ಮಡಿಕೇರಿ: ಜಿ.ಪಂ. ಎಂಜಿನಿಯರಿಂಗ್ ವಿಭಾಗದ ಮೂಲಕ ಜಿಲ್ಲೆಯಲ್ಲಿ ಕೈಗೆತ್ತಿಕೊಂಡಿರುವ ಕುಡಿಯುವ ನೀರಿನ ಕಾಮಗಾರಿಗಳು ಹಲವೆಡೆ ಅಪೂರ್ಣಗೊಂಡಿದ್ದರೂ ‘ಮುಗಿದಿದೆ’ ಎಂದು ಪ್ರಗತಿ ವರದಿಯಲ್ಲಿ ತಪ್ಪು ಮಾಹಿತಿ ನೀಡಿದ ಕಾರ್ಯನಿರ್ವಾಹಕ ಎಂಜಿನಿಯರ್ ಅವರನ್ನು ಗುರುವಾರ ನಡೆದ ಜಿ.ಪಂ. ಸಾಮಾನ್ಯ ಸಭೆಯಲ್ಲಿ ಸದಸ್ಯರು ಪಕ್ಷ-ಭೇದ ಮರೆತು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಜಿ.ಪಂ. ಅಧ್ಯಕ್ಷ ಶಾಂತೆಯಂಡ ರವಿಕುಶಾಲಪ್ಪ ಅಧ್ಯಕ್ಷತೆಯಲ್ಲಿ ನಡೆದ ಪ್ರಥಮ ಸಾಮಾನ್ಯ ಸಭೆಯಲ್ಲಿ 2010-11ನೇ ಸಾಲಿನ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆ ಕಾಮಗಾರಿಗಳ ಪ್ರಗತಿ ವರದಿಯಲ್ಲಿ ಅನೇಕ ಕಡೆ ಕಾಮಗಾರಿಗಳು ಮುಗಿಯದಿದ್ದರೂ ‘ಮುಗಿದಿದೆ’ ಎಂದು ನಮೂದಿಸಿರುವ ಕುರಿತು ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಬಿಜೆಪಿಯ ಕೊಡಂದೇರ ಪಿ. ಗಣಪತಿ, ಕಾಂತಿ ಬೆಳ್ಯಪ್ಪ, ಭಾರತೀಶ್, ಬಲ್ಲಾರಂಡ ಮಣಿ ಉತ್ತಪ್ಪ, ಕಾಂಗ್ರೆಸ್‌ನ ಬಾನಂಡ ಎನ್. ಪ್ರಥ್ಯು, ಎಂ.ಎಸ್. ವೆಂಕಟೇಶ್ ಮಾತನಾಡಿ, ತಮ್ಮ ತಮ್ಮ ಕ್ಷೇತ್ರಗಳಲ್ಲಿ ಕುಡಿಯುವ ನೀರಿನ ಅನೇಕ ಕಾಮಗಾರಿ ಅಪೂರ್ಣಗೊಂಡಿದ್ದರೂ ಮುಗಿದಿದೆ ಎಂದು ಜಿ.ಪಂ. ಎಂಜಿನಿಯರಿಂಗ್ ವಿಭಾಗದ ಎಂಜಿನಿಯರ್‌ಗಳು ತಪ್ಪು ಮಾಹಿತಿ ನೀಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸದಸ್ಯರು ಕೆದಕಿದಂತೆಲ್ಲಾ ಅಪೂರ್ಣಗೊಂಡ ಕಾಮಗಾರಿಗಳನ್ನು ‘ಮುಗಿದಿದೆ’ ಎಂದು ನಮೂದಿಸಿ ಸಭೆಗೆ ತಪ್ಪು ಮಾಹಿತಿ ನೀಡಿದ ಜಿ.ಪಂ. ಎಂಜಿನಿಯರಿಂಗ್ ವಿಭಾಗದ ಎಂಜಿನಿಯರ್‌ಗಳ ಕಾರ್ಯವೈಖರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸದಸ್ಯರು, ಕಾರ್ಯನಿರ್ವಾಹಕ ಎಂಜಿನಿಯರ್ ಕೇಶವಮೂರ್ತಿ ವಿರುದ್ಧ ತಿರುಗಿ ಬಿದ್ದರು. ಕದನೂರು ಕ್ಷೇತ್ರದ ಸದಸ್ಯೆ ಕಾಂತಿ ಬೆಳ್ಯಪ್ಪ ಮಾತನಾಡಿ, ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಅನೇಕ ಕಡೆ ತೆರೆದ ಬಾವಿಗಳನ್ನು ತೆಗೆದ ನಂತರ ಕನಿಷ್ಠ ಅವುಗಳ ಸುತ್ತಲೂ ಸೀಮೆಂಟ್ ರಿಂಗ್ ಕೂಡ ಅಳವಡಿಸಿಲ್ಲ. ಇಂತಹ ತೆರೆದ ಬಾವಿಗಳಿಗೆ ಹಸು- ಕರುಕೂಡ ಬಿದ್ದುಸತ್ತಿವೆ ಎಂದು ಆರೋಪಿಸಿದರು.
