ADVERTISEMENT

ಚೆಕ್‌ಪೋಸ್ಟ್‌ನಲ್ಲಿ ಪೊಲೀಸರ ಹದ್ದಿನ ಕಣ್ಣು

ರಾಜಕೀಯ ಸಮಾವೇಶಕ್ಕೆ ಅನುಮತಿ ಅಗತ್ಯ: ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2018, 12:27 IST
Last Updated 3 ಏಪ್ರಿಲ್ 2018, 12:27 IST

ಮಡಿಕೇರಿ: ವಿಧಾನಸಭೆ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಜಿಲ್ಲಾ ಚುನಾವಣೆ ಶಾಖೆಯು ಬಿರುಸಿನ ಸಿದ್ಧತೆ ಕೈಗೊಂಡಿದೆ. ಸಭೆಯ ಮೇಲೆ ಸಭೆ ನಡೆಸಲಾಗುತ್ತಿದೆ. ಜತೆಗೆ, ಅಕ್ರಮಗಳಿಗೆ ಕಡಿವಾಣ ಹಾಕಲು ಪೊಲೀಸ್‌ ಇಲಾಖೆ ಸಜ್ಜಾಗಿದೆ.ಜಿಲ್ಲೆಯಲ್ಲಿ 18 ಕಡೆ ಚೆಕ್‌ಪೋಸ್ಟ್‌ ತೆರೆಯಲಾಗಿದೆ. ಚೆಕ್‌ಪೋಸ್ಟ್‌ನಲ್ಲಿ ಬೀಡುಬಿಟ್ಟಿರುವ ಪೊಲೀಸರು ಜಿಲ್ಲೆ ಪ್ರವೇಶಿಸುವ ಹಾಗೂ ಹೊರ ಹೋಗುವ ವಾಹನಗಳ ಮೇಲೆ ತೀವ್ರ ನಿಗಾ ಇಟ್ಟಿದ್ದಾರೆ.‌

ಕೊಡಗು ಸೂಕ್ಷ್ಮ ಪ್ರದೇಶ. ಮತ್ತೊಂದೆಡೆ ನಕ್ಸಲರು ಹೆಜ್ಜೆ ಗುರುತು ಜಿಲ್ಲೆಯಲ್ಲಿ ಪತ್ತೆಯಾದ ಬಳಿಕ ಪೊಲೀಸರು ತಪಾಸಣೆ ತೀವ್ರ ಗೊಳಿಸಿದ್ದಾರೆ. ಅಲ್ಲಲ್ಲಿ ಸಣ್ಣಪುಟ್ಟ ಘಟನೆಗಳು ನಡೆಯುತ್ತಿವೆ. ವಿರಾಜಪೇಟೆ ಯಲ್ಲಿ ಅಕ್ರಮ ಮದ್ಯವನ್ನು ವಶಕ್ಕೆ ಪಡೆದಿದ್ದರೆ, ಆನೆ ಕಾಡು ಚೆಕ್‌ ಪೋಸ್ಟ್‌ನಲ್ಲಿ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ₹ 1 ಲಕ್ಷವನ್ನು ವಶಕ್ಕೆ ಪಡೆಯಲಾಗಿದೆ.ಸೂಕ್ಷ್ಮ ತಾಣಗಳಲ್ಲಿ ಸಿಸಿ ಟಿ.ವಿ ಕ್ಯಾಮೆರಾ ಅಳವಡಿಸಲು ಪೊಲೀಸ್‌ ಇಲಾಖೆ ಮುಂದಾಗಿದೆ. ಜತೆಗೆ, ಅಬಕಾರಿ ಇಲಾಖೆ ಸಹಾಯವಾಣಿ ಕೇಂದ್ರ ತೆರೆದಿದ್ದು, ಅಕ್ರಮ ಮದ್ಯ ಸಾಗಣೆ, ದಾಸ್ತಾನು ಕಂಡುಬಂದರೆ ಮಾಹಿತಿ ನೀಡುವಂತೆ ಕೋರಿದೆ.

