ADVERTISEMENT

ಚಿನ್ನಸ್ವಾಮಿರೆಡ್ಡಿ ವರದಿಯಿಂದ ಬಲಿಜರಿಗೆ ಅನ್ಯಾಯ

​ಪ್ರಜಾವಾಣಿ ವಾರ್ತೆ
Published 9 ಜುಲೈ 2013, 8:48 IST
Last Updated 9 ಜುಲೈ 2013, 8:48 IST

ವಿರಾಜಪೇಟೆ: ವೆಂಕಟಸ್ವಾಮಿ ಆಯೋಗದ ವರದಿಯಲ್ಲಿ ಬಲಿಜ ಜನಾಂಗವನ್ನು 2ಎ ಪ್ರವರ್ಗಕ್ಕೆ ಸೇರಿಸಲಾಗಿತ್ತು. ಆದರೆ, 1992ರಲ್ಲಿ ಚಿನ್ನಸ್ವಾಮಿರೆಡ್ಡಿ ವರದಿಯಲ್ಲಿ ಬಲಿಜ ಜನಾಂಗವನ್ನು 2ಎ ನಿಂದ 3ಎಗೆ ಸೇರ್ಪಡೆಗೊಳಿಸಿ ಅನ್ಯಾಯ ಮಾಡಲಾಗಿದೆ ಎಂದು ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಂಜುಳಾನಾಯ್ಡು ತಿಳಿಸಿದರು.

ವೀರಾಜಪೇಟೆ ಮಹಿಳಾ ಸಮಾಜದಲ್ಲಿ ಭಾನುವಾರ ಜರುಗಿದ ಬಲಿಜ ಸಂಘಟನಾ ಸಭೆ ಉದ್ಘಾಟನೆ ಹಾಗೂ ಬಲಿಜ ಸಮ್ಮಿಲನ ಕಿರುಹೊತ್ತಿಗೆ ಬಿಡುಗಡೆಗೊಳಿಸಿ ಮಾತನಾಡಿದರು.

ಶಿಕ್ಷಣಕ್ಕಾಗಿ ಮಾತ್ರ ಬಲಿಜರನ್ನು 2ಎಗೆ ಸೇರ್ಪಡೆಗೊಳಿಸಲಾಗಿತ್ತು. ಇದರಿಂದ ಬಲಿಜ ಜನಾಂಗಕ್ಕೆ ಸಾಮಾಜಿಕವಾಗಿ, ರಾಜಕೀಯವಾಗಿ ಹಾಗೂ ಆರ್ಥಿಕವಾಗಿ ಮೇಲೇರಲು ಸಾಧ್ಯವಾಗಿಲ್ಲ. ರಾಜ್ಯದಲ್ಲಿ 50ಲಕ್ಷಕ್ಕೂ ಅಧಿಕ ಸಂಖ್ಯೆ ಇದ್ದರೂ ಬಳೆ ಬಣಜಿಗ, ಬಲಿಜ ಇತ್ಯಾದಿ ಹೆಸರಿನಲ್ಲಿ ಗೊಂದಲವುಂಟಾಗಿದೆ ಎಂದು ವಿವರಿಸಿದರು.

ಶ್ರೀಕೃಷ್ಣದೇವರಾಯ ಸಂಸ್ಥಾನವಿದ್ದಾಗ ಕೊಡಗು ಜಿಲ್ಲೆಗೆ ಬಲಿಜ ಜನಾಂಗದವರು ಬಂದಿದ್ದರೋ ಅಥವಾ ಅದಕ್ಕೂ ಮೊದಲೇ ಬಲಿಜರು ಕೊಡಗಿಗೆ ಬಂದಿದ್ದರೋ ಎಂಬುದರ ಕುರಿತು ಸಂಶೋಧನೆ ಅಗತ್ಯ ಎಂದು ಪ್ರತಿಪಾದಿಸಿದ ನಾಯ್ಡು, ಕ್ಷತ್ರಿಯರಾದ ಬಲಿಜ ಜನಾಂಗವು ಬಳೆ, ಅರಶಿಣ-ಕುಂಕುಮ, ಮಂಗಳ ದ್ರವ್ಯ ಮಾರುವ ಕಾಯಕ ರೂಢಿಸಿಕೊಂಡಿದೆ ಎಂದರು.

