ADVERTISEMENT

ಕೊಡಗಿನವರ ಪ್ರೀತಿಗೆ ಮೂಕವಿಸ್ಮಿತನಾದೆ

ಸಾಹಿತ್ಯ ಸಮ್ಮೇಳನಾಧ್ಯಕ್ಷ ನಾ. ಡಿಸೋಜ ಮನದಾಳದ ಮಾತು

​ಪ್ರಜಾವಾಣಿ ವಾರ್ತೆ
Published 10 ಜನವರಿ 2014, 5:47 IST
Last Updated 10 ಜನವರಿ 2014, 5:47 IST
ಅಖಿಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆತಿಥ್ಯ ವಹಿಸಿಕೊಂಡಿದ್ದ ಕೊಡಗು ಜಿಲ್ಲಾ ಕಸಾಪ ಘಟಕದ ಅಧ್ಯಕ್ಷ ಟಿ.ಪಿ. ರಮೇಶ್‌ ಅವರನ್ನು ಗುರುವಾರ ಸಮಾರೋಪ ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಸಮ್ಮೇಳನಾಧ್ಯಕ್ಷ ನಾ.ಡಿಸೋಜ, ಕಸಾಪ ಅಧ್ಯಕ್ಷ ಪುಂಡಲೀಕ ಹಾಲಂಬಿ, ಸಚಿವ ಡಾ.ಎಚ್‌.ಸಿ. ಮಹದೇವಪ್ಪ, ಸಂಸದ ಎಚ್‌.ವಿಶ್ವನಾಥ್‌, ವಿಧಾನ ಪರಿಷತ್‌ ಸದಸ್ಯ ಎಂ.ಸಿ. ನಾಣಯ್ಯ, ಸಿ.ಕೆ. ರಾಮೇಗೌಡ, ಬೇಬಿ ಮ್ಯಾಥ್ಯು ಇದ್ದಾರೆ. -ಪ್ರಜಾವಾಣಿ ಚಿತ್ರ/ರಂಗಸ್ವಾಮಿ
ಅಖಿಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆತಿಥ್ಯ ವಹಿಸಿಕೊಂಡಿದ್ದ ಕೊಡಗು ಜಿಲ್ಲಾ ಕಸಾಪ ಘಟಕದ ಅಧ್ಯಕ್ಷ ಟಿ.ಪಿ. ರಮೇಶ್‌ ಅವರನ್ನು ಗುರುವಾರ ಸಮಾರೋಪ ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಸಮ್ಮೇಳನಾಧ್ಯಕ್ಷ ನಾ.ಡಿಸೋಜ, ಕಸಾಪ ಅಧ್ಯಕ್ಷ ಪುಂಡಲೀಕ ಹಾಲಂಬಿ, ಸಚಿವ ಡಾ.ಎಚ್‌.ಸಿ. ಮಹದೇವಪ್ಪ, ಸಂಸದ ಎಚ್‌.ವಿಶ್ವನಾಥ್‌, ವಿಧಾನ ಪರಿಷತ್‌ ಸದಸ್ಯ ಎಂ.ಸಿ. ನಾಣಯ್ಯ, ಸಿ.ಕೆ. ರಾಮೇಗೌಡ, ಬೇಬಿ ಮ್ಯಾಥ್ಯು ಇದ್ದಾರೆ. -ಪ್ರಜಾವಾಣಿ ಚಿತ್ರ/ರಂಗಸ್ವಾಮಿ   

ಭಾರತೀಸುತ ವೇದಿಕೆ (ಮಡಿಕೇರಿ): ‘ಕೊಡಗಿನ ಜನರು ತೋರಿದ ಪ್ರೀತಿಯಿಂದ ಮೂಕವಿಸ್ಮಿತ­ನಾಗಿದ್ದೇನೆ. ದೂರದ ಮಲೆನಾಡಿನವನಾದ ನನಗೆ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ ನೀಡಿ ಹಾಗೂ ಕಳೆದ ಮೂರು ದಿನಗಳಿಂದ ಅತಿಥಿ– ಸತ್ಕಾರ ನೀಡಿದ ಜಿಲ್ಲೆಯ ಜನರಿಗೆ ನಾನು ಆಭಾರಿಯಾಗಿದ್ದೇನೆ..’ ಎಂದು ಅಖಿಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ             ನಾ. ಡಿಸೋಜ ಹೇಳಿದರು.

ವೇದಿಕೆಯಲ್ಲಿ ಗುರುವಾರ ಸಂಜೆ ನಡೆದ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಸಮ್ಮೇಳನಾಧ್ಯಕ್ಷರ ನುಡಿಯನ್ನಾಡಿದರು.

