ADVERTISEMENT

ಕೊಡಗು ಜಿ.ಪಂ. ಸಭೆಯಲ್ಲಿ ಸರಿತಾ ಆರೋಪ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2012, 9:30 IST
Last Updated 24 ಫೆಬ್ರುವರಿ 2012, 9:30 IST

ಮಡಿಕೇರಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಚಿಕ್ಕ ಮಕ್ಕಳಿಗೆ ಹಾಗೂ ಮಹಿಳೆಯರಿಗೆ ನೀಡಲಾಗುವ ಪೌಷ್ಠಿಕ ಆಹಾರವನ್ನು ಸ್ತ್ರೀ ಶಕ್ತಿ ಸಂಘದ ಸದಸ್ಯರೇ ಪೂರೈಸ ಬೇಕೆಂದು ಸುಪ್ರೀಂ ಕೋರ್ಟ್ ಆದೇಶ ನೀಡಿದ್ದರೂ, ಅದನ್ನು ಉಲ್ಲಂಘಿಸಿ ರಾಜಕೀಯ ವ್ಯಕ್ತಿಯೊಬ್ಬರ ನೇತೃತ್ವದ ಕಾರ್ಮಿಕರ ಸಂಘವೊಂದಕ್ಕೆ ಗುತ್ತಿಗೆ ನೀಡಲಾಗಿದೆ ಎಂದು ಜಿ.ಪಂ. ಸದಸ್ಯೆ ಸರಿತಾ ಪೂಣಚ್ಚ ಅವರು ಆರೋಪಿ ಸಿದರು.

ನಗರದ ಕೋಟೆ ವಿಧಾನಸಭಾಂಗಣ ದಲ್ಲಿ ಗುರುವಾರ ನಡೆದ ಜಿ.ಪಂ. ಸಾಮಾನ್ಯ ಸಭೆಯಲ್ಲಿ ಅವರು ದಾಖಲೆಗಳ ಸಮೇತ ಆರೋಪ ಮಾಡಿದರು. 

ಹಣ ದುರುಪಯೋಗ ತಡೆಯಲು ಹಾಗೂ ಸ್ತ್ರೀ ಶಕ್ತಿ ಸಂಘಗಳನ್ನು ಸಬಲಗೊಳಿಸುವುದಕ್ಕಾಗಿ ಕೇಂದ್ರ ಸರ್ಕಾರವು ಪೌಷ್ಠಿಕ ಆಹಾರ ಪೂರೈಕೆ ಮಾಡಲು ಸ್ತ್ರೀ ಶಕ್ತಿ ಸಂಘಗಳಿಗೆ ನೀಡಬೇಕು ಎಂದು ತಿಳಿಸಿತ್ತು. ಆದರೆ, ಈ ನಿಯಮ ಕೊಡಗು ಜಿಲ್ಲೆಯಲ್ಲಿ ಉಲ್ಲಂಘನೆಯಾಗಿದೆ ಎಂದರು.

ಜಿ.ಪಂ. ಸದಸ್ಯ ಎಸ್.ಎನ್. ರಾಜಾರಾವ್ ಅವರು ಅಧ್ಯಕ್ಷರಾಗಿರುವ ಕಾವೇರಿ ಕಾರ್ಮಿಕರ ಸಂಘಕ್ಕೆ ಆಹಾರ ಪೂರೈಸುವ ಟೆಂಡರ್ ನೀಡಲಾಗಿದೆ. ಪ್ರತಿ ತಿಂಗಳು ಸುಮಾರು 40 ಲಕ್ಷ ರೂಪಾಯಿಯಷ್ಟು ಹಣವನ್ನು ಸರ್ಕಾರ ನೀಡುತ್ತಿದೆ. ಇಲ್ಲಿರುವ 22 ಸದಸ್ಯರಿಗೆ ಕೇವಲ ರೂ 2,500 ಗೌರವಧನ ನೀಡಿ, ಉಳಿದ ಹಣವನ್ನು ನುಂಗಿಹಾಕಲಾಗು ತ್ತಿದೆ ಎಂದು ಅವರು ಆರೋಪಿಸಿದರು.

ಅಪೌಷ್ಠಿಕತೆಯಿಂದ ನರಳುತ್ತಿರುವ ಆರು ವರ್ಷದ ಒಳಗಿನ ಮಕ್ಕಳಿಗೆ, ಗರ್ಭೀಣಿಯರಿಗೆ, ಕಿಶೋರಿಯರಿಗೆ ಪೌಷ್ಟಿಕ ಆಹಾರವನ್ನು ಪೂರೈಸ ಬೇಕೆಂದು ಕೇಂದ್ರ ಸರ್ಕಾರ ದೇಶ ದಾದ್ಯಂತ ಯೋಜನೆಯನ್ನು ಹಮ್ಮಿ ಕೊಂಡಿದೆ.

