ADVERTISEMENT

‘ಚಾರಣಿಗರ ಸ್ವರ್ಗ’ ಮೇರನಕೋಟೆ ಬೆಟ್ಟ

ಡಿ.ಪಿ.ಲೋಕೇಶ್
Published 10 ಡಿಸೆಂಬರ್ 2017, 8:29 IST
Last Updated 10 ಡಿಸೆಂಬರ್ 2017, 8:29 IST
ಸೋಮವಾರಪೇಟೆ ಸಮೀಪದ ಮೇರನಕೋಟೆ ಬೆಟ್ಟದ ಮೇಲಿಂದ ಕಾಣಸಿಗುವ ನಯನ ಮನೋಹರ ದೃಶ್ಯ
ಸೋಮವಾರಪೇಟೆ ಸಮೀಪದ ಮೇರನಕೋಟೆ ಬೆಟ್ಟದ ಮೇಲಿಂದ ಕಾಣಸಿಗುವ ನಯನ ಮನೋಹರ ದೃಶ್ಯ   

ಸೋಮವಾರಪೇಟೆ: ತಾಲ್ಲೂಕಿನಲ್ಲಿ ಹಲವು ಪ್ರವಾಸಿ ತಾಣಗಳಿದ್ದು, ಕೆಲವು ಎಲೆಮರೆಯ ಕಾಯಿಯಂತೆ ಪ್ರವಾಸಿಗರನ್ನು ಕರೆಯುತ್ತಿವೆ. ಮಲ್ಲಳ್ಳಿ ಸಮೀಪದ ಮೇರನಕೋಟೆ ಬೆಟ್ಟ ಇತ್ತೀಚೆಗೆ ಹೆಚ್ಚು ಪರಿಚಿತವಾಗುತ್ತಿದ್ದು, ಪ್ರಕೃತಿ ಸೌಂದರ್ಯದ ತಾಣ ಚಾರಣಿಗರ ಪಾಲಿಗೆ ಸ್ವರ್ಗವಾಗುವುದರಲ್ಲಿ ಸಂದೇಹವಿಲ್ಲ.

ತಾಲ್ಲೂಕು ಕೇಂದ್ರ ಸೋಮವಾರಪೇಟೆ ಪಟ್ಟಣದಿಂದ 20 ಕಿ.ಮೀ ದೂರದಲ್ಲಿರುವ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಚಳ್ಳಿ ಗ್ರಾಮದಿಂದ ಕಡಿದಾದ ರಸ್ತೆಯಲ್ಲಿ ಅಂದಾಜು ಎರಡು ಕಿ.ಮೀ ಕ್ರಮಿಸಿದರೆ ಮೇರನಕೋಟೆ ಬೆಟ್ಟದ ತುದಿಯನ್ನು ತಲುಪಬಹುದು.

ಬೆಟ್ಟದ ಮೇಲಿನಿಂದ ನೀಂತು ಕಣ್ಣು ಹಾಯಿಸಿದಷ್ಟು ಬೆಟ್ಟಗಳ ಸಾಲು ಹಾಗೂ ಪ್ರಕೃತ್ತಿಯ ಹಸಿರಿನ ರಮ್ಯ ಪ್ರದೇಶ ವೀಕ್ಷಿಸಬಹುದು. ಇಲ್ಲಿ ಕಾಣಸಿಗುವ ಪ್ರಕೃತಿ ಸಿರಿ. ಕೊಡಗು, ಹಾಸನ, ದಕ್ಷಿಣ ಕನ್ನಡ ಜಿಲ್ಲೆಯನ್ನು ಅವರಿಸಿರುವ ಪಶ್ಚಿಮ ಘಟ್ಟಗಳ ಬೆಟ್ಟದ ಸಾಲುಗಳ ಹಸಿರು ತೋರಣ, ಮಲ್ಲಳ್ಳಿ ಜಲಪಾತ ಸೇರಿದಂತೆ ನದಿ ತೊರೆಗಳು ನೋಡುಗರ ಮನ ಸೆಳೆಯುವಲ್ಲಿ ಯಶಸ್ವಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.

ADVERTISEMENT

ಜನರಿಂದ ದೂರ ಉಳಿದಿರುವ ಪ್ರಕೃತ್ತಿಯ ನೆಲೆಯಾಗಿರುವ ಈ ಸ್ಥಳ ಮಾತ್ರ ಈವರೆಗೆ ಯಾವುದೇ ಸೌಲಭ್ಯಗಳನ್ನು ಕಂಡಿಲ್ಲ. ಇಲ್ಲಿಗೆ ತೆರಳಲು ರಸ್ತೆ ಸಂಪರ್ಕದ ವ್ಯವಸ್ಥೆ ಇಲ್ಲದ ಕಾರಣ ಪ್ರವಾಸಿಗರನ್ನು ತನ್ನತ್ತ ಸೆಳೆಯಲು ವಿಫಲವಾಗಿದೆ. ಇತ್ತೀಚೆಗೆ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಕಚ್ಚಾ ರಸ್ತೆಯನ್ನು ಬೆಟ್ಟಕ್ಕೆ ನಿರ್ಮಿಸಲಾಗಿದ್ದರೂ, ಎಲ್ಲಾ ವಾಹನಗಳು ಬೆಟ್ಟದ ಮೇಲೆ ತೆರಳಲು ಸಾಧ್ಯವಿಲ್ಲ. ನಾಲ್ಕುಚಕ್ರದ ವಾಹನಗಳಲ್ಲಿ ತೆರಳಿ ಪ್ರಕೃತಿ ಸೌಂದರ್ಯವನ್ನು ಸವಿಯಬಹುದಷ್ಟೆ. ಮೇರನಕೋಟೆ ಬೆಟ್ಟವೇರಿದವರು ಪುಷ್ಪಗಿರಿ,ಕೋಟೆಬೆಟ್ಟ, ಭಕ್ತಿಬೆಟ್ಟ, ಭತ್ತದ ರಾಶಿ ಬೆಟ್ಟ, ದೊಡ್ಡಬೆಟ್ಟ, ಮಲ್ಲಳ್ಳಿ ಜಲಪಾತ, ಹೇರೂರು ಬೆಟ್ಟ, ಬಿಸ್ಲೆ ಅರಣ್ಯ, ಪಟ್ಲಬೆಟ್ಟ ಸೇರಿದಂತೆ ಹಸಿರಿನಿಂದ ಕಂಗೊಳಿಸುವ ಬೆಟ್ಟದ ಸಾಲುಗಳನ್ನು ಇಲ್ಲಿಂದ ಕಾಣಬಹುದು.

