ADVERTISEMENT

ಕೇಂದ್ರ ತಂಡಕ್ಕೆ ವರದಿ: `86 ಕೋಟಿ ಹಾನಿ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2013, 9:20 IST
Last Updated 26 ಸೆಪ್ಟೆಂಬರ್ 2013, 9:20 IST

ಮಡಿಕೇರಿ: ಕೊಡಗಿನಲ್ಲಿ ಸುರಿದ ಧಾರಾಕಾರ ಮಳೆಯಿಂದ ಜಾನುವಾರು, ವಾಸದ ಮನೆ, ಕೃಷಿ, ತೋಟಗಾರಿಕೆ, ಕಾಫಿ, ಏಲಕ್ಕಿ ಬೆಳೆ ಹಾನಿ, ರಸ್ತೆ, ಸೇತುವೆ, ವಿದ್ಯುತ್ ಮತ್ತಿತರ ಹಾನಿ ಸೇರಿದಂತೆ ಸುಮಾರು ರೂ. 86 ಕೋಟಿ ಹಾನಿಯಾಗಿದೆ ಎಂದು ಪ್ರಕೃತಿ ವಿಕೋಪ ಅಧ್ಯಯನ ಕೇಂದ್ರ ತಂಡಕ್ಕೆ ಜಿಲ್ಲಾಧಿಕಾರಿ ವರದಿ ನೀಡಿದ್ದಾರೆ.

ಪ್ರಕೃತಿ ವಿಕೋಪ ಕೇಂದ್ರ ಅಧ್ಯಯನ ತಂಡದಲ್ಲಿ ಆಗಮಿಸಿದ್ದ ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಆರ್.ಕೆ. ಶ್ರೀವಾಸ್ತವ್ ನೇತೃತ್ವದ ತಂಡದಲ್ಲಿ ಬೆಂಗಳೂರು ಪ್ರಾದೇಶಿಕ ಅಧಿಕಾರಿ (ರಸ್ತೆ ಮತ್ತು ಹೆದ್ದಾರಿ) ಸಂಜಯ್ ಗಗರ್್, ಕೇಂದ್ರ ಯೋಜನಾ ಆಯೋಗದ ಹಿರಿಯ ಸಂಶೋಧನಾಧಿಕಾರಿ ಮುರಳೀಧರನ್, ಚೆನ್ನೈನ ತಂಬಾಕು ಅಭಿವೃದ್ಧಿ ನಿಗಮದ ನಿರ್ದೇಶಕ ಡಾ.ಕೆ. ಮನೋಹರನ್  ಮಂಗಳವಾರ ನಗರದ ಮಂಗಳಾದೇವಿ ನಗರದ ವಾಸದ ಮನೆ ಹಾನಿ, ಚೆಟ್ಟಳ್ಳಿ ರಸ್ತೆಯ ಕತ್ತಲೆಕಾಡು ಬಳಿಯ ರಸ್ತೆ ಹಾಗೂ ಬರೆ ಕುಸಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿವೀಕ್ಷಣೆ ಮಾಡಿದರು.

ಜಿಲ್ಲಾಧಿಕಾರಿ ಅನುರಾಗ್ ತಿವಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಕೆ.ಬಿ. ಅಂಜನಪ್ಪ, ಉಪ ವಿಭಾಗಾಧಿಕಾರಿ ಅಭಿರಾಮ್ ಜಿ. ಶಂಕರ್, ಆಯುಕ್ತ ಎನ್.ಎಂ. ಶಶಿಕುಮಾರ್, ಕಾರ್ಯಪಾಲಕ ಎಂಜಿನಿಯರ್ ದೊಡ್ಡಸಿದ್ದಯ್ಯ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ವೆಂಕಟಾದ್ರಿ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವಿನಯಕುಮಾರ್, ನಾಯಕೋಡ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಸದಾಶಿವ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಕೃಷ್ಣಮೂರ್ತಿ, ಕಾಫಿ ಮಂಡಳಿಯ ಬಿ.ಕೆ. ನಂಜಪ್ಪ ಇದ್ದರು.

ಬಳಿಕ ನಗರದ ಸುದರ್ಶನ ಅತಿಥಿ ಗೃಹದಲ್ಲಿ ಜಿಲ್ಲಾಧಿಕಾರಿ ಅನುರಾಗ್ ತಿವಾರಿ ಅವರು, ಮಳೆ ಹಾನಿಗೆ ಸಂಬಂಧಿಸಿ ಸುಮಾರು ರೂ 86 ಕೊಟಿಯಷ್ಟು ನಷ್ಟ ಉಂಟಾಗಿದೆ ಎಂದು ವರದಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.            
                
ನಗರದ ವ್ಯಾಲಿ ವ್ಯೂ ಹೋಟೆಲ್‌ನಲ್ಲಿ ಅಧಿಕಾರಿಗಳೊಂದಿಗೆ ಮಂಗಳವಾರ ನಡೆದ ಸಭೆಯಲ್ಲಿ ಕಳೆದ ಜೂನ್, ಜುಲೈ, ಆಗಸ್ಟ್ ತಿಂಗಳಲ್ಲಿ ಜಿಲ್ಲೆಯಲ್ಲಿ ಸುರಿದ ಮಹಾಮಳೆಗೆ ಕೃಷಿ, ವಾಣಿಜ್ಯ, ಬೆಳೆ ಹಾನಿ, ರಸ್ತೆ ಮತ್ತು ಬರೆ ಕುಸಿತ, ನೆರೆ ಹಾವಳಿ ಬಗ್ಗೆ ವಿಪತ್ತು ಅಧ್ಯಯನ ಕೇಂದ್ರ ತಂಡದ ಸದಸ್ಯರು ಮಾಹಿತಿ ಪಡೆದರು. 

ಜಿಲ್ಲಾಧಿಕಾರಿ ಅನುರಾಗ್ ತಿವಾರಿ ಅವರು ಪವರ್ ಪಾಯಿಂಟ್ ಪ್ರೆಸೆಂಟೇಷನ್ ಮೂಲಕ ಜಿಲ್ಲೆಯಲ್ಲಿ ಮಳೆಯಿಂದಾದ ನಷ್ಟದ ಬಗ್ಗೆ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಧಾರಾಕಾರ ಮಳೆಗೆ 6 ಮಾನವ ಪ್ರಾಣ ಹಾನಿಗೆ ರೂ 9 ಲಕ್ಷ ಪರಿಹಾರ ವಿತರಣೆ ಮಾಡಲಾಗಿದೆ. 33 ಜಾನುವಾರು ಅಸುನೀಗಿದ್ದು ರೂ 3.32 ಲಕ್ಷ  ನಷ್ಟವಾಗಿದೆ ಎಂದು ಅಂದಾಜಿಸಲಾಗಿದ್ದು, ಪ್ರಕೃತಿ ವಿಕೋಪದಡಿ ರೂ 2.88 ಲಕ್ಷ  ಪರಿಹಾರ ವಿತರಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಕೊಡಗು ಕಾಫಿ ಬೆಳೆಗಾರರ ಸಂಘ ಹಾಗೂ ಜಿಲ್ಲಾ ಕಾಂಗ್ರೆಸ್‌ ಪಕ್ಷದ ಪ್ರಮುಖರು ಮಳೆ ಹಾನಿಗೆ ಸಂಬಂಧಿಸಿ ಸೂಕ್ತ ಪರಿಹಾರ ನೀಡುವಂತೆ ಕೋರಿ ಕೇಂದ್ರ ತಂಡದ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.