ADVERTISEMENT

ಕೊಡಗು: ಲಘು ಭೂ ಕಂಪನ ಅನುಭವ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2012, 6:15 IST
Last Updated 15 ಅಕ್ಟೋಬರ್ 2012, 6:15 IST

ನಾಪೋಕ್ಲು: ಮೂರ್ನಾಡು, ನಾಪೋಕ್ಲು ಸುತ್ತ ಮುತ್ತಲು ಭಾನುವಾರ ಮಧ್ಯಾಹ್ನ ಭೂಮಿ ಕಂಪನಗೊಂಡು ಜನರಲ್ಲಿ ಆತಂಕ ಮೂಡಿಸಿದೆ.

ಭಾನುವಾರ ಮಧ್ಯಾಹ್ನ ಸುಮಾರು 2.20ರ ವೇಳೆಯಲ್ಲಿ ಭೂಮಿ ಕ್ಷಣಕಾಲ ಕಂಪನಗೊಂಡು ಆತಂಕ ಮೂಡಿಸಿದೆ. ಮೂರ್ನಾಡು, ಹಾಕತ್ತೂರು, ತೊಂಭತ್ತುಮನೆ, ಮರಗೋಡು, ಕಬ್ಬಡಕೇರಿ, ಬೇತ್ರಿ ಹಾಗೂ ಸುತ್ತಮುತ್ತಲು ಭೂಮಿಯ ಕಂಪನ ಗೋಚರಿಸಿದೆ.

ಹಾಕತ್ತೂರು ತೊಂಭತ್ತುಮನೆಯಲ್ಲಿ ಭೂಮಿಯ ಕಂಪನಕ್ಕೆ ಪಾಂಡು ಎಂಬುವವರ ಮನೆಯಲ್ಲಿ ಜೋಡಿಸಿಟ್ಟಿದ ಪಾತ್ರೆಗಳು ಬಿದ್ದು ಚೆಲ್ಲಾಡಿದೆ. ಹಾಕತ್ತೂರು ತೊಂಭತ್ತುಮನೆಗಳಲ್ಲಿ ಭೂಮಿ ಕಂಪನ ಹೆಚ್ಚಾಗಿದ್ದು ಮೂರ್ನಾಡು ಪಟ್ಟಣದಲ್ಲಿ ಕಡಿಮೆ ಪ್ರಮಾಣದಲ್ಲಿ ಗೋಚರಿಸಿದೆ.

ಕುಶಾಲನಗರ: ಪಟ್ಟಣದ ಸುತ್ತಮುತ್ತ ಭಾನುವಾರ ಮಧ್ಯಾಹ್ನ ಭೂಕಂಪನದ ಅನುಭವವಾಗಿದೆ. ಮಧ್ಯಾಹ್ನ 2.30ರ ಸುಮಾರಿಗೆ ಎರಡು ಸೆಕೆಂಡ್‌ಗಳ ಕಾಲ ಭೂಮಿಯು ಕಂಪಿಸಿದ ಪರಿಣಾಮ ಜನತೆ ಗಾಬರಿಯಾಗಿದ್ದರು. ಪಟ್ಟಣದ ಬಿ.ಎಂ.ರಸ್ತೆ, ರಥಬೀದಿ, ಆದಿಶಂಕರಾಚಾರ್ಯ ಬಡಾವಣೆ, ಮುಳ್ಳುಸೋಗೆ, ಕೂಡ್ಲೂರು, ಗೊಂದಿಬಸವನಹಳ್ಳಿಗಳಲ್ಲಿ ಲಘು ಭೂಕಂಪನ ಸಂಭವಿಸಿದ ಬಗ್ಗೆ ತಿಳಿದುಬಂದಿದೆ. 

  ಕೆಲಕ್ಷಣ ಮನೆಯಲ್ಲಿನ ಟಿ.ವಿ., ಪೀಠೋಪಕರಣ, ಪಾತ್ರೆಗಳು ಅಲುಗಾಡಿದ ಬಗ್ಗೆ ಆದಿಶಂಕರಾಚಾರ್ಯ ಬಡಾವಣೆಯ ನಿವಾಸಿ ಕಾನೆಹಿತ್ಲು ಪ್ರಸನ್ನ, ಐ.ಬಿ.ರಸ್ತೆಯ ಪಿ.ಕೆ.ಜಗದೀಶ್, ಮುಳ್ಳುಸೋಗೆಯ ವೈ.ಸಿ.ಕುಮಾರ್ ತಿಳಿಸಿದ್ದಾರೆ.

 ಗೋಣಿಕೊಪ್ಪಲು: ಪಟ್ಟಣದಲ್ಲೂ ಭಾನುವಾರ ಮಧ್ಯಾಹ್ನ 2.50ರ ವೇಳೆಗೆ ಲಘು ಭೂಕಂಪನವಾಗಿದೆ. ಕುರ್ಚಿಗಳು ಅಲುಗಾಡಿದ ಅನುಭವವಾಗಿದೆ.  ಗೋಣಿಕೊಪ್ಪಲು ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಕೃಷ್ಣ ಚೈತನ್ಯ, ಗೃಹಿಣಿ ಟಿ.ಆರ್.ಶಕುಂತಲಾ ಭೂಮಿ ಅದುರಿದ ಅನುಭವ ವ್ಯಕ್ತಪಡಿಸಿದ್ದಾರೆ. ಆದರೆ ಹೆಚ್ಚಿನ ಅನಾಹುತ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.