ಬಿಟ್ಟಂಗಾಲ ಕ್ಷೇತ್ರದ ಸದಸ್ಯ ಕೊಡಂದೇರ ಪಿ. ಗಣಪತಿ ಮಾತನಾಡಿ, ಕುಡಿಯುವ ನೀರಿನ ಯೋಜನೆಗಳಿಗೆ ಹಣ ಒದಗಿಸಿದ್ದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಬದಲಿಗೆ, ಅಪೂರ್ಣ ಕಾಮಗಾರಿಗಳನ್ನು ಮುಗಿದಿದೆ ಎಂದು ಸಭೆಗೆ ತಪ್ಪು ಮಾಹಿತಿ ನೀಡಲಾಗಿದೆ. ಈ ಬಗ್ಗೆ ಉತ್ತರಿಸಬೇಕಾದ ಜಿ.ಪಂ. ಎಂಜಿನಿಯರಿಂಗ್ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗಳು ಸಭೆಗೆ ಬಂದಿಲ್ಲ ಎಂದರು.
ಸಿದ್ದಾಪುರ ಕ್ಷೇತ್ರದ ಕಾಂಗ್ರೆಸ್ ಸದಸ್ಯ ಎಂ.ಎಸ್. ವೆಂಕಟೇಶ್ ಮಾತನಾಡಿ, ಗುಹ್ಯ ಗ್ರಾಮದಲ್ಲಿ 4.65 ಲಕ್ಷ ರೂಪಾಯಿ ವೆಚ್ಚದಲ್ಲಿ ಕುಡಿಯುವ ನೀರಿನ ಕಾಮಗಾರಿಗೆ ಇನ್ನೂ ವಿದ್ಯುತ್ ಸಂಪರ್ಕ ನೀಡದಿದ್ದರೂ ‘ಮುಗಿದಿದೆ’ ಎಂದು ಪ್ರಗತಿ ವರದಿಯಲ್ಲಿ ನಮೂದಿಸಲಾಗಿದೆ ಎಂದು ಆರೋಪಿಸಿದರು. ಬಿಜೆಪಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಮಾತನಾಡಿ, ಹಣಕಾಸು ವರ್ಷ ಅಂತ್ಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕಾಮಗಾರಿ ಮುಗಿದಿದೆ ಎಂದು ತೋರಿಸಿ ಹಣ ‘ಡ್ರಾ’ ಮಾಡುವ ದುರುದ್ದೇಶ ಕೂಡ ಇದರ ಹಿಂದೆ ಅಡಗಿರಬಹುದು ಎಂಬ ಅನುಮಾನ ವ್ಯಕ್ತಪಡಿಸಿದರು. ಸುಂಟಿಕೊಪ್ಪ ಕ್ಷೇತ್ರದ ಬಿಜೆಪಿ ಸದಸ್ಯ ಭಾರತೀಶ್ ಕೂಡ ಇದೇ ಸಂಶಯ ವ್ಯಕ್ತಪಡಿಸಿ, ಒಂದು ವರ್ಷದ ಕಾಮಗಾರಿಗಳ ಮಾಹಿತಿ ಸಭೆಗೆ ಒದಗಿಸುವಂತೆ ಒತ್ತಾಯಿಸಿದರು.
ಇದೇ ರೀತಿ, ಸದಸ್ಯರು ಆರೋಪ ಮಾಡುತ್ತಾ ಹೋಗಿದ್ದರಿಂದ ಸಿಟ್ಟಿಗೆದ್ದ ಜಿ.ಪಂ. ಅಧ್ಯಕ್ಷ ಶಾಂತೆಯಂಡ ರವಿಕುಶಾಲಪ್ಪ, ಮುಗಿಯದ ಕೆಲಸಗಳನ್ನೆಲ್ಲಾ ಮುಗಿದಿದೆ ಎಂದು ಹೇಳಿ ತಪ್ಪು ಮಾಹಿತಿ ನೀಡಿದ ಜಿ.ಪಂ. ಕಾರ್ಯನಿರ್ವಾಹಕ ಎಂಜಿನಿಯರ್ ಕೇಶವಮೂರ್ತಿ ವಿರುದ್ಧ ತಿರುಗಿ ಬಿದ್ದರು. ‘ಏನು ಹುಡುಗಾಡಿಕೆಯಾಡುತ್ತಿದ್ದೀರಾ? ಈ ಹಿಂದಿನ ಐದು ವರ್ಷಗಳ ಆಟ ಈಗ ನಡೆಯೋದಿಲ್ಲ. ನಿಮಗೆ ಕೆಲಸ ಮಾಡಲು ಸಾಧ್ಯವಾಗದಿದ್ದರೆ ಹೊರ ಜಿಲ್ಲೆಗೆ ಹೋಗಿ’ ಎಂದು ಆಕ್ರೋಶದಿಂದ ತರಾಟೆಗೆ ತೆಗೆದುಕೊಂಡರು.
