ADVERTISEMENT

ಜಿಲ್ಲೆಯಲ್ಲಿ 7 ಹೊಸ ನಾಡಕಚೇರಿ ಶೀಘ್ರ ಸ್ಥಾಪನೆ

ಪ್ರಜಾವಾಣಿ ವಿಶೇಷ
Published 18 ಜುಲೈ 2012, 4:15 IST
Last Updated 18 ಜುಲೈ 2012, 4:15 IST

ಮಡಿಕೇರಿ: ರಾಜ್ಯದ 96 ಹೋಬಳಿಗಳಲ್ಲಿ ಹೊಸದಾಗಿ ಕಂದಾಯ ಇಲಾಖೆಯ ನಾಡಕಚೇರಿಗಳನ್ನು ಆರಂಭಿಸಲು ಇತ್ತೀಚೆಗೆ ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿದ್ದು, ಇದರಲ್ಲಿ ಏಳು ಹೋಬಳಿಗಳು ಕೊಡಗು ಜಿಲ್ಲೆಗೆ ಸೇರಿದ್ದಾಗಿವೆ.

ಜಿಲ್ಲೆಯಲ್ಲಿ ಈಗಾಗಲೇ ಆರು ಹೋಬಳಿಗಳಲ್ಲಿ ನಾಡಕಚೇರಿಗಳು ಕಾರ್ಯ ನಿರ್ವಹಿಸುತ್ತಿದ್ದು, ಈ ಏಳು ಹೊಸ ನಾಡಕಚೇರಿಗಳು ಆರಂಭವಾಗುವುದರೊಂದಿಗೆ ಜಿಲ್ಲೆಯ ಎಲ್ಲ ಹೋಬಳಿ ಘಟಕಗಳಲ್ಲಿ (ತಾಲ್ಲೂಕು ಕೇಂದ್ರಗಳನ್ನು ಹೊರತುಪಡಿಸಿ) ನಾಡಕಚೇರಿಗಳು ತೆರೆದಂತಾಗಲಿದೆ.

ಮಡಿಕೇರಿ ತಾಲ್ಲೂಕಿನ ಸಂಪಾಜೆ, ಸೋಮವಾರಪೇಟೆ ತಾಲ್ಲೂಕಿನ ಸುಂಟಿಕೊಪ್ಪ, ಕೊಡ್ಲಿಪೇಟೆ ಹಾಗೂ ಶಾಂತಳ್ಳಿ, ವಿರಾಜಪೇಟೆ ತಾಲ್ಲೂಕಿನ ಹುದಿಕೇರಿ, ಬಾಳೆಲೆ ಹಾಗೂ ಅಮ್ಮತ್ತಿಯಲ್ಲಿ ಹೊಸ ನಾಡಕಚೇರಿಗಳು ಆರಂಭಗೊಳ್ಳಲಿವೆ.

ಪ್ರಸ್ತುತ ಜಿಲ್ಲೆಯ ಆರು ಹೋಬಳಿಗಳಲ್ಲಿ ನಾಡಕಚೇರಿಗಳಿವೆ. ನಾಪೋಕ್ಲು, ಭಾಗಮಂಡಲ, ಶ್ರೀಮಂಗಲ, ಕುಶಾಲನಗರ, ಶನಿವಾರಸಂತೆ ಹಾಗೂ ಪೊನ್ನಂಪೇಟೆಯಲ್ಲಿ ಕಾರ್ಯನಿರ್ವಹಿಸುತ್ತಿವೆ.

ಕಂದಾಯ ಇಲಾಖೆ ನೀಡುವ ಆದಾಯ ಪ್ರಮಾಣ ಪತ್ರ, ವಾಸ ದೃಢೀಕರಣ ಪತ್ರ, ಜಾತಿ ಪ್ರಮಾಣ ಪತ್ರ, ಆರ್‌ಟಿಸಿ ಸೇರಿದಂತೆ ಇತರೆ ಸುಮಾರು 44 ವಿವಿಧ ಸೇವೆಗಳನ್ನು ನಾಡಕಚೇರಿಯಲ್ಲಿ ನೀಡಲಾಗುತ್ತದೆ.