ಚಾರಣಪ್ರಿಯರಿಗಂತೂ ನೆಚ್ಚಿನ ತಾಣವಾಗುವ ಎಲ್ಲ ಲಕ್ಷಣಗಳಿರುವ ಈ ಬೆಟ್ಟಕ್ಕೆ ಈಗಾಗಲೇ ಮಾಹಿತಿ ಇರುವ ಕೆಲವರು ಮಾತ್ರ ತೆರಳುತ್ತಿದ್ದಾರೆ. ಬಾಚಳ್ಳಿ ಗ್ರಾಮದಿಂದ ಮುಖ್ಯ ರಸ್ತೆಯಲ್ಲಿ 7 ಕಿ.ಮೀ ತೆರಳಿದರೆ ಮಲ್ಲಳ್ಳಿ ಜಲಪಾತ ಸಿಗುತ್ತದೆ. ಅಲ್ಲಿನ ಹೊಂಸ್ಟೇಗಳಲ್ಲಿ ವಾಸ್ತವ್ಯ ಹೂಡಿದವರು, ಗೈಡ್‌ಗಳ ಸಹಾಯದಿಂದ ಮೇರನಕೋಟೆ ಬೆಟ್ಟಕ್ಕೆ ಚಾರಣ ಕೈಗೊಳ್ಳುವ ಅವಕಾಶವಿದೆ.

ಈ ಬೆಟ್ಟಕ್ಕೆ ಧಾರ್ಮಿಕ ಇತಿಹಾಸವಿದ್ದು, ಬೀದಳ್ಳಿ, ಬಾಚಳ್ಳಿ, ಮಲ್ಲಳ್ಳಿ, ಕುಮಾರಳ್ಳಿ ಗ್ರಾಮಸ್ಥರು ಆಚರಿಸುವ ಸಬ್ಬಮ್ಮ ದೇವಿ ವಾರ್ಷಿಕ ಸುಗ್ಗಿ ಉತ್ಸವದಲ್ಲಿ ಮೊದಲು ಮೇರನಕೋಟೆ ಬೆಟ್ಟದಲ್ಲಿರುವ ವರ ಹಾಗೂ ಮಧುವಣಗಿತ್ತಿ ಕಲ್ಲುಗಳಿಗೆ ಪೂಜೆ ಸಲ್ಲಿಸಿ ನಂತರ ಸುಗ್ಗಿ ಉತ್ಸವ ಕೈಗೊಳ್ಳುವುದನ್ನು ಕಾಣಬಹುದಾಗಿದೆ.

ಮೇರನರಾಜ ವಧು ಅನ್ವೇಷಣೆಗೆ ಬೀದಳ್ಳಿ ಪಟೇಲರ ಮನೆಗೆ ಬಂದಿದ್ದ, ನಂತರ ಕಾರಣಾಂತರದಿಂದ ಮೃತಪಟ್ಟಿದ್ದ. ಮೇರನರಾಜ ವಿಶ್ರಮಿಸಿದ ಬೆಟ್ಟ ಮೇರನಕೋಟೆ ಬೆಟ್ಟವಾಯಿತು. ಈ ಕಾರಣದಿಂದ ವಾರ್ಷಿಕ ಪೂಜೆಗಳು ನಡೆಯುತ್ತವೆ ಎಂದು ಸ್ಥಳೀಯರ ಅನಿಸಿಕೆಯಾಗಿದೆ.

* * 

ಮೇರನಕೋಟೆ ಬೆಟ್ಟ ಪ್ರವಾಸಿತಾಣವಾಗಿ ಅಭಿವೃದ್ಧಿಪಡಿಸಬೇಕಾಗಿದೆ. ಪ್ರವಾಸೋದ್ಯಮ ಇಲಾಖೆಗೆ ಸೇರಿಸಲು ಜನಪ್ರತಿನಿಧಿಗಳು ಶ್ರಮವಹಿಸಬೇಕು. ಮೂಲಸೌಕರ್ಯ ಅತ್ಯಗತ್ಯ
ಎ.ಕೆ. ಚಂಗಪ್ಪ, ನಿವಾಸಿ, ಕುಮಾರಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.