ADVERTISEMENT

ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ನದಿ ದಡದ ನಿವಾಸಿಗಳ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2018, 9:54 IST
Last Updated 27 ಮಾರ್ಚ್ 2018, 9:54 IST

ಸಿದ್ದಾಪುರ: ಕರಡಿಗೂಡು ಗ್ರಾಮದ ಕಾವೇರಿ ನದಿ ತಟದ ನಿವಾಸಿಗಳಿಗೆ ರಸ್ತೆ ಸಂಪರ್ಕ, ಕುಡಿಯುವ ನೀರು, ಆಶ್ರಯ ಮನೆಗಳ ನಿರ್ಮಾಣಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಲು ಭಾನುವಾರ ಚಿಕ್ಕನಹಳ್ಳಿ ಪೈಸಾರಿಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯಲ್ಲಿ ಭಾಗವಹಿಸಿದ್ದ ಬಹುತೇಕರು ಮುಂಬರುವ ಚುನಾವಣೆಯನ್ನು ಬಹಿಷ್ಕರಿಸುವಂತೆ ತೀರ್ಮಾನಿಸಿರುವುದಾಗಿ ಹೇಳಿದರು.

‘ಅನೇಕ ವರ್ಷಗಳಿಂದ ನದಿ ದಡದಲ್ಲಿಯೇ ವಾಸಿಸುತ್ತಿರುವ ನಿವಾಸಿಗಳ ಮನೆಗಳು ಅಕ್ರಮ ನಿರ್ಮಾಣ ಎನ್ನಲಾಗುತ್ತಿದ್ದು, ಈ ಕಾರಣಕ್ಕೆ ಗ್ರಾ.ಪಂ.ನಿಂದ ಯಾವುದೇ ಸೌಲಭ್ಯಗಳು ಲಭಿಸುತ್ತಿಲ್ಲ’ ಎಂದು ಐರಿನ್ ದೂರಿದರು.

ADVERTISEMENT

‘ಹಲವು ವರ್ಷಗಳ ಹಿಂದೆ ಪ್ರತಿ ಮನೆಗೂ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಇಲ್ಲಿಯ ಸುಮಾರು 200 ನಿವಾಸಿಗಳಿಗೆ ಮತದಾನದ ಹಕ್ಕನ್ನೂ ನೀಡಲಾಗಿದೆ. ನೂತನ ಯೋಜನೆಗಳಿಗೆ ಮಾತ್ರ ನದಿ ಪಾತ್ರದ ಪ್ರದೇಶ ಎಂಬ ಹಣೆಪಟ್ಟಿ ಕಟ್ಟಲಾಗುತ್ತದೆ. ಇದು ಇಲ್ಲಿನ ನಿವಾಸಿಗಳಿಗೆ ಮಾರಕವಾಗಿದೆ’ ಎಂದು ಗ್ರಾಮಸ್ಥರಾದ ಮೊಹಮ್ಮದ್‌ ಆಲಿ ಆರೋಪಿಸಿದರು.

‘ನದಿ ದಡದಿಂದ ಎಲ್ಲರೂ ಜಾಗ ಖಾಲಿ ಮಾಡಿ ಎಂದು ಅಧಿಕಾರಿಗಳು ಬೆದರಿಸುತ್ತಿದ್ದಾರೆ ಹೊರತು; ಬದಲಿ ಜಾಗದ ಕುರಿತು ಯಾವುದೇ ಮಾಹಿತಿ ಇಲ್ಲ’ ಎಂದು ಬೈಜು ಆರೋಪಿಸಿದರು.

ಪರಿಶಿಷ್ಟ ಜಾತಿ ಮತ್ತು ಪಂಗಡದ ಜನಾಂಗಕ್ಕೆ ಲಭ್ಯವಾಗಬೇಕಿದ್ದ ರಸ್ತೆ ದುರಸ್ತಿ ಕಾಮಗಾರಿಗಳು ಬೆರಳೆಣಿಕೆಯ ಕಾಫಿ ಬೆಳೆಗಾರರಿಗೆ ಮಾತ್ರ ಪ್ರಯೋಜನವಾಗುತ್ತಿವೆ ಎಂದು ಅವರು ಆರೋಪಿಸಿದರು.

ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿರುವ ಗ್ರಾಮಸ್ಥರು ಮುಂಬರುವ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಎಚ್ಚರಿಸಿದ್ದಾರೆ. ಗ್ರಾಮಸ್ಥರಾದ ಕೃಷ್ಣ , ಆರೋಗ್ಯಮ್ಮ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.