು ದೇವರಪುರ ಭದ್ರಕಾಳಿ ದೇವಸ್ಥಾನದ ಬಳಿ ಸೇರಿ ಕುಣಿದು ಕುಪ್ಪಳಿಸುತ್ತಾ ಆನಂದಿಸಿದರು.

ಕುಂಡೆಹಬ್ಬ ಬುಧವಾರದಿಂದಲೇ ಆರಂಭಗೊಂಡಿತ್ತು. ಬುಡಕಟ್ಟು ಜನಾಂಗದವರಾದ ಜೇನುಕುರುಬರು, ಯರವರು, ಕಾಡುಕುರುಬರು ವೇಶ ತೊಟ್ಟು ಕೈಯಲ್ಲಿ ಟಿನ್ನು, ಪ್ಲಾಸ್ಟಿಕ್ ಹಿಡಿದು ಬಡಿಯುತ್ತಾ ಅಂಗಡಿ ಮುಂಗಟ್ಟು ಹಾಗೂ ಮನೆಗಳಿಗೆ ತೆರಳಿ ಹಣ ಬೇಡಿದರು.

ವಿಚಿತ್ರವಾದ ವೇಷ ತೊಟ್ಟು ಅವರು ಹಾಡುತ್ತಿದ್ದ ಹಾಡು ಕೇಳುಗರಿಗೆ ತೀವ್ರ ಮುಜುಗರ ಮೂಡಿಸುತ್ತಿದ್ದವು. ಮಹಿಳೆಯರ ವೇಷ ತೊಟ್ಟ ಬುಡಕಟ್ಟು ಜನಾಂಗದ ಯುವಕರು, ಎದುರಾದವರು ಹಣ ಕೊಡದಿದ್ದರೆ ಅವರನ್ನು ಬಿಡದೇ 'ಏ ಕುಂಡೆ...' ಎಂದು ಅಶ್ಲೀಲವಾಗಿ ಬೈಯುತ್ತಾ ಹಣ ಕೊಡುವ ತನಕ ಸತಾಯಿಸುತ್ತಿದ್ದ ದೃಶ್ಯಗಳು ಕಂಡುಬಂದವು. ಹಣ ಕೊಟ್ಟ ಮೇಲೂ ಬೈಯುತ್ತಲೇ ಮುಂದೆ ಸಾಗುತ್ತಿದ್ದರು.

ADVERTISEMENT

ತಂಡೋಪತಂಡವಾಗಿ ಬಂದ ಬುಡಕಟ್ಟು ಜನರು ಮಧ್ಯಾಹ್ನ 3 ಗಂಟೆ ವೇಳೆಗೆ ಕುಣಿಯುತ್ತಾ ಭದ್ರಕಾಳಿ ದೇವಸ್ಥಾನದ ಬಳಿಯಲ್ಲಿ ಸೇರಿದರು. ಇತ್ತ ಕುಶಾಲನಗರದ ದುಬಾರೆ, ಸಿದ್ದಾಪುರ, ವಿರಾಜಪೇಟೆ, ಬಾಳೆಲೆ, ಪೊನ್ನಂಪೇಟೆ, ಕುಟ್ಟ, ಶ್ರೀಮಂಗಲ, ಪಿರಿಯಾಪಟ್ಟಣ ತಾಲ್ಲೂಕಿನ ಪಂಚವಳ್ಳಿ, ಬೂದಿತಿಟ್ಟು, ಬಸವನಹಳ್ಳಿ ಮೊದಲಾದ ಕಡೆಯಿಂದಲೂ ತಾಳ ಮೇಳಗಳೊಂದಿಗೆ ಕುಣಿಯುತ್ತಾ ನೂರಾರು ವೇಷಧಾರಿಗಳು ದೇವರಪುರಕ್ಕೆ ಆಗಮಿಸಿದರು.

ಒಡೆದು ಹೋದ ಪ್ಲಾಸ್ಟಿಕ್ ಡ್ರಂ, ಬಿಂದಿಗೆ, ಹಳೆಯ ಟಿನ್ ಮೊದಲಾದವುಗಳೆಲ್ಲ ಇವರ ವಾದ್ಯ ಪರಿಕರಗಳಾಗಿದ್ದವು.  ಮಹಿಳೆಯರ ಉಡುಪು ಧರಿಸಿ ಮುಖ ಹಾಗೂ ಕೈ ಕಾಲುಗಳಿಗೆಲ್ಲ ಸಿಕ್ಕಿದ ಬಣ್ಣ ಬಳಿದಿದ್ದರು.

