ADVERTISEMENT

ಜಿಲ್ಲಾ ಬಿಜೆಪಿಯಲ್ಲಿ ನಿಲ್ಲದ ತಳಮಳ

ಬೆಂಬಲಿಗರ ಸಭೆಯ ಮೂಲಕ ಹಾಲಿ ಶಾಸಕರ ಶಕ್ತಿ ಪ್ರದರ್ಶನ; ಹೊಸಮುಖಕ್ಕೆ ಅವಕಾಶ ?

ಅದಿತ್ಯ ಕೆ.ಎ.
Published 27 ಮಾರ್ಚ್ 2018, 9:58 IST
Last Updated 27 ಮಾರ್ಚ್ 2018, 9:58 IST
ಕೆ.ಜಿ. ಬೋಪಯ್ಯ, ಎಂ.ಪಿ. ಅಪ್ಪಚ್ಚು ರಂಜನ್‌
ಕೆ.ಜಿ. ಬೋಪಯ್ಯ, ಎಂ.ಪಿ. ಅಪ್ಪಚ್ಚು ರಂಜನ್‌   

ಮಡಿಕೇರಿ: ಕೊಡಗು ಜಿಲ್ಲಾ ಬಿಜೆಪಿಯಲ್ಲಿದ್ದ ತಳಮಳ ಈಗ ಮತ್ತಷ್ಟು ಹೆಚ್ಚಾಗಿದೆ. ಈ ಬಾರಿಯ ವಿಧಾನಸಭೆ ಚುನಾವಣೆಗೆ ಹಾಲಿ ಶಾಸಕರಿಗೆ ಬಿಜೆಪಿಯಿಂದ ಟಿಕೆಟ್‌ ಸಿಗುವುದಿಲ್ಲ ಎಂಬ ಊಹಾಪೋಹಗಳು ಹರಿದಾಡುತ್ತಿವೆ.

ಇದರಿಂದ ಶಾಸಕರಾದ ಕೆ.ಜಿ. ಬೋಪಯ್ಯ ಹಾಗೂ ಎಂ.ಪಿ. ಅಪ್ಪಚ್ಚು ರಂಜನ್‌ ಬೆಂಬಲಿಗರು ಅಲ್ಲಲ್ಲಿ ಗೋಪ್ಯ ಸಭೆಗಳನ್ನು ನಡೆಸುವ ಮೂಲಕ ತಮ್ಮ ಪ್ರಾಬಲ್ಯವನ್ನು ಹೈಕಮಾಂಡ್‌ಗೆ ತಲುಪಿಸುವ ಪ್ರಯತ್ನಕ್ಕೆ ಕೈಹಾಕಿದ್ದಾರೆ.

ಮತ್ತೊಂದೆಡೆ ಹಾಲಿ ಶಾಸಕರಿಗೇ ಟಿಕೆಟ್‌ ನೀಡಿದರೂ ಪಕ್ಷದಲ್ಲಿ ಬಂಡಾಯ ಸ್ಫೋಟಗೊಳ್ಳುವ ಬೆಳವಣಿಗೆಗಳೂ ಗೋಚರಿಸುತ್ತಿವೆ.

ADVERTISEMENT

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ಆಪ್ತ, ಕೇಂದ್ರದ ಬಂದರು ಖಾತೆ ರಾಜ್ಯ ಸಚಿವ ಮನ್ಸುಖ್ ಎಲ್. ಮಾಂಡವಿಯಾ ಅವರು ಮಾರ್ಚ್‌ 16ರಂದು ಬಿಜೆಪಿ ಕಾರ್ಯಾಗಾರಕ್ಕೆ ಆಗಮಿಸಿದ್ದರು. ಅವರೊಂದಿಗೆ ಬಂದಿದ್ದ ತಂಡದ ಇಬ್ಬರು ಸದಸ್ಯರೂ, ಪಕ್ಷದ ಬೆಳವಣಿಗೆಯ ಮಾಹಿತಿ ಕ್ರೋಡೀಕರಿಸಿ ಅಮಿತ್‌ ಶಾ ಅವರಿಗೆ ನೀಡಿದ್ದಾರೆ ಎನ್ನಲಾಗಿದೆ.

