ADVERTISEMENT

ಚುನಾವಣೆ ಬಹಿಷ್ಕಾರ: ಪಾಲೇಮಾಡು ಗ್ರಾಮಸ್ಥರ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2019, 12:06 IST
Last Updated 19 ಮಾರ್ಚ್ 2019, 12:06 IST

ಮಡಿಕೇರಿ: ಹೊದ್ದೂರು ಪಾಲೇಮಾಡುವಿನಲ್ಲಿ ಸ್ಮಶಾನ ಜಾಗ ಹಾಗೂ ಮೂಲಸೌಲಭ್ಯಗಳ ಸಮಸ್ಯೆಗಳನ್ನು ವಾರದೊಳಗೆ ಜಿಲ್ಲಾಡಳಿತ ಬಗೆಹರಿಸದಿದ್ದರೆ ಲೋಕಸಭೆ ಚುನಾವಣೆ ಬಹಿಷ್ಕರಿಸುವುದಾಗಿಬಹುಜನ ಕಾರ್ಮಿಕರ ಸಂಘ ಎಚ್ಚರಿಸಿದೆ.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಕೆ. ಮೊಣ್ಣಪ್ಪ ಮಾತನಾಡಿ, ಸುಮಾರು 260 ಕುಟುಂಬಗಳಿರುವ ಪಾಲೆಮಾಡುವಿನಲ್ಲಿ ಸಾವಿರಕ್ಕೂ ಅಧಿಕ ಮತದಾರರು ಇದ್ದಾರೆ. ಬಡ ಕೂಲಿ ಕಾರ್ಮಿಕರೇ ಹೆಚ್ಚಿರುವ ಗ್ರಾಮಸ್ಥರಿಗೆ ನಿವೇಶನದ ಹಕ್ಕುಪತ್ರ ವಿತರಿಸಿಲ್ಲ. ರಸ್ತೆ, ನೀರು, ವಿದ್ಯುತ್‌ ಸೌಲಭ್ಯಗಳಿಲ್ಲ ಎಂದು ದೂರಿದರು.

10, 15 ಸಾವಿರ ವರ್ಷಗಳಿಂದ ಪಾಲೆಮಾಡುವಿನಲ್ಲಿ ಮೂಲ ಸೌಕರ್ಯಕ್ಕಾಗಿ ಸ್ಥಳೀಯರು ನಿರಂತರ ಹೋರಾಟ ನಡೆಸಿದರೂ ಜಿಲ್ಲಾಡಳಿತ ಸ್ಪಂದಿಸಿಲ್ಲ. ಕೆಲವು ವರ್ಷಗಳ ಹಿಂದೆ ಜಿಲ್ಲಾಡಳಿತ ₹ 2.71 ಕೋಟಿ ಅನುದಾನವನ್ನು ಗ್ರಾಮದ ಅಭಿವೃದ್ಧಿಗೆ ಬಿಡುಗಡೆ ಮಾಡಲಾಗಿತ್ತು. ಆದರೆ, ಇದು ನಂತರದ ದಿನದಲ್ಲಿ ಲೆಕ್ಕಪತ್ರಕ್ಕೆ ಸೀಮಿತವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಗ್ರಾಮದಲ್ಲಿ ₹ 50 ಲಕ್ಷ ಬಿಡುಗಡೆಗೊಳಿಸಿ ಬೀದಿ ದೀಪಕ್ಕೆಂದು ಖರ್ಚು ಮಾಡಲಾಗಿದೆ. ಆದರೆ, ಗ್ರಾಮದ ಸಾಕಷ್ಟು ಮನೆಯಲ್ಲಿ ವಿದ್ಯುತ್‌ ಇಲ್ಲ ಎಂದು ದೂರಿದರು.

ಪರಿಶಿಷ್ಟ ಜಾತಿ ಹಾಗೂ ಪಂಗಡದ ಸ್ಮಶಾನ ಜಾಗದ ವಿವಾದದಿಂದ ಸ್ಮಶಾನ ಜಾಗ ಇನ್ನೂ ಸಿಕ್ಕಿಲ್ಲ. ಇನ್ನು ಕುಡಿಯುವ ನೀರು, ಒಳ ಚರಂಡಿ, ಶೌಚಾಲಯ ಕಾಮಗಾರಿನ್ನು ಕೈಬಿಡಲಾಗಿದೆಎಂದು ಆರೋಪಿಸಿದರು.

ಬಹುಜನ ಕಾರ್ಮಿಕ ಸಂಘದ ಮಹಿಳಾ ಕಾರ್ಯದರ್ಶಿ ಪಿ.ಎ. ಕುಸುಮಾವತಿಮಾತನಾಡಿ, ಸಾಕಷ್ಟು ಹೋರಾಟ ನಡೆಸುತ್ತಿದ್ದರೂ ನಮ್ಮೂರಿನ ಸಮಸ್ಯೆ ಕೇಳೋರಿಲ್ಲ. ಯಾವ ಕಾರಣಕ್ಕಾಗಿ ನಾವು ಮತದಾನ ಮಾಡಬೇಕು ಎಂದು ಪ್ರಶ್ನಿಸಿದಅವರು, ನಮ್ಮ ಬೇಡಿಕೆ ಈಡೇರುವವರೆಗೂ ನಾವು ಹೋರಾಡುತ್ತೇವೆಂದು ಹೇಳಿದರು.

ವಾರದೊಳಗೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ನಮಗೆ ನ್ಯಾಯ ದೊರಕಿಸಿಕೊಡಬೇಕು. ತಪ್ಪಿದ್ದಲ್ಲಿ ಪಾಲೆಮಾಡು ಸ್ಮಶಾನ ಜಾಗದಲ್ಲಿ ತೀವ್ರ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠೀಯಲ್ಲಿ ಮಾಯದೇವಿ ಮಹಿಳಾ ಸಮಿತಿಯ ಸದಸ್ಯರಾದ ಹೇಮಾವತಿ, ಭವ್ಯಾ, ಬಹುಜನ ಕಾರ್ಮಿಕ ಸಂಘದ ಸದಸ್ಯ ನಿಶಿತ್‌ ಕುಮಾರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.