ಗಡಿ ಪ್ರದೇಶದಲ್ಲಿ ಪರಿಶೀಲನೆ: ಜಿಲ್ಲೆಯ ಗಡಿಪ್ರದೇಶ ಹೆಬ್ಬಾಲೆ, ಕೊಡ್ಲಿಪೇಟೆ, ಕುಟ್ಟ, ಮಾಕುಟ್ಟ, ಸಂಪಾಜೆಯಲ್ಲಿ ರಾತ್ರಿ ವೇಳೆ ತಪಾಸಣೆ ತೀವ್ರಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜಿಲ್ಲೆಯಲ್ಲಿ 538 ಮತಗಟ್ಟೆಗಳಲ್ಲಿ 88 ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. 8 ಬೂತ್‌ಗಳಲ್ಲಿ ನಕ್ಸಲರ ಚಲನವಲನದ ಮಾಹಿತಿಯು ಪೊಲೀಸರಿಗೆ ದೊರೆತಿದ್ದು, ಆ ಮತಗಟ್ಟೆಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.

ADVERTISEMENT

ಏ.14 ಕೊನೆ ದಿನ: ಹದಿನೆಂಟು ವರ್ಷ ಪೂರ್ಣಗೊಂಡವರು ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ಏ.14ರ ವರೆಗೆ ಅವಕಾಶವಿದೆ ಎಂದು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ತಿಳಿಸಿದ್ದಾರೆ.ಹದಿನೆಂಟು ವರ್ಷ ಪೂರ್ಣಗೊಂಡ ವರು ಮತದಾನದಿಂದ ಯಾವುದೇ ಕಾರಣಕ್ಕೂ ವಂಚಿತರಾಗಬಾರದು ಎಂಬ ಉದ್ದೇಶದಿಂದ ಚುನಾವಣಾ ಆಯೋಗ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಯಾಗಲು ಅವಕಾಶ ಕಲ್ಪಿಸಿದೆ. ಅರ್ಹರು ಅವಕಾಶ ಬಳಸಿಕೊಳ್ಳಬಹುದು ಎಂದು ಮನವಿ ಮಾಡಿದ್ದಾರೆ.

ಇದೇ ಏ.8ರಂದು ತಹಶೀಲ್ದಾರ್‌ ಹಾಗೂ ಜಿಲ್ಲಾಧಿಕಾರಿ ಅವರ ಕಚೇರಿಯಲ್ಲಿ ಮತದಾರರ ಪಟ್ಟಿಗೆ ಸೇರ್ಪಡೆ ಕುರಿತು ವಿಶೇಷ ಅಭಿಯಾನ ನಡೆಯಲಿದೆ. ರಾಜಕೀಯ ಪಕ್ಷಗಳು ಸಭೆ ಸಮಾರಂಭ ನಡೆಸಲು ಮತ್ತು ಪ್ರಚಾರಕ್ಕೆ ವಾಹನ ಬಳಸಲು ಆಯಾ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ (ಆರ್‌ಒ) ಅವರ ಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ 24 ಗಂಟೆಯೊಳಗೆ ಅನುಮತಿ ದೊರೆಯಲಿದೆ ಎಂದು ಹೇಳಿದ್ದಾರೆ.

ಹಣ ಸಾಗಣೆಗೆ ದಾಖಲೆ ಅಗತ್ಯ

ಮಡಿಕೇರಿ: ಬಸ್, ಕಾರು ಸೇರಿದಂತೆ ಯಾವುದೇ ವಾಹನದಲ್ಲಿ ₹ 50 ಸಾವಿರಕ್ಕಿಂತ ಹೆಚ್ಚು ಹಣವನ್ನು ಕೊಂಡೊಯ್ಯಲು ದಾಖಲೆ ಸಲ್ಲಿಸಬೇಕು. ₹ 10 ಲಕ್ಷಕ್ಕೂ ಹೆಚ್ಚು ನಗದು ಸಾಗಣೆಗೆ ಆದಾಯ ತೆರಿಗೆ ಇಲಾಖೆಯ ಶಿಫಾರಸು ಪತ್ರ ಅಗತ್ಯ ಎಂದು ಜಿಲ್ಲಾಧಿಕಾರಿ ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.