ಜಾತಿವಾರು ಸಮೀಕ್ಷೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶೀಘ್ರ ಸಮಿತಿ ರಚಿಸಲು ಸೂಚನೆ ನೀಡಿದ್ದು, ರಾಜ್ಯದ ಎಲ್ಲ 50 ಲಕ್ಷ ಜನರು ಬಲಿಜ ಎಂಬ ಹೆಸರಿನಲ್ಲಿ ನೋಂದಾವಣೆ ಮಾಡಿಕೊಳ್ಳುವ ಅಗತ್ಯವಿದೆ. ಹಾಗಿದ್ದಾಗ ಮಾತ್ರ 2ಎ ಪ್ರವರ್ಗಕ್ಕೆ ಸಿಗುವ ಎಲ್ಲ ಸವಲತ್ತು ಪಡೆಯಲು ಸಾಧ್ಯ. ಜನಾಂಗವನ್ನು 2ಎ ಪ್ರವರ್ಗಕ್ಕೆ ಸೇರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಿ ಚರ್ಚಿಸಲಾಗುವದು ಎಂದು ಹೇಳಿದರು.

ಬಲಿಜ ಸಮಾಜ ಸಂಘಟಿತರಾಗಬೇಕು. ವಿದ್ಯಾಕ್ಷೇತ್ರ, ಉದ್ಯೋಗ ಕ್ಷೇತ್ರ, ರಾಜಕೀಯ ಒಳಗೊಂಡಂತೆ ಎಲ್ಲೆಡೆ ಜಾತಿ ರಾಜಕೀಯ ಪ್ರಭಾವ ಬೀರುತ್ತಿದೆ. ವೀರಾಜಪೇಟೆಯ ಬಲಿಜ ಸಂಘಟನಾ ಸಭೆ ಅರ್ಥಪೂರ್ಣವಾಗಿದೆ ಎಂದರು.

ಬಲಿಜ ಸಮಾಜದ ಸನ್ಮಾನ ಸ್ವೀಕರಿಸಿ ಮಾತನಾಡಿದ ಚಿತ್ರ ನಿರ್ಮಾಪಕಿ, ಮೈಸೂರು ನಗರ( ಜಿಲ್ಲಾ) ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ  ಮೀನಾ ತೂಗುದೀಪ ಶ್ರೀನಿವಾಸ್ ಅವರು, ಬಲಿಜ ಸಮುದಾಯದ ಅಭಿವೃದ್ಧಿಗೆ ಸಹಾಯ ಮಾಡುವುದಾಗಿ ತಿಳಿಸಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಕೊಡಗು ಸಂಘಟನಾ ಉಸ್ತುವಾರಿ ಹೊತ್ತಿರುವ ಮಲ್ಲಾಜಮ್ಮ, ಬಿಜೆಪಿ ಪ್ರಮುಖರಾದ ಮೂಕೋಂಡ ಬೋಸ್ ದೇವಯ್ಯ, ಕೊಡಗು ಕನ್ನಡಿಗರ ಒಕ್ಕೂಟದ ಹಂಗಾಮಿ ಅಧ್ಯಕ್ಷ ಎಸ್.ಪಿ. ಮಹಾದೇವಪ್ಪ, ಕೊಡಗು ಜಿಲ್ಲಾ ಜಾತ್ಯಾತೀತ ಜನತಾದಳದ ಪ್ರಧಾನ ಕಾರ್ಯದರ್ಶಿ ಕೆ.ಆರ್.ಸುರೇಶ್, ವೀರಾಜಪೇಟೆ ತಾಲೂಕು ಪ್ರಗತಿಪರ ನಾಗರಿಕ ವೇದಿಕೆಯ ಅಧ್ಯಕ್ಷ ಮಳವಂಡ ಅರವಿಂದ ಕುಟ್ಟಪ್ಪ, ಅಖಿಲ ಭಾರತ ಬಲಿಜ ಸಂಘಟನಾಕಾರ ಅರ್‌ವಿಂದ್ ಮಂಜುನಾಥ್ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಮಾಜದ ಅಧ್ಯಕ್ಷ ಎನ್.ಕೆ. ನಾರಾಯಣ ಸ್ವಾಮಿ ನಾಯ್ಡು ಅವರು, ಕೊಡಗು ಬಲಿಜ ಜನಾಂಗದ ಕುರಿತು ಸಂಶೋಧನೆ ನಡೆಸಬೇಕಾಗಿದೆ. ಸಮುದಾಯ ಭವನ , ಯೋಗಿನಾರಾಯಣ ಯತೀಂದ್ರರ ದೇವಸ್ಥಾನ, ವೆಂಕಟರಮಣ ದೇವಸ್ಥಾನ, ಸುಸಜ್ಜಿತ ಆಟದ ಮೈದಾನ ಒಳಗೊಂಡಂತೆ ಅಭಿವೃದ್ಧಿ ಕಾರ್ಯಕ್ರಮಗಳು ನಡೆಯಬೇಕಿದೆ ಎಂದರು.

