ADVERTISEMENT

ಕೃಷಿ ಉತ್ಪನ್ನ ಬೆಲೆ: ರೈತರೇ ನಿರ್ಧರಿಸಲಿ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2012, 8:10 IST
Last Updated 8 ಅಕ್ಟೋಬರ್ 2012, 8:10 IST

ಕುಶಾಲನಗರ: ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ಸ್ವತಃ ರೈತರೇ ದರ ನಿಗದಿ ಪಡಿಸುವ ಪದ್ಧತಿ ಜಾರಿಗೆ ಬಂದರೆ ಮಾತ್ರ ಕೃಷಿಕರ ಬದುಕು ಹಸನಾಗಲಿದೆ ಎಂದು ವಿಧಾನ ಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಅಭಿಪ್ರಾಯಪಟ್ಟರು.

ಕುಶಾಲನಗರ ರೋಟರಿ ಕ್ಲಬ್ ವತಿಯಿಂದ ಇಲ್ಲಿನ ರೈತ ಸಹಕಾರ ಭವನದಲ್ಲಿ ಭಾನುವಾರ  ನಡೆದ ರೋಟರಿ ರೈತಮಿತ್ರ ಕೃಷಿಮೇಳದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಕೃಷಿ ಪ್ರಧಾನವಾದ ದೇಶದಲ್ಲಿ ಕೃಷಿಕ್ಷೇತ್ರಕ್ಕೆ ಸಿಗಬೇಕಾದ ಸೌಲಭ್ಯಗಳು ನಿರೀಕ್ಷಿತ ಪ್ರಮಾಣದಲ್ಲಿ ಸಿಗದಿರುವುದು ಯುವಜನ ಸೇವೆ ಮತ್ತು ಕ್ರೀಡಾ ಸಚಿವ ಎಂ.ಪಿ.ಅಪ್ಪಚ್ಚುರಂಜನ್ ಮಾತನಾಡಿ, ರೈತರು ಆಧುನಿಕ ತಂತ್ರಜ್ಞಾನವನ್ನು ಕೃಷಿ ಚಟುವಟಿಕೆಯಲ್ಲಿ ಅಳವಡಿಸಿಕೊಳ್ಳುವ ಮೂಲಕ ತಮ್ಮ ಆರ್ಥಿಕ ಮಟ್ಟವನ್ನು ಸುಧಾರಿಸಿಕೊಳ್ಳಬೇಕು ಎಂದರು.

ಕೃಷಿಮೇಳದಲ್ಲಿ ತೆಗೆದುಕೊಳ್ಳಲಾದ ನಾಲ್ಕು ಪ್ರಮುಖ ನಿರ್ಣಯಗಳನ್ನು ಮಂಡಿಸಿದ ರೋಟರಿ ಕ್ಲಬ್‌ನ ಸಹಾಯಕ ಗವರ್ನರ್ ಬಿ.ವಿ.ಜವರೇಗೌಡ, ಕೇಂದ್ರ ಸರ್ಕಾರವು ರೈತರ ಅನುಕೂಲಕ್ಕಾಗಿ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಬೇಕು ಎಂದರು.

ರೋಟರಿ ಕ್ಲಬ್‌ನ ಅಧ್ಯಕ್ಷ ಕ್ರೆಜ್ವಲ್ ಕೋಟ್ಸ್ ಅಧ್ಯಕ್ಷತೆ ವಹಿಸಿದ್ದರು. ಕೃಷಿಮೇಳದ ಅಧ್ಯಕ್ಷ ಎ.ಎ.ಚಂಗಪ್ಪ, ಸಂಪರ್ಕಾಧಿಕಾರಿ ಕೆ.ಎಸ್.ರಾಜಶೇಖರ್, ರೋಟರಿ ವಲಯ ಸಮನ್ವಯಾಧಿಕಾರಿ ಗೋಪಾಲಕೃಷ್ಣ, ಮೇಳದ ಕಾರ್ಯದರ್ಶಿ ಪಿ.ಆರ್.ನವೀನ್, ರೋಟರಿ ಕ್ಲಬ್‌ನ ಕಾರ್ಯದರ್ಶಿ ಅಬ್ದುಲ್ ರೆಹಮಾನ್, , ಡಾ ಎಸ್.ಪಿ.ಧರಣೇಂದ್ರ, ಎಸ್.ಕೆ.ಸತೀಶ್, ಸಿ.ಎ.ಮುದ್ದಪ್ಪ ಇತರರು ಇದ್ದರು.

ಆಧುನಿಕ ತಂತ್ರಜ್ಞಾನದ ಕೃಷಿ ಪದ್ಧತಿ ಮತ್ತು ಸಾವಯವ ಕೃಷಿ ಬಗ್ಗೆ ರೈತರಿಗೆ ಅರಿವು ಮೂಡಿಸಲು ಹಮ್ಮಿಕೊಂಡಿದ್ದ ಕೃಷಿಮೇಳದಲ್ಲಿ ಕುಶಾಲನಗರ ಸುತ್ತಮುತ್ತಲಿನ ರೈತರು ಪಾಲ್ಗೊಂಡಿದ್ದರು.
ರೈತರಿಗೆ ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಸಾವಯವ ಕೃಷಿ ಚಟುವಟಿಕೆ ಕುರಿತು ನುರಿತ ಕೃಷಿ ತಜ್ಞರು ಮಾಹಿತಿ ನೀಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.