‘ಮೂರು ತಾಲ್ಲೂಕುಗಳ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗಳು ನೀಡಿದ ಮಾಹಿತಿಯನ್ನು ಸಭೆಗೆ ಒದಗಿಸಿದ್ದೇನೆ. ಒಂದು ವೇಳೆ ಮಾಹಿತಿ ತಪ್ಪಾಗಿದ್ದರೆ ಅದಕ್ಕಾಗಿ ಸದಸ್ಯರ ಕ್ಷಮೆಯಾಚಿಸುತ್ತೇನೆ. 2 ದಿನಗಳಲ್ಲಿ ಈ ಸಂಬಂಧ ಅಧ್ಯಕ್ಷರಿಗೆ ಸ್ಪಷ್ಟ ಮಾಹಿತಿ ಒದಗಿಸುತ್ತೇನೆ’ ಎಂದು ಕೇಶವಮೂರ್ತಿ ಹೇಳಿದರು.‘ಇಂತಹ ಸಭೆಗಳನ್ನು ನಡೆಸುವುದರಲ್ಲಿ ಅರ್ಥವೇನಿದೆ? ಅದಕ್ಕೆ ನೀವು ಉತ್ತರ ಕೊಡಿ’ ಎಂದು ಅಧ್ಯಕ್ಷರು ಸಿಇಓ ಅವರನ್ನು ಪ್ರಶ್ನಿಸಿದರು. ಕೊಡಂದೇರ ಗಣಪತಿ ಮಾತನಾಡಿ, ಕುಡಿಯುವ ನೀರಿನ ಕಾಮಗಾರಿಗಳ ಪ್ರಗತಿ ಪರಿಶೀಲನೆಗೆ ಸಮಿತಿ ರಚಿಸಿ ತನಿಖೆ ಮಾಡುವಂತೆ ಆಗ್ರಹಿಸಿದರು.
ಕಾಂಗ್ರೆಸ್ ಸದಸ್ಯೆ ಸರಿತಾ ಪೂಣಚ್ಚ ಮಾತನಾಡಿ, ಕುಡಿಯುವ ನೀರಿನ ಕಾಮಗಾರಿ ಗಳಿಗೆ ಸಂಬಂಧಿಸಿದಂತೆ ಒಂದು ವರ್ಷದ ಕ್ರಿಯಾ ಯೋಜನೆಯನ್ನು ಪರಿಶೀಲನೆ ನಡೆಸಲು ಅವಕಾಶ ನೀಡುವಂತೆ ಆಗ್ರಹಿಸಿದರು. ಬೇಸಿಗೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಇನ್ನೂ ವಿಳಂಬ ಮಾಡುವುದು ಬೇಡ ಎಂದು ಎಂ.ಎಸ್. ವೆಂಕಟೇಶ್ ಮನವಿ ಮಾಡಿದರು. ತುರ್ತು ಕಾಮಗಾರಿ ಸೇರಿಸಲು ನಿರ್ಧಾರ: ಈ ಮಧ್ಯೆ, ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸಲು ಅವಶ್ಯವಿರುವ ಹಾಗೂ ತುರ್ತು ಕಾಮಗಾರಿಗಳನ್ನು ಶಾಸಕರ ನೇತೃತ್ವದ ಕಾರ್ಯಪಡೆ ಮುಂದಿಟ್ಟು ನಂತರ ನೆರವು ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಸರ್ಕಾರ 100 ಕೋಟಿ ರೂಪಾಯಿ ಮೀಸಲಿಟ್ಟಿದೆ. ಕೆ.ಜಿ. ಬೋಪಯ್ಯ ಹಾಗೂ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರ ಮೂಲಕ ಜಿಲ್ಲೆಗೆ ಹಣ ತರಲು ಪ್ರಯತ್ನಿಸೋಣ ಎಂದು ಜಿ.ಪಂ. ಅಧ್ಯಕ್ಷರು ಹೇಳಿದರು. ಪತ್ರಕರ್ತರ ಬಹಿಷ್ಕಾರ: ಈ ಮಧ್ಯೆ, ಸಭೆ ಅರ್ಧ ಮುಗಿಯುತ್ತಾ ಬಂದರೂ ಕಾರ್ಯಸೂಚಿ ನೀಡದ ಜಿ.ಪಂ. ಅಧಿಕಾರಿಗಳ ಕ್ರಮ ಖಂಡಿಸಿ ಪತ್ರಕರ್ತರು ಸಭೆ ಬಹಿಷ್ಕರಿಸಿ ಹೊರ ನಡೆದರು. ಜಿ.ಪಂ. ಉಪಾಧ್ಯಕ್ಷೆ ಎಚ್.ಎಂ. ಕಾವೇರಿ ಹಾಗೂ ಸಿಇಓ ಎನ್. ಕೃಷ್ಣಪ್ಪ, ಬಹುತೇಕ ಎಲ್ಲ ಜಿ.ಪಂ. ಸದಸ್ಯರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.