ADVERTISEMENT

ಘರ್ಷಣೆ: 23 ಮಂದಿ ವಿರುದ್ಧ ಮೊಕದ್ದಮೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2012, 8:12 IST
Last Updated 5 ಡಿಸೆಂಬರ್ 2012, 8:12 IST

ಸೋಮವಾರಪೇಟೆ: ಇಲ್ಲಿಯ ಪೊಲಿಸ್ ಠಾಣೆ ಎದುರು ಸೋಮವಾರ ತಡರಾತ್ರಿ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಗೆ ಸಂಬಂಧಿಸಿ ಎರಡು ಕೋಮಿನ 23 ಮಂದಿ ವಿರುದ್ಧ  ಮೊಕದ್ದಮೆ ದಾಖಲಿಸಲಾಗಿದೆ.

ಶಾಂತಿ ಭಂಗ ಮತ್ತು ದೊಂಬಿಗೆ ಪ್ರಚೋದನೆ ಹಿನ್ನೆಲೆಯಲ್ಲಿ ಡಿ.ಬಿ. ಲೋಕೇಶ್ ಎಂಬವರು ನೀಡಿದ ದೂರಿನ ಅನ್ವಯ, ಬಷೀರ್, ಮಹಮ್ಮದ್, ಅಬ್ದುಲ್ ರೆಹಮಾನ್, ಇಬ್ರಾಹಿಂ, ಹ್ಯಾರೀಸ್, ಜಕ್ರಿಯ, ಅದ್ರಾಮ್, ಇಚ್ಚು, ಅಜರುದ್ದೀನ್, ರಹಿಂ ಖಾನ್, ಕರಿಂ ಬೇಗ್, ಇಶಾಂತ್, ಸಿದ್ಧಿಕ್ ವಿರುದ್ಧ ಮೊಕದ್ದಮೆ ದಾಖಲಾಗಿದೆ.

ಮಂಗಳವಾರ ಬೆಳಿಗ್ಗೆ ಕಾಗಡಿಕಟ್ಟೆ ಸೋನು ಎಂಬವರಿಗೆ ಹಲ್ಲೆ ಮಾಡಿದ ದೂರಿನನ್ವಯ, ರಮೇಶ್, ಶುಭಾಷ್, ರುದ್ರಪ್ಪ, ಕುಮಾರ್, ಪ್ರಮೋದ್, ಗುಂಡ, ಉಮೇಶ್ ಮತ್ತು ಕಾಮತ್ ವಿರುದ್ಧ ಮೊಕದ್ದಮೆ ದಾಖಲಾಗಿದೆ.

ಹಿನ್ನೆಲೆ: ತುಮಕೂರಿನ ಅಬ್ದುಲ್ ಕುದ್ದೂಸ್ ಎಂಬ ವ್ಯಕ್ತಿ ಮದರಸ ನಿರ್ಮಾಣಕ್ಕಾಗಿ ಪಟ್ಟಣದಲ್ಲಿ ದೇಣಿಗೆ ಸಂಗ್ರಹಿಸುತ್ತಿದ್ದ. ಹಿಂದೂ ಸಂಘಟನೆಗಳ ಸದಸ್ಯರು ಸೋಮವಾರ ರಾತ್ರಿ ಆತನನ್ನು ಪೊಲಿಸ್ ಠಾಣೆಗೆ ಕರೆ ತಂದು ವಿಚಾರಣೆ ನಡೆಸುವಂತೆ ತಿಳಿಸಿದ್ದರು.
ಈ ವ್ಯಕ್ತಿಯ ಹತ್ತಿರ ಯಾವುದೇ ಗುರುತಿನ ಚೀಟಿಗಳಿಲ್ಲ. ಈತ ಬಾಂಗ್ಲಾ ದೇಶದವ ಆಗಿರಬಹುದು. ಕೂಡಲೇ ಮೊಕದ್ದಮೆ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಪೊಲಿಸ್ ಅಧಿಕಾರಿಗಳನ್ನು ಒತ್ತಾಯಿಸಿದ್ದರು.

