ADVERTISEMENT

ಖಗೋಳ ವಿಜ್ಞಾನ ವಿಸ್ಮಯಗಳ ಖನಿ: ಪ್ರೊ. ಭಟ್

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2012, 6:14 IST
Last Updated 17 ಡಿಸೆಂಬರ್ 2012, 6:14 IST

ಮಡಿಕೇರಿ: ಖಗೋಳ ವಿಜ್ಞಾನ ಅತ್ಯಂತ ಕುತೂಹಲಕಾರಿ ವಿಷಯ. ವಿದ್ಯಾರ್ಥಿಗಳು ಇದರಲ್ಲಿ ಆಸಕ್ತಿವಹಿಸಿ ಹೊಸ ಸಂಶೋಧನೆಗಳ ಬಗ್ಗೆ ಅಧ್ಯಯನ ನಡೆಸಬೇಕೆಂದು ಉಡುಪಿ ಪೂರ್ಣಪ್ರಜ್ಞಾ ಕಾಲೇಜಿನ  ಪ್ರೊ. ಎ.ಪಿ. ಭಟ್ ಹೇಳಿದರು.

ರಾಜ್ಯ ತಂತ್ರಜ್ಞಾನ ಮತ್ತು ವಿಜ್ಞಾನ ಪರಿಷತ್ತು ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಆಶ್ರಯದಲ್ಲಿ ಶನಿವಾರ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ಖಗೋಳ ವಿಜ್ಞಾನ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ಯುವಜನ ಸಂಶೋಧನೆ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಖಗೋಳ ವಿಜ್ಞಾನದಲ್ಲಿ ಪ್ರತಿಯೊಂದು ವಿಷಯವು ವಿಸ್ಮಯಕಾರಿಯಾಗಿದ್ದು, ವಿದ್ಯಾರ್ಥಿಗಳು ಇದನ್ನು ಅನ್ವೇಷಣೆ ಅಭ್ಯಾಸ ಮಾಡಬೇಕು ಎಂದರು.

`ವಂಡರ್ಸ್‌ ಆಫ್ ಕಾಸ್ಮಿಕ್' ವಿಷಯ ಕುರಿತು ಮಾತನಾಡಿದ ಅವರು, ಸೌರ ಮಂಡಲದ ಗ್ರಹಗಳು, ಗ್ಯಾಲಕ್ಸಿ ಹಾಗೂ ಇನ್ನಿತರ ಆಕಾಶ ಕಾಯಗಳ ಬಗ್ಗೆ ಮಾಹಿತಿ ನೀಡಿದರು.

ಉಡುಪಿಯ ಮಹಾತ್ಮಾ ಗಾಂಧಿ ಮೆಮೋರಿಯಲ್ ಕಾಲೇಜಿನ ಪ್ರೊ. ವಿಜಯ ಅವರು ನಕ್ಷತ್ರಗಳ ಕುರಿತು ಉಪನ್ಯಾಸ ನೀಡಿದರು. ಸೌರ ಮಂಡಲದಲ್ಲಿ ನಕ್ಷತ್ರಗಳು ತನ್ನದೆ ಆದ ಮಹತ್ವದ ಪಾತ್ರ ಹೊಂದಿವೆ. ನಕ್ಷತ್ರಗಳ ಉಗಮ ಹಾಗೂ ಅಂತ್ಯದ ಬಗ್ಗೆ  ಹಲವು ನಿದರ್ಶನಗಳೊಂದಿಗೆ ಅವರು ತಿಳಿಸಿದರು.

ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಪ್ರೊ. ಕೆ.ಎ. ಈರಪ್ಪ ಮಾತನಾಡಿ, ಈಗಾಗಲೇ ಖಗೋಳ ವಿಜ್ಞಾನದ ಬಗ್ಗೆ ಸಾಕಷ್ಟು ಸಂಶೋಧನೆ ನಡೆದಿವೆ. ಆದರೆ ಇನ್ನೂ ಹಲವು ವಿಷಯಗಳ ಬಗ್ಗೆ ಅಧ್ಯಯನ ಮಾಡುವುದಿದೆ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕ ಡಾ. ಜಗನ್ನಾಥ್ ಹಾಗೂ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.