ADVERTISEMENT

ಜಮ್ಮಾಸಮಸ್ಯೆ ರಾಜ್ಯಪಾಲರ ಅಂಕಿತ: ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 17 ಜನವರಿ 2012, 5:50 IST
Last Updated 17 ಜನವರಿ 2012, 5:50 IST

ನಾಪೋಕ್ಲು: ರಾಜ್ಯದ ರಾಜ್ಯಪಾಲರು ಕಾನೂನು ತಜ್ಞರಾಗಿದ್ದು, ಕೊಡಗಿನ ಜಮ್ಮಾಬಾಣೆ ಸಮಸ್ಯೆಯ ಬಗ್ಗೆ ವಿಧಾನಮಂಡಲದ ವಿಧೇಯಕಕ್ಕೆ ಸಹಿ ಮಾಡುವ ಸಂಪೂರ್ಣ ವಿಶ್ವಾಸವಿದೆ ಎಂದು ವಿಧಾನಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಹೇಳಿದರು.

 ಇಲ್ಲಿನ ಕೊಡವ ಸಮಾಜದಲ್ಲಿ ಸೋಮವಾರ ನಾಪೋಕ್ಲು ಕಾಫಿ ಬೆಳೆಗಾರರ ಒಕ್ಕೂಟ ಹಾಗೂ ಇತರ ಸಂಘಸಂಸ್ಥೆಗಳ ಸಹಯೋಗದೊಂದಿಗೆ ಜಮ್ಮಾ ಸಮಸ್ಯೆ ಪರಿಹಾರಕ್ಕೆ ಶ್ರಮಿಸಿದ ವಿಧಾನಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಹಾಗೂ ಶಾಸಕ ಅಪ್ಪಚ್ಚುರಂಜನ್ ಅವರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

 ಕೊಡಗಿನ ಜನಪ್ರತಿನಿಧಿಗಳ ಅಭಿಪ್ರಾಯ, ಸಲಹೆಯಂತೆ ಜಮ್ಮಾ ಬಾಣೆ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ವಿಧಾನ ಮಂಡಲದಲ್ಲಿ ತಿದ್ದುಪಡಿ ತಂದಿದ್ದು, ರಾಜ್ಯಪಾಲರ ಒಪ್ಪಿಗೆ ನಿರೀಕ್ಷಿಸಲಾಗಿದೆ ಇದಕ್ಕೆ ರಾಜ್ಯಪಾಲರು ಸ್ಪಂದಿಸುವ ವಿಶ್ವಾಸವಿದೆ ಎಂದರು.

ಕೊಡಗನ್ನು ಕೊಡಗನ್ನಾಗಿಯೇ ಉಳಿಸಬೇಕಾಗಿದೆ. ನಮ್ಮ ನೆಲವೇ ಇಲ್ಲದ ಮೇಲೆ ಆಚಾರ ವಿಚಾರ ಸಂಸ್ಕೃತಿ ಪದ್ದತಿ ಪರಂಪರೆ ಉಳಿಯಲು ಸಾಧ್ಯವಿಲ್ಲ. ಆದುದರಿಂದ ನಾಡಿನ ಉಳಿವಿಗಾಗಿ ಜನಜಾಗೃತಿಯ ಅಗತ್ಯವಿದ್ದು, ಕೊಡಗಿನ ಎಲ್ಲಾ ಜನಾಂಗದವರು ಜಾಗೃತರಾದರೆ ಮಾತ್ರ ಕೊಡಗಿನ ಉಳಿವು ಸಾಧ್ಯ ಎಂದರು.

ಹಿರಿಯರಾದ ಪ್ರೊ.ಬಿ.ಸಿ. ಪೊನ್ನಪ್ಪ, ಜಿಲ್ಲಾ ಬಿಜೆಪಿ ವಕ್ತಾರ ಮನುಮುತ್ತಪ್ಪ, ಜಿ.ಪಂ ಸದಸ್ಯೆ ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಕೀಪಾಡಂಡ ಮಧುಬೋಪಣ್ಣ, ಡಾ. ಸಣ್ಣುವಂಡ ಕಾವೇರಪ್ಪ ಮಾತನಾಡಿದರು. ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಮಣವಟ್ಟೀರ ಮಾಚಯ್ಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜಿ,ಪಂ ಸದಸ್ಯೆ ಬಿದ್ದಂಡ ಉಷಾ ದೇವಮ್ಮ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸದಸ್ಯ ಬೊಳ್ಳಚೆಟ್ಟೀರ ಪ್ರಕಾಶ್, ಜಿ.ಪಂ ಮಾಜಿ ಸದಸ್ಯ ಬೊವ್ವೇರಿಯಂಡ ರಘು ಅಚ್ಚಯ್ಯ, ತಾ.ಪಂ ಸದಸ್ಯೆ ಪ್ರತಿಜಾ ಅಚ್ಚಪ್ಪ, ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.