ಸಿದ್ದಾಪುರ ಪದ್ಮಾ ಎಸ್ಟೇಟ್ ಮಾಲೀಕರಾದ ವಿಜಯ ಸಂಪತ್‌ಕುಮಾರ್, ಮೀನಾ ತೂಗುದೀಪ ಶ್ರೀನಿವಾಸ್, ಗೋಣಿಕೊಪ್ಪಲಿನ ಟಿ.ಎಸ್.ನೇಮಿರಾಜ್ ಹಾಗೂ ಬೆಂಗಳೂರಿನ ಅರ್‌ವಿಂದ್ ಮಂಜುನಾಥ್ ಹಾಗೂ ಸಾಧನೆ ಮಾಡಿದ ಬಲಿಜ ಜನಾಂಗದ ಪ್ರತಿಭಾನ್ವಿತ 16 ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು. ಕಲಾವಿದರಾದ ಅನನ್ಯ ಅವರಿಂದ ಸ್ವಾಗತ ನೃತ್ಯ, ನಾಸರ್ ಅವರ ಮಿಮಿಕ್ರಿ, ಹ್ಯಾಪಿ ಶಿವು ಸಂಗೀತ ಹಾಗೂ  ಡ್ಯೂಡ್ರಾಪ್ ತಂಡದ ದ ರಾಖೇಶ್ ಹಾಗೂ ಪರಮೇಶ್ ಸಂಗಡಿಗರಿಂದ ದೇವಿ ನೃತ್ಯ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಬೆಳಿಗ್ಗೆ 9 ಗಂಟೆಯಿಂದ ಬಳೆ ಮಲಾರ ಪೂಜೆ, ಮುತ್ತೈದೆಯರಿಗೆ ಹಸಿರು-ಕೆಂಪು ಬಳೆ, ಹೂವು ವಿತರಣೆ, ವೆಂಕಟರಮಣ-ಯೋಗಿನಾರಾಯಣ ಪೂಜಾ ಕಾರ್ಯಕ್ರಮ ಇತ್ತು. ಟಿ.ಎಲ್. ಶ್ರೀನಿವಾಸ್ ಸಂಪಾದಕತ್ವದ ಬಲಿಜ ಸಮ್ಮಿಲನ ಎಂಬ ಕಿರುಹೊತ್ತಿಗೆ ವಿತರಿಸಲಾಯಿತು.  ಪ್ರಾರ್ಥನೆ ಕವಿತಾಶ್ರೀನಿವಾಸ್, ಸ್ವಾಗತ, ಸಂಘಟನಾ ಸಂಚಾಲಕರ ಮಾತು ಟಿ.ಎಲ್.ಶ್ರೀನಿವಾಸ್, ವಂದನಾರ್ಪಣೆಯನ್ನು ಸಮಾಜದ ಕಾರ್ಯದರ್ಶಿ ಗೀತಾ ನಾಯ್ಡು ನಿರ್ವಹಿಸಿದರು. ವಧು-ವರರ ಪರಿಚಯ ಹಮ್ಮಿಕೊಳ್ಳಲಾಗಿತ್ತು.

ಅತ್ತೂರು ನ್ಯಾಷನಲ್ ಅಕಾಡೆಮಿ ಶಾಲೆಯ ಶಾಂತಿ ಅಚ್ಚಪ್ಪ, ಕಾಫಿ ಮಂಡಳಿ ಸದಸ್ಯೆ ತಾರಾ ಅಯ್ಯಮ್ಮ, ಭಾಗ್ಯ ಭೀಮಯ್ಯ ಉಪಸ್ಥಿತರಿದ್ದರು.

ಬಲಿಜ ಸಂಘಟಕರಾದ ತಿತಿಮತಿ ವಿನಯ್‌ಕುಮಾರ್, ಎಸ್. ಪದ್ಮಾವತಿ, ಟಿ.ಕೆ.ಕುಮಾರಸ್ವಾಮಿ, ಯತಿರಾಜ್ ನಾಯ್ಡು, ಮಂಜುನಾಥ್, ಭರತ್, ಜನಾರ್ಧನ್ ನೇತ್ರತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.