ಅದರಂತೆ ಕೊಡಗಿನಲ್ಲೂ ಈ ಯೋಜನೆ ಜಾರಿಯಾಗಿದೆ. ಎಲ್ಲ ಕಡೆ ಸುಪ್ರೀಂ ಕೋರ್ಟ್ ಆದೇಶದಂತೆ ಸ್ತ್ರೀ ಸಂಘದ ಸದಸ್ಯರೇ ಆಹಾರ ಪೂರೈಸುವ ಕೆಲಸವನ್ನು ಮಾಡುತ್ತಿದ್ದರೆ, ಇಲ್ಲಿ ಮಾತ್ರ ರಾಜಕೀಯ ವ್ಯಕ್ತಿಯೊಬ್ಬರು ಅಧ್ಯಕ್ಷರಾಗಿರುವ ಸಂಘಕ್ಕೆ ಈ ಟೆಂಡರ್ ನೀಡಲಾಗಿದೆ ಎಂದು ಅವರು ಆರೋಪಿಸಿದರು.

2010ರಲ್ಲಿ ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಎಸ್.ಎನ್. ರಾಜಾರಾವ್ ತಮ್ಮ ಅಧ್ಯಕ್ಷಗಿರಿಯಲ್ಲಿ ಕುಶಾಲನಗರ ಬಳಿಯ ಕೊಡ್ಲೂರಿನಲ್ಲಿ ಈ ಸಂಘವನ್ನು ಸ್ಥಾಪಿಸಿಕೊಂಡಿದ್ದಾರೆ. ಇದು ಸುಪ್ರೀಂ ಕೋರ್ಟಿನ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ. ರಾಜಕೀಯ ಮುಖಂಡರೊಬ್ಬರು ಸ್ತ್ರೀ ಶಕ್ತಿ ಸಂಘದ ಅಧ್ಯಕ್ಷರು ಹೇಗಾದರು ಎನ್ನುವುದರ ಬಗ್ಗೆ ತನಿಖೆ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸಂಘ ರಚನೆಯಾಗಿ ಇಷ್ಟೊಂದು ಸಮಯವಾಗಿದ್ದರೂ ಇದುವರೆಗೆ ಒಂದು ಬಾರಿಯೂ ಆಡಿಟ್ ಆಗಿಲ್ಲ, ರೆಜಿಸ್ಟ್ರೇಶನ್ ರಿನಿವಲ್ ಆಗಿಲ್ಲ. ಒಂದು ಬಾರಿಯೂ ಸಭೆ ನಡೆದಿಲ್ಲ ಎಂದು ಆರೋಪಿಸಿದರು.

`ಇದು ಶುದ್ಧ ಸುಳ್ಳು. ಯಾವುದೇ ರೀತಿಯ ಹಣ ದುರುಪಯೋಗ ಆಗಿಲ್ಲ~ ಎಂದು ಜಿ.ಪಂ. ಸದಸ್ಯ ರಾಜಾರಾವ್ ಪ್ರತಿಕ್ರಿಯಿಸಿದರು. ಇನ್ನಷ್ಟು ವಿವರಣೆ ನೀಡಲು ಮುಂದಾದಾಗ ಇತರ ಸದಸ್ಯರು ಇದಕ್ಕೆ ಅವಕಾಶ ಕೊಡಲಿಲ್ಲ.
ಜಿ.ಪಂ. ಅಧ್ಯಕ್ಷ ರವಿ ಕುಶಾಲಪ್ಪ ಮಾತನಾಡಿ, ಪ್ರಕರಣ ಕುರಿತು ಒಂದು ತಿಂಗಳೊಳಗೆ ವರದಿ ನೀಡಬೇಕೆಂದು ಸಾಮಾಜಿಕ ಸ್ಥಾಯಿ ಸಮಿತಿಗೆ ಆದೇಶ ನೀಡಿದರು.