ಹೊಸಮುಖಕ್ಕೆ ಅವಕಾಶ ಕೊಡಬೇಕೆಂಬ ಆಗ್ರಹಗಳ ನಡುವೆ ಬಿಜೆಪಿಯಲ್ಲಿ ಕುತೂಹಲಕಾರಿ ವಿದ್ಯಮಾನಗಳು ನಡೆಯುತ್ತಿವೆ. ಎರಡು ಬಾರಿ ವಿರಾಜಪೇಟೆ ಕ್ಷೇತ್ರದಿಂದ ಗೆದ್ದಿದ್ದ ಅರೆಭಾಷೆ ಗೌಡ ಸಮುದಾಯದ ಕೆ.ಜಿ. ಬೋಪಯ್ಯ ಅವರಿಗೆ ಸ್ವಕ್ಷೇತ್ರದಲ್ಲಿ ಮೊದಲ ಬಾರಿಗೆ ಬಂಡಾಯದ ಬಿಸಿತಟ್ಟಿದೆ. ಆದರೆ, ಬಿ.ಎಸ್‌. ಯಡಿಯೂರಪ್ಪ ಆಪ್ತ ಬಣದಲ್ಲಿ ಬೋಪಯ್ಯ ಗುರುತಿಸಿಕೊಂಡಿರುವುದು ಟಿಕೆಟ್‌ ಹಾದಿಯನ್ನು ಸುಗಮಗೊಳಿಸಲಿದೆ ಎಂಬ ಲೆಕ್ಕಾಚಾರಗಳು ನಡೆಯುತ್ತಿವೆ.

ಬೆಟ್ಟಗೇರಿಯ ವಿಎಸ್‌ಎಸ್ಎನ್ ಸಭಾಂಗಣದಲ್ಲಿ ಈಚೆಗೆ ವಿರಾಜಪೇಟೆ ತಾಲ್ಲೂಕು ಘಟಕದ ಅಧ್ಯಕ್ಷ ತಳೂರು ಕಿಶೋರ್‌ಕುಮಾರ್‌ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ, ಕೆ.ಜಿ. ಬೋಪಯ್ಯಗೆ ಬೆಂಬಲ ಘೋಷಿಸಲಾಗಿದೆ. ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 18 ಗ್ರಾಮ ಪಂಚಾಯಿತಿ ಸಮಿತಿ ಸದಸ್ಯರು, ಪಕ್ಷದ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಸದಸ್ಯರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.

ಕೊಡವ ಸಮುದಾಯ ಅಥವಾ ವಿರಾಜಪೇಟೆ ತಾಲ್ಲೂಕಿನ ಅಭ್ಯರ್ಥಿಗೇ ಬಿಜೆಪಿ ಟಿಕೆಟ್‌ ನೀಡಬೇಕೆಂಬ ಆಗ್ರಹಕ್ಕೆ ಸಭೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. 2008ರ ಕ್ಷೇತ್ರ ಪುನರ್‌ವಿಂಗಡನೆಯ ನಂತರವೂ ಬಿಜೆಪಿ ಕ್ಷೇತ್ರದಲ್ಲಿ ಪ್ರಾಬಲ್ಯ ಉಳಿಸಿಕೊಂಡಿದೆ. ಕ್ಷೇತ್ರದ ಮತದಾರರು ಜಾತಿವಾರು ಲೆಕ್ಕಾಚಾರ, ಪ್ರಾತಿನಿಧ್ಯದ ಬಗ್ಗೆ ಇಂದಿಗೂ ತಲೆಕೆಡೆಸಿಕೊಂಡಿಲ್ಲ. ಕೆಲವು ವಿರೋಧಿಶಕ್ತಿಗಳು ಸುಳ್ಳು ಸುದ್ದಿ ಹಬ್ಬಿಸುತ್ತಿವೆ. 65 ವರ್ಷದಿಂದ ತಾಲ್ಲೂಕಿನ ಅಭ್ಯರ್ಥಿಗೆ ಪ್ರಾತಿನಿಧ್ಯ ಸಿಕ್ಕಿಲ್ಲ ಎಂಬುದೂ ಸುಳ್ಳು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ.