ಜಿಲ್ಲೆಯಲ್ಲಿ ಒಟ್ಟು 16 ಹೋಬಳಿಗಳಿದ್ದು, ಇವುಗಳಲ್ಲಿ ಮೂರು ತಾಲ್ಲೂಕು ಕೇಂದ್ರಗಳ ಹೋಬಳಿಗಳನ್ನು ಹೊರತುಪಡಿಸಿದರೆ, ಇನ್ನುಳಿಯುವ 13 ಹೋಬಳಿಗಳಲ್ಲಿಯೂ ನಾಡಕಚೇರಿ ತೆರೆದಂತಾಗುವುದು.

ಅಧಿಕಾರ ವಿಕೇಂದ್ರೀಕರಣವಾಗಬೇಕು ಹಾಗೂ ಹಳ್ಳಿಗಾಡಿನ ಜನರಿಗೆ ತಾವಿರುವ ಸ್ಥಳದ ಆಸುಪಾಸಿನಲ್ಲಿಯೇ ಸರ್ಕಾರ ನೀಡುವ ಸೇವೆಗಳು ಲಭ್ಯವಾಗಬೇಕು ಎನ್ನುವ ಉದ್ದೇಶದೊಂದಿಗೆ ನಾಡಕಚೇರಿಗಳನ್ನು ತೆರೆಯಲಾಗುತ್ತಿದೆ.

ಗ್ರಾಮಸ್ಥರಿಗೆ ತಾವಿರುವ ಸ್ಥಳದಲ್ಲಿ ಅಥವಾ ಅತ್ಯಂತ ಹತ್ತಿರದಲ್ಲಿಯೇ ತಮಗೆ ಬೇಕಾದ ಸರ್ಕಾರಿ ಸೇವೆಗಳು ದೊರೆತರೆ ದೂರದ ತಾಲ್ಲೂಕು ಕೇಂದ್ರಗಳಿಗೆ ತೆರಳಬೇಕಾದ ಕಷ್ಟ ತಪ್ಪಲಿದೆ. ಇದರಿಂದ ಸಮಯ ಹಾಗೂ ಓಡಾಟದ ವೆಚ್ಚ ಗ್ರಾಮಸ್ಥರಿಗೆ ಉಳಿತಾಯವಾಗಲಿದೆ. 

ಸ್ಥಳೀಯರ ನೇಮಕ
ಹೊಸದಾಗಿ ಸೃಷ್ಟಿಯಾಗುವ ನಾಡಕಚೇರಿಗಳಲ್ಲಿ ಅವಶ್ಯಕತೆ ಇರುವ ಹುದ್ದೆಗಳನ್ನು ನಿರ್ವಹಿಸಲು ಬೇಕಾಗುವ ಜನರನ್ನು ಸ್ಥಳೀಯವಾಗಿಯೇ ನೇಮಕ ಮಾಡಿಕೊಳ್ಳಲು ಸರ್ಕಾರ ಅವಕಾಶ ಕಲ್ಪಿಸಿದೆ. 

ಮುಖ್ಯವಾಗಿ ಕಂಪ್ಯೂಟರ್ ಜ್ಞಾನ ಹೊಂದಿರುವ ಯುವಕ-ಯುವತಿಯರಿಗೆ ಇದರಿಂದ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.

ಇದರೊಂದಿಗೆ ಪ್ರತಿಯೊಂದು ನಾಡಕಚೇರಿಗೆ ಶಿರಸ್ತೇದಾರ್/ ಉಪತಹಶೀಲ್ದಾರ್ ಹುದ್ದೆಗಳನ್ನು ಸಹ ಸೃಷ್ಟಿಸಲಾಗಿದ್ದು, ಇದನ್ನು ಭರ್ತಿ ಮಾಡಲು ಸರ್ಕಾರ ಶೀಘ್ರವೇ ಕ್ರಮ ಕೈಗೊಳ್ಳಲಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.