`ಅಧಿಕಾರಿಯನ್ನು ಹೊರಹಾಕಿ~

ಮಡಿಕೇರಿ: ಕೂಡಿಗೆ ಹಾಗೂ ಕುಶಾಲನಗರದಲ್ಲಿರುವ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯಗಳ ನಿರ್ವಹಣೆ ಅತ್ಯಂತ ಕೆಟ್ಟದ್ದಾಗಿದೆ. ಇತ್ತೀಚೆಗೆ ಉಪಾಧ್ಯಕ್ಷೆ ಎಚ್.ಎಂ. ಕಾವೇರಿ ಅವರು ಪತ್ರಕರ್ತರ ಜೊತೆ ಭೇಟಿ ನೀಡಿ ವಸತಿ ನಿಲಯವನ್ನು ವೀಕ್ಷಿಸಿದಾಗ, ವಸತಿ ನಿಲಯಗಳಲ್ಲಿ ಆಹಾರ ವೇಸ್ಟ್ ಆಗುತ್ತಿರುವುದು ಬೆಳಕಿಗೆ ಬಂದಿತು ಎಂದು ಜಿ.ಪಂ. ಸದಸ್ಯ ಬಾಂಡ್ ಗಣಪತಿ ವಿಷಯ ಪ್ರಸ್ತಾಪಿಸಿದರು.

ಇದಕ್ಕೆ ಉತ್ತರಿಸಿದ ಇಲಾಖೆಯ ಪ್ರಭಾರ ಜಿಲ್ಲಾ ಅಧಿಕಾರಿ ಪುಟ್ಟರಾಜು ಅವರು, ಪತ್ರಿಕೆಗಳಲ್ಲಿ ವರದಿ ಬಂದ ತಕ್ಷಣ ಪರಿಸ್ಥಿತಿ ಏನು ಸುಧಾರಣೆಯಾಗಲ್ಲ ಎಂದು ಉಡಾಫೆಯಿಂದ ಉತ್ತರಿಸಿದರು.

ಇದನ್ನು ಆಡಳಿತ ಹಾಗೂ ವಿರೋಧ ಪಕ್ಷದ ಎಲ್ಲ ಸದಸ್ಯರು ಒಕ್ಕೊರಲಿನಿಂದ ಪ್ರತಿಭಟಿಸಿದರು. ಅಧಿಕಾರಿಗಳು ಕರ್ತವ್ಯ ನಿರ್ಲಕ್ಷಿಸಿದಾಗ ಅದನ್ನು ಬೆಳಕಿಗೆ ತರುವುದು ಪತ್ರಿಕೆಗಳ ಕರ್ತವ್ಯ. ಇದನ್ನು ಅವು ಮಾಡಿ. ಅವುಗಳ ವಿರುದ್ಧ ಇಂತಹ ಬೇಜವಾಬ್ದಾರಿ ಹೇಳಿಕೆ ನೀಡಿದ ಅಧಿಕಾರಿಯನ್ನು ಸಭೆಯಿಂದ ಹೊರಹಾಕಿ ಎಂದು ಕಿಡಿಕಾರಿದರು.

`ಯಾರ ಧೈರ್ಯದ ಮೇಲೆ ಅಧಿಕಾರಿ ಇಷ್ಟೊಂದು ಅಸಡ್ಡೆಯಾಗಿ ಮಾತನಾಡುತ್ತಿದ್ದಾರೆ. ಪತ್ರಿಕೆಯವರು, ಜನಪ್ರತಿನಿಧಿಗಳ ಮೇಲೆ ಕಿಂಚಿತ್ತೂ ಗೌರವ ಇಲ್ಲವೇ ಇವರಿಗೆ~ ಎಂದು ಬಾಂಡ್ ಗಣಪತಿ, ಬಲ್ಲಾರಂಡ ಮಣಿ ಉತ್ತಪ್ಪ, ಉಷಾ ದೇವಮ್ಮ, ಬೊಳ್ಳಮ್ಮ ನಾಣಯ್ಯ ಬೊಪ್ಪಂಡ, ಪ್ರತ್ಯು, ವೆಂಕಟೇಶ್, ಭಾರತೀಶ್, ಶರೀನ್ ಸುಬ್ಬಯ್ಯ ಸೇರಿದಂತೆ ಬಹುತೇಕ ಎಲ್ಲ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಜಟಾಪಟಿ ವೇಳೆಯಲ್ಲಿ ಜಿ.ಪಂ. ಅಧ್ಯಕ್ಷ ರವಿಕುಶಾಲಪ್ಪ ಹಾಗೂ ಉಪಾಧ್ಯಕ್ಷೆ ಎಚ್.ಎಂ. ಕಾವೇರಿ ಅವರ ನಡುವೆಯೂ ಸಣ್ಣದಾಗಿ ಜಟಾಪಟಿ ನಡೆಯಿತು. ತಾಳ್ಮೆ ಕಳೆದುಕೊಂಡ ರವಿ ಕುಶಾಲಪ್ಪ ಅವರು `ಇವರನ್ನು ಡಿಸ್ಮಿಸ್ ಮಾಡಬೇಕೆ?~ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.ಕೊನೆಗೆ ಅಧಿಕಾರಿ ಪುಟ್ಟರಾಜು ಬೇಷರತ್ ಕ್ಷಮೆಯಾಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.