ADVERTISEMENT

ಕೊಡಗು ಅರಣ್ಯಕ್ಕೆ ಕೊಡಲಿ: ಆಕ್ರೋಶ

ಹೂಡಿಕೆದಾರರಿಗೆ 25 ಸಾವಿರ ಎಕರೆ: ರೈತರ ವಿರೋಧ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2012, 10:10 IST
Last Updated 18 ಡಿಸೆಂಬರ್ 2012, 10:10 IST

ಮೈಸೂರು: ಕೊಡಗು ಜಿಲ್ಲೆಯಲ್ಲಿ 25 ಸಾವಿರ ಎಕರೆ ಪ್ರದೇಶವನ್ನು ಜಾಗತಿಕ ಬಂಡವಾಳದಾರರಿಗೆ ನೀಡಲು ಮುಂದಾಗಿರುವ ಸರ್ಕಾರದ ಕ್ರಮವನ್ನು ರಾಜ್ಯ ರೈತ ಸಂಘ, ಹಸಿರುಸೇನೆ ಹಾಗೂ ಕಾವೇರಿ ಕುಟುಂಬ ಸಮಿತಿ ವಿರೋಧಿಸಿವೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ರೈತ ಸಂಘದ ಮುಖಂಡ ಪುಟ್ಟಣ್ಣಯ್ಯ, ಪ್ರವಾಸೋದ್ಯಮ, ಕೈಗಾರಿಕೆ ಹೆಸರಿನಲ್ಲಿ ಕೊಡಗಿನ ಸುಂದರ ಪರಿಸರ ಮತ್ತು ಅರಣ್ಯವನ್ನು ನಾಶ ಮಾಡಲು ಸರ್ಕಾರ ಹೊರಟಿದೆ ಎಂದು ಕಿಡಿಕಾರಿದರು.
ಸರ್ಕಾರವು ಡಿ. 18ರಂದು ಮಡಿಕೇರಿಯಲ್ಲಿ ರಾಜ್ಯ ವಾಣಿಜೋದ್ಯಮಿಗಳ ಸಂಘದ ಸಹಯೋಗದೊಂದಿಗೆ ಬಂಡವಾಳ ಹೂಡಿಕೆದಾರರ ಸಭೆ ನಡೆಸುತ್ತಿದೆ. ಒಂದು ವೇಳೆ ಕೊಡಗಿನಲ್ಲಿ ಕೈಗಾರಿಕೆಗಳು, ವಿದ್ಯುತ್ ಉತ್ಪಾದನಾ ಕೇಂದ್ರಗಳು, ಮಾಹಿತಿ ತಂತ್ರಜ್ಞಾನ ಉದ್ದಿಮೆಗಳು ಸ್ಥಾಪನೆಯಾದರೆ ಅರಣ್ಯಕ್ಕೆ ಕೊಡಲಿ ಪೆಟ್ಟು ಖಚಿತ. ಈ ಹಿನ್ನೆಲೆಯಲ್ಲಿ ಬಂಡವಾಳ ಹೂಡಿಕೆದಾರರ ಸಭೆಯನ್ನು

ಕೈಬಿಡಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಕಾವೇರಿ ಕುಟಂಬ ಸಮಿತಿ ಸಂಚಾಲಕ ಬಿ.ಬಿ. ಸುಬ್ಬಯ್ಯ ಮಾತನಾಡಿ, ಪರಿಸರ ಸ್ನೇಹಿ ಅಭಿವೃದ್ಧಿ ಯೋಜನೆಯಡಿಯಲ್ಲಿ ಹೊರ ರಾಜ್ಯ ಹಾಗೂ ಜಾಗತಿಕ ಬಂಡವಾಳ ಹೂಡಿಕೆದಾರರಿಗೆ ಕೊಡಗನ್ನು ಮಾರಾಟ ಮಾಡುವ ಸಂಚು ನಡೆದಿದೆ ಎಂದು ಆರೋಪಿಸಿದರು. ಕೃಷಿ ಯೋಗ್ಯ ಭೂಮಿಯನ್ನು ಕೈಗಾರಿಕೆಗಳಿಗೆ ನೀಡುತ್ತಿರುವುದು ಖಂಡನೀಯ ಎಂದರು.
ಜಗತ್ತಿನ 9 ಸೂಕ್ಷ್ಮ ಪರಿಸರ ಸ್ಥಳಗಳಲ್ಲಿ ಪಶ್ಚಿಮ ಘಟ್ಟ ಕೂಡ ಒಂದು. ಹೀಗಾಗಿ ಇಲ್ಲಿ ಪ್ರವಾಸೋದ್ಯಮ ಹಾಗೂ ಕೈಗಾರಿಕೆಗಳು ತಲೆ ಎತ್ತಿದರೆ ಕೊಡಗಿನ ಹವಾಮಾನವೇ ಬದಲಾವಣೆಯಾಗಿ, ವಿಶ್ವ ಪರಿಸರದ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕಾಫಿ ತೋಟಗಳಲ್ಲಿ ಕೆಲಸ ಮಾಡುತ್ತಿರುವ ಅಸ್ಸೋಂ ವಲಸಿಗರು, ಬಾಂಗ್ಲಾದೇಶಿಯರು ಈಗಾಗಲೇ ಸ್ಥಳೀಯರ ಉದ್ಯೋಗಾವಕಾಶವನ್ನು ಕಸಿದುಕೊಂಡಿದ್ದಾರೆ. ಮಲೆಯಾಳಿ ವಲಸಿಗರು ಇದರಲ್ಲಿ ಹಿಂದುಳಿದಿಲ್ಲ. ಇನ್ನು ಕೈಗಾರಿಕೆಗಳು ಸ್ಥಾಪನೆಯಾದರೆ ಕೊಡವರು ನೆಲೆ ಕಳೆದುಕೊಳ್ಳುವುದು ಖಚಿತ. ಹೂಡಿಕೆದಾರರ ಶೃಂಗಸಭೆ ವಿರೋಧಿಸಿ ಡಿ. 18ರಂದು ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಪ್ರವಾಸೋದ್ಯಮ, ಕೈಗಾರಿಕೆ ಬದಲಿಗೆ ವ್ಯವಸಾಯ ಪೂರಕ ಬಂಡವಾಳ ಹೂಡಿಕೆಗೆ ಅವರು ಆಗ್ರಹಿಸಿದರು.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರಧಾನ ಕಾರ್ಯದರ್ಶಿ ಬಡಗಲಾಪುರ ನಾಗೇಂದ್ರ, ಹೊಸೂರು ಕುಮಾರ್ ಹಾಜರಿದ್ದರು.
ನೋಟಿಫಿಕೇಷನ್ ಬೇಡ ಪ್ರತಿಪಕ್ಷ ಹಾಗೂ ಆಡಳಿತ ಪಕ್ಷದ ಸದಸ್ಯರು ಪ್ರಧಾನಿಯನ್ನು  ೀಟಿ ಮಾಡಿ ಕಾವೇರಿ ನೋಟಿಫಿಕೇಷ್ ಮಾಡದಂತೆ ಅವರ ಮೇಲೆ ಒತ್ತಡ ಹಾಕಬೇಕು ಎಂದು ಪುಟ್ಟಣ್ಣಯ್ಯ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.