ಸೊಪ್ಪು, ಹರಿದ ಬಟ್ಟೆ, ಕರಡಿ ವೇಷ, ಸ್ತ್ರೀ ರೂಪಧಾರಿಗಳು ಉದ್ದ ಕೂದಲು, ತುಂಡುಡುಗೆ, ಫ್ಯಾಷನ್ ಪರಿಕರಗಳು, ಮೊದಲಾದ ಮುಖವಾಡ ಹಾಕಿಕೊಂಡು ನೋಡುಗರ ಚಿತ್ತ ಸೆಳೆದರು. ಯುವತಿಯರ ಉಡುಪುಗಳನ್ನು ಧರಿಸಿದ ಯುವಕರು ಸೋರೆಬುರುಡೆ ಗಿಲಿಗಿಲಿ ಶಬ್ದದ ಡೋಲು ಬಡಿತಕ್ಕೆ ತಕ್ಕಂತೆ ತಾಳ ಹಾಕುತ್ತಾ ಕುಣಿಯುವ ಪರಿ ಗಮನ ಸೆಳೆದಿತ್ತು.

ರಸ್ತೆ ಉದ್ದಕ್ಕೂ ವಾಹನಗಳನ್ನು ಅಡ್ಡಗಟ್ಟಿ ಕುಣಿಯುತ್ತಾ ಹಣ ಬೇಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮದ್ಯ ನಿಷೇಧ ಮಾಡಿದ್ದರೂ ಕೆಲವರು ಕುಡಿದು ರಸ್ತೆ ಬದಿಯಲ್ಲೇ ಬಿದ್ದಿದ್ದರು. ಭದ್ರಕಾಳಿ ದೇವಸ್ಥಾನದ ಬಳಿ ಸಣ್ಣುವಂಡ ಕುಟುಂಬಸ್ಥರ ಕುದುರೆ ಬಂದಾಗ ಹಬ್ಬಕ್ಕೆ ರಂಗೇರಿತು. ಹರಕೆಗೆ ಕೋಳಿ ತಂದ ಭಕ್ತರು ಅದನ್ನು ದೇವಸ್ಥಾನದ ಮುಂಭಾಗ ಕುಣಿಯುವ ಜನರ ಮಧ್ಯದಲ್ಲಿ ಮೇಲಕ್ಕೆ ಹಾರಿ ಬಿಡುತ್ತಿದ್ದರು. ಈ ವೇಳೆಯಲ್ಲಿ ಅದನ್ನು ಹಿಡಿಯಲು ಮುಂದಾದವರು ಒಬ್ಬರ ಮೇಲೆ ಒಬ್ಬರು ಬಿದ್ದು ಕೈ ಕಾಲುಗಳಿಗೆ ನೋವು ಮಾಡಿಕೊಂಡರು. ಕೋಳಿಯ ಒಂದೊಂದು ಅಂಗಾಂಗ ಒಬ್ಬೊಬ್ಬರ ಕೈಯಲ್ಲಿತ್ತು.

ಹಬ್ಬದ ವೈಭವ ನೋಡಲು ನೂರಾರು ಜನರು ಹೊರಗಿನಿಂದ ಆಗಮಿಸಿದ್ದರು. ಹೀಗೆ ಕುಣಿದು ಕುಪ್ಪಳಿಸಿದ ಬುಡಕಟ್ಟು ಜನರು ಸಂಜೆಯಾಗುತ್ತಿದ್ದಂತೆ ಬೇಡಿದ ಹಣವನ್ನು ದೇವಸ್ಥಾನದ ಹುಂಡಿಗೆ ಒಪ್ಪಿಸಿ ‘ಬೈದದ್ದು ತಪ್ಪಾಯಿತು’ ಎಂದು ದೇವರಲ್ಲಿ ತಪ್ಪೊಪ್ಪಿಕೊಂಡು ಹಬ್ಬದ ಉತ್ಸವಕ್ಕೆ ತೆರೆ ಎಳೆದರು.

ಈ ಬಾರಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರಿಂದ ಯಾವುದೇ ಅಹಿತಕರ ಘಟನೆ ಸಂಭವಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.