ADVERTISEMENT

ಕೃಷಿ, ಅರಣ್ಯ ಉಳಿಸಲು ಸ್ಪಷ್ಟ ನೀತಿ ಅಗತ್ಯ

ಪೊನ್ನಂಪೇಟೆ ಅರಣ್ಯ ಕಾಲೇಜಿನಲ್ಲಿ ವಿಚಾರ ಸಂಕಿರಣ –ವಿಜಯಶಂಕರ್ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2018, 11:15 IST
Last Updated 24 ಮಾರ್ಚ್ 2018, 11:15 IST

ಗೋಣಿಕೊಪ್ಪಲು: ‘ಕೃಷಿ ಮತ್ತು ಅರಣ್ಯ ಪರಸ್ಪರ ಪೂರಕವಾದುದು. ಎರಡೂ ಕ್ಷೇತ್ರಗಳೂ ಇಂದು ಜನತೆಯ ಅವಜ್ಞೆಗೆ ಒಳಗಾಗಿವೆ’ ಎಂದು ಕಾಂಗ್ರೆಸ್‌ ಮುಖಂಡ ಸಿ.ಎಚ್.ವಿಜಯಶಂಕರ್ ವಿಷಾದಿಸಿದರು.

ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾನಿಲಯ ಹಾಗೂ ಪೊನ್ನಂಪೇಟೆ ಅರಣ್ಯ ಕಾಲೇಜಿನ ಆಶ್ರಯದಲ್ಲಿ ನಡೆದ ‘ಭವಿಷ್ಯದ ಸುಭದ್ರತೆಗೆ ಮರಗಳ ಸಂರಕ್ಷಣೆ ಮತ್ತು ಉಪಯುಕ್ತತೆ’ ವಿಷಯ ಕುರಿತ ರಾಷ್ಟ್ರೀಯ ವಿಚಾರಸಂಕಿರಣದ ಸಮಾರೋಪ ಸಮಾರಂಭದಲ್ಲಿ ಗುರುವಾರ ಮಾತನಾಡಿದರು.

‘ಭಾರತದ ಕೃಷಿ ಪ್ರಧಾನ ರಾಷ್ಟ್ರ. ಕೃಷಿ ಮತ್ತು ಅರಣ್ಯ ಸಂರಕ್ಷಣೆಗೆ ಸ್ಪಷ್ಠ ನೀತಿ ರೂಪಿಸಿಲ್ಲ. ಒಂದೆಡೆ ಕೃಷಿಯತ್ತ ರೈತ ಬೆನ್ನು ಮಾಡಿದ್ದರೆ, ಮತ್ತೊಂದೆಡೆ ಜನತೆ ಅರಣ್ಯ ನಾಶಪಡಿಸುತ್ತಿದ್ದಾರೆ. ಇವುಗಳ ರಕ್ಷಣೆಗೆ ಅಗತ್ಯ ಕ್ರಮ ಅಗತ್ಯ’ ಎಂದು ಹೇಳಿದರು.

ADVERTISEMENT

‘ಅರಣ್ಯ ನಾಶದಿಂದ ಹಲವು ನದಿಗಳು ಜೀವಂತಿಕೆ ಕಳೆದುಕೊಂಡಿವೆ. ಪರಿಸ್ಥತಿ ಹೀಗೇ ಮುಂದುವರಿದರೆ ಭವಿಷ್ಯದ ಪೀಳಿಗೆ ಕ್ಷಮಿಸದು. ಶೇ33ರಷ್ಟು ಇರಬೇಕಿದ್ದ ಅರಣ್ಯ ಪ್ರದೇಶ ಇಂದು ಶೇ 21ಕ್ಕೆ ಇಳಿದಿದೆ. ಶೇ 80 ರಷ್ಟು ಕೃಷಿ ಭೂಮಿಯಲ್ಲಿ ಗಿಡ ಮರ ಬೆಳೆಸಲು ಒತ್ತು ನೀಡಬೇಕಾಗಿದೆ’ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಕಳೆದ 5 ವರ್ಷಗಳಲ್ಲಿ 65 ಸಾವಿರ ಮರ ಕಡಿಯಲಾಗಿದೆ. ಕೆಲವು ಗಾಳಿಮಳೆಗೆ ಉರುಳಿವೆ. ಇವುಗಳಿಗೆ ಪರ್ಯಾಯವಾಗಿ ಮತ್ತೆ ಸಸಿ ನೆಡುವ ಕೆಲಸವಾಗಲಿಲ್ಲ’ ಎಂದು ಅಭಿಪ್ರಾಯಪಟ್ಟರು.

ಐಟಿಸಿ ಕಂಪನಿ ವ್ಯವಸ್ಥಾಪಕ ಗಿರೀಶ್ ಮೋಹನ್ ಅವರು, ‘ಗಿಡಮರಗಳೂ ರೈತರಿಗೆ ಆದಾಯ ತರುತ್ತವೆ. ಈ ಬಗ್ಗೆ ಅರಿವು ಮೂಡಿಸಬೇಕು’ ಎಂದರು.

ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯದ ಕುಲಪತಿ ಡಾ.ನಾರಾಯಣ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಸಂಶೋಧನಾ ನಿರ್ದೇಶಕ ಡಾ.ಎಂ.ಕೆ.ನಾಯಕ್ ಮಾತನಾಡಿದರು.

ಡೀನ್ ಡಾ.ಸಿ.ಜಿ.ಕುಶಾಲಪ್ಪ, ಸಂಘಟನಾ ಕಾರ್ಯದರ್ಶಿ ಡಾ. ರಾಮಕೃಷ್ಣ ಹೆಗಡೆ, ಡಾ.ದೇವಗಿರಿ, ಡಾ. ಕೆಂಚರೆಡ್ಡಿ, ಡಾ.ರಮೇಶ್ ಹಾಜರಿದ್ದರು.

ಗುಜರಾತ್, ಜಲಂಧರ್, ತಮಿಳುನಾಡು, ಕೇರಳ ಸೇರಿ ವಿವಿಧ ವಿಶ್ವವಿದ್ಯಾನಿಲಯಗಳ 145 ಮಂದಿ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.