‘ನನ್ನ ಭಾಷಣಕ್ಕೆ ಕೆಲವರು ನೀಡಿದ ವ್ಯತಿರಿಕ್ತ ಅಭಿಪ್ರಾಯಗಳಿಂದ ನನಗಾದ ಕಹಿ ಅನುಭವವನ್ನು ಸ್ಥಳೀಯರ ಸತ್ಕಾರದಿಂದ ಮರೆತಿದ್ದೇನೆ. ಮೂರು ದಿನಗಳವರೆಗೆ ನನ್ನನ್ನು ಸನ್ಮಾನಿಸಿದ್ದಿರಿ, ಕೆಲವರು ನನ್ನ ಜೊತೆ ಫೋಟೋ ತೆಗೆಸಿಕೊಂಡರು, ಇನ್ನು ಕೆಲವು ಅಭಿಮಾನಿಗಳು ನನ್ನ ಹಸ್ತಾಕ್ಷರ ಪಡೆದರು. ಇದೆಲ್ಲ ನನಗೆ ಖುಷಿ ತಂದುಕೊಟ್ಟಿತು’ ಎಂದರು.

ಇಲ್ಲಿನ ಜನರು ನನಗೆ ಪೇಟಾ ತೊಡಿಸಿ ಸನ್ಮಾನಿಸಿದ್ದಕ್ಕೆ ನಾನು ಆಭಾರಿಯಾಗಿದ್ದೇನೆ. ಕೀರ್ತಿಯಿಂದ ನನ್ನ ತಲೆ ಸಿಡಿದುಹೋಗುವುದನ್ನು ಇದನ್ನು ತಡೆಹಿಡಿಯಲಿ ಎಂದರು.

ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡಿದ್ದ  ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ಮಾತನಾಡಿ, ಕನ್ನಡ ನಾಡು, ನುಡಿ, ಗಡಿ ರಕ್ಷಣೆ ವಿಚಾರದಲ್ಲಿ ಪ್ರಾಧಿಕಾರ ಕಟಿಬದ್ಧವಾಗಿದೆ. ಕರ್ನಾಟಕ ರಾಜ್ಯ ಉದಯವಾಗಿ ಇಷ್ಟು ವರ್ಷಗಳು ಕಳೆದರೂ ಇದುವರೆಗೆ ಕನ್ನಡವು ಆಡಳಿತ ಭಾಷೆಯಾಗಿ ಸಂಪೂರ್ಣವಾಗಿ ಏಕೆ ಜಾರಿಯಾಗಿಲ್ಲ? ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷೆ ಕನ್ನಡ ಏಕೆ ಜಾರಿಯಾಗಲಿಲ್ಲ? ಉದ್ಯೋಗದಲ್ಲಿ ಕನ್ನಡಿಗರಿಗೆ ಪ್ರಾಶಸ್ತ್ಯ ನೀಡಲಾಗಲಿಲ್ಲವೆಂದು ಸರ್ಕಾರಗಳು ಚಿಂತಿಸಬೇಕಾಗಿದೆ’ ಎಂದರು.

ಮಾತೃಭಾಷೆ ಕನ್ನಡ ಮಾಧ್ಯಮದಲ್ಲಿಯೇ ಪ್ರಾಥಮಿಕ ಶಿಕ್ಷಣವನ್ನು ಏಕೆ ನೀಡಬೇಕೆಂದು ಸರ್ಕಾರವು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಬೇಕಾದ ಅಗತ್ಯತೆ ಇದೆ ಎಂದು ಹೇಳಿದರು.

ಇಂಗ್ಲಿಷ್‌ ಫೈಲ್‌ಗಳಿಗೆ ಸಹಿ ಹಾಕುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿರುವುದು ಸ್ವಾಗತಾರ್ಹ. ಆದರೆ, ಅವರಡಿ ಕೆಲಸ ಮಾಡುವ ಹಿರಿಯ ಅಧಿಕಾರಿಗಳು ಈ ಧೋರಣೆಯನ್ನು ಹೊಂದದಿದ್ದರೆ ಎಂದಿನಂತೆ ಆಡಳಿತದಲ್ಲಿ ಇಂಗ್ಲಿಷ್‌ ಮುಂದುವರಿಯುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದ ಸಾನ್ನಿಧ್ಯವನ್ನು ಪೊನ್ನಂಪೇಟೆಯ ರಾಮಕೃಷ್ಣಾನಂದಾಶ್ರಮದ ಜಗದಾತ್ಮಾನಂದಜಿ ಹಾಗೂ ಭೋದಸ್ವರೂಪಾನಂದ ಸ್ವಾಮೀಜಿ ವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ, ಸಂಸದ ಎಚ್‌. ವಿಶ್ವನಾಥ್‌, ವಿಧಾನ ಪರಿಷತ್‌ ಸದಸ್ಯ ಎಂ.ಸಿ. ನಾಣಯ್ಯ, ಮಾಜಿ ಸಚಿವರಾದ ಎಂ.ಎಂ. ನಾಣಯ್ಯ, ಸುಮಾ ವಸಂತ್‌, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಉಷಾ ದೇವಮ್ಮ, ಸಾಹಿತಿ ಡಾ.ಹಂಪ ನಾಗರಾಜಯ್ಯ,  ಇತರರು ಉಪಸ್ಥಿತರಿದ್ದರು.

ಅಧ್ಯಕ್ಷತೆಯನ್ನು ಕಸಾಪ ಅಧ್ಯಕ್ಷ ಪುಂಡಲೀಕ ಹಾಲಂಬಿ ವಹಿಸಿದ್ದರು. ಜಿಲ್ಲಾಧಿಕಾರಿ ಅನುರಾಗ್ ತಿವಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀವಿದ್ಯಾ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.