ಈ ವೇಳೆ ಬಷೀರ್ ಎಂಬಾತ ಪೊಲೀಸ್ ಠಾಣೆಗೆ ಕೆಲವರನ್ನು ಕರೆತಂದ. ಈ ವೇಳೆ ಎರಡೂ ಕೋಮಿನವರ ಮಧ್ಯೆ ಜಗಳ ಆರಂಭ ವಾಯಿತು. ಕಲಹ ತೀವ್ರಗೊಂಡಾಗ ಪೊಲೀಸರು ಲಾಠಿ ಪ್ರಹಾರ ನಡೆಸಿದರು.

8 ಮಂದಿ ಬಂಧಿಸಿದ ಪೊಲಿಸರು ಮಂಗಳವಾರ ನ್ಯಾಯಾಲಯ ಮುಂದೆ ಹಾಜರುಪಡಿಸಿದರು. ನ್ಯಾಯಾಲಯ ಜಾಮೀನು ನೀಡಿದೆ. ಉಳಿದವರು ತಲೆಮರೆಸಿಕೊಂಡಿದ್ದಾರೆ. ಅಬ್ದುಲ್ ಕುದ್ದುಸ್ ತುಮಕೂರಿನವರು ಎಂಬುದು ತನಿಖೆಯಿಂದ ತಿಳಿದು ಬಂದಿದ್ದು, ಅವರನ್ನು ಊರಿಗೆ ಕಳುಹಿಸಲಾಗಿದೆ ಎಂದು ಡಿವೈಎಸ್‌ಪಿ ಪೌಲ್.ಎಸ್. ವರ್ಮ ಹೇಳಿದರು. ಸಿಪಿಐ ಸಿದ್ದಯ್ಯ, ಪಿಎಸ್‌ಐ ರವಿಕಿರಣ್ ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದಾರೆ. ಜಿಲ್ಲಾ ಮೀಸಲು ಪಡೆಯ ಎರಡು ತುಕಡಿಗಳು ನಗರದಲ್ಲಿ ಮೊಕ್ಕಾಂ ಹೂಡಿವೆ.

ಶಾಂತಿಸಭೆಗೆ ಆಗ್ರಹ: ಪಟ್ಟಣದಲ್ಲಿ ಸೋಮವಾರ ನಡೆದ ಅಹಿತಕರ ಘಟನೆ ಕೋಮು ಸಾಮರಸ್ಯ ಕದಡುವ ಹುನ್ನಾರವಾಗಿದ್ದು, ಮುಂದಿನ ದಿನಗಳಲ್ಲಿ ಪೊಲೀಸ್ ಇಲಾಖೆ ಇಂತಹ ಕೃತ್ಯಗಳಿಗೆ ಆಸ್ಪದ ನೀಡದಂತೆ ಕೂಡಲೇ ಶಾಂತಿ ಸಭೆ ಕರೆಯಬೇಕು ಎಂದು ಜೆಡಿಎಸ್ ಮತ್ತು ಬ್ಲಾಕ್ ಕಾಂಗ್ರೆಸ್ ಆಗ್ರಹಿಸಿವೆ.

ಜೆಡಿಎಸ್ ಜಿಲ್ಲಾಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಸಮಾಜದಲ್ಲಿ ಕೋಮು ಗಲಭೆ ಸೃಷ್ಟಿಸಿ, ಹಿಂದೂ ಮತಬ್ಯಾಂಕ್ ಸ್ಥಾಪಿಸುವ ಹುನ್ನಾರ ನಿರಂತರವಾಗಿ ಬಿಜೆಪಿಯಿಂದ ನಡೆಯುತ್ತಿದೆ ಎಂದರು. 

ಕಾಂಗ್ರೆಸ್ ಪತ್ರಿಕಾಗೋಷ್ಠಿ: ಬ್ಲಾಕ್ ಕಾಂಗ್ರೆಸ್ ಕೂಡ ಶಾಂತಿ ಸಭೆ ಕರೆಯಬೇಕೆಂದು ಒತ್ತಾಯಿಸಿದೆ.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್, ಇಂತಹ ಘಟನೆಗಳು ಸಮಾಜದಲ್ಲಿ ವಿವಿಧ ಕೋಮುಗಳ ನಡುವೆ ಕಂದಕ ಸೃಷ್ಟಿಸುತ್ತವೆ. ಯಾರೋ ಮಾಡಿದ ತಪ್ಪಿಗೆ ಅಮಾಯಕರು ಬಲಿಪಶುಗಳಾಗ ಬೇಕಿದೆ. ಕೂಡಲೇ ಶಾಂತಿ ಸಭೆ ಕರೆಯಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.