ಹಿಂದೆಂದೂ ಕಾಣದ ರೀತಿಯಲ್ಲಿ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ನಡೆದಿವೆ. ಕ್ಷೇತ್ರದ ಜನರಿಗೆ ತಪ್ಪು ಸಂದೇಶ ನೀಡುತ್ತಿರುವ ಮುಖಂಡರನ್ನು ಸಂಘಟನೆಯಿಂದ ದೂರವಿಡಬೇಕು ಎಂಬ ನಿರ್ಣಯವನ್ನೂ ಸಭೆ ತೆಗೆದುಕೊಂಡಿದೆ.

ವಿರಾಜಪೇಟೆ ಮಂದಿಗೆ ಆದ್ಯತೆ: 2008ಕ್ಕೂ ಮೊದಲು ವಿರಾಜಪೇಟೆ ಮೀಸಲು ಕ್ಷೇತ್ರವಾಗಿತ್ತು. ಹೀಗಾಗಿ, ಮಡಿಕೇರಿ ಸಾಮಾನ್ಯ ಕ್ಷೇತ್ರದಿಂದ 1978ರಲ್ಲಿ ಅಜ್ಜಿಕುಟ್ಟಿರ ಸುಬ್ಬಯ್ಯ ಅವರಿಗೆ ಟಿಕೆಟ್‌ ನೀಡಲಾಗಿತ್ತು. 1983ರಲ್ಲಿ ಡಾ.ಮುಕ್ಕಾಟೀರ ಎಂ. ಚಂಗಪ್ಪ ಅವರಿಗೆ ಟಿಕೆಟ್‌ ಕೊಡಲಾಗಿತ್ತು. ಇಬ್ಬರೂ ವಿರಾಜಪೇಟೆ ಮೂಲದವರಲ್ಲವೇ ಎಂದು ಶಾಸಕರ ಆಪ್ತರೊಬ್ಬರು ಪ್ರಶ್ನಿಸುತ್ತಾರೆ.

ಅಪ್ಪಚ್ಚು ಆಪ್ತರ ಸಭೆ: ಇನ್ನು ಎಂ.ಪಿ. ಅಪ್ಪಚ್ಚು ರಂಜನ್‌ ಆಪ್ತರೂ ಅಲ್ಲಲ್ಲಿ ಗೋಪ್ಯ ಸಭೆ ನಡೆಸುತ್ತಿದ್ದಾರೆ. ರಂಜನ್‌ಗೆ ಟಿಕೆಟ್‌ ನೀಡಬಾರದೆಂದು ಸಂಘ ಪರಿವಾರದ ಮುಖಂಡರು ಹೈಕಮಾಂಡ್‌ಗೆ ತಿಳಿಸಿದ್ದಾರೆ ಎನ್ನಲಾಗಿದೆ. ಒಂದುವೇಳೆ ಟಿಕೆಟ್‌ ಸಿಗದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ರಂಜನ್‌ ಕಣಕ್ಕೆ ಇಳಿಯುವ ಸಾಧ್ಯತೆಯಿದೆ. ಆರ್‌ಎಸ್‌ಎಸ್‌ ಬೆಂಬಲದಿಂದಾಗಿ ಜಿಲ್ಲಾ ಅಧ್ಯಕ್ಷ ಹುದ್ದೆ ಗಿಟ್ಟಿಸಿಕೊಂಡಿದ್ದವರು ಬಿ.ಬಿ. ಭಾರತೀಶ್‌. ಅವರೂ ಸೋಮವಾರಪೇಟೆ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿ. ಅವರಿಗೆ ಸಂಘ ಪರಿವಾರದ ಮುಖಂಡರ ಕೃಪೆಯೂ ಇದೆ ಎಂಬ ವಿಶ್ಲೇಷಣೆಗಳು ಕ್ಷೇತ್ರದಲ್ಲಿ